SK Home Ad
Home ನಮ್ಮ ಜಿಲ್ಲೆ ಬಳ್ಳಾರಿ ಬಳ್ಳಾರಿಯಲ್ಲಿ ಭಾರೀ ಅಕ್ರಮ ಔಷಧ ದಂಧೆ ಬಯಲು: ಔಷಧ ಜಪ್ತಿ

ಬಳ್ಳಾರಿಯಲ್ಲಿ ಭಾರೀ ಅಕ್ರಮ ಔಷಧ ದಂಧೆ ಬಯಲು: ಔಷಧ ಜಪ್ತಿ

0
69
ಬಳ್ಳಾರಿಯಲ್ಲಿ ಮೂರು ಗೋಡೌನ್‌ಗಳ ಮೇಲೆ ದಾಳಿ : ಭಾರೀ ಅಕ್ರಮ ಔಷಧ ದಂಧೆ ಬಯಲು

ಬಳ್ಳಾರಿಯಲ್ಲಿ ಬೃಹತ್ ಅಕ್ರಮ ಔಷಧ ದಂಧೆ ಬಯಲು : ಪರವಾನಗಿ ಇಲ್ಲದೆ ಕೋಟಿಗೂ ಅಧಿಕ ಮೌಲ್ಯದ ಔಷಧ ಸಂಗ್ರಹ; ₹84 ಲಕ್ಷದಷ್ಟು ಔಷಧ ಜಪ್ತಿ

ಬಳ್ಳಾರಿ: ನಗರದ ವಿವಿಧೆಡೆ ಪರವಾನಗಿ ಪಡೆಯದೆ ಬೃಹತ್ ಪ್ರಮಾಣದಲ್ಲಿ ಔಷಧಿಗಳನ್ನು ಸಂಗ್ರಹಿಸಿ, ಕಳ್ಳಸಂತೆಯಲ್ಲಿ ಅರ್ಧ ಬೆಲೆಗೆ ಮಾರಾಟ ಮಾಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಕೋಟಿಗೂ ಅಧಿಕ ಮೌಲ್ಯದ ಔಷಧ ದಂಧೆ ಬಯಲಾಗಿದೆ.

ನಗರದಲ್ಲಿ ‘ಮಹಾವೀರ್ ಮೆಡಿಕಲ್’ ಹೆಸರಿನಲ್ಲಿ ನಡೆಯುತ್ತಿದ್ದ ಎನ್ನಲಾದ ಅಕ್ರಮ ದಂಧೆಗೆ ಸಂಬಂಧಿಸಿದಂತೆ ಸುಮಾರು ಮೂರು ಗೋಡೌನ್‌ಗಳಲ್ಲಿ ಯಾವುದೇ ಪರವಾನಗಿ ಇಲ್ಲದೆ ಸಂಗ್ರಹಿಸಿಟ್ಟಿದ್ದ ಔಷಧಿಗಳನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಈ ಪೈಕಿ ಸುಮಾರು ₹84 ಲಕ್ಷ ಮೌಲ್ಯದ ಔಷಧಿಗಳನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಸಹಾಯಕ ಔಷಧ ನಿಯಂತ್ರಣಾಧಿಕಾರಿ ಮಂಜುಳ ಅವರ ನೇತೃತ್ವದಲ್ಲಿ ಬುಧವಾರ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಸುದೀರ್ಘ ಪರಿಶೀಲನೆ ಹಾಗೂ ದಾಳಿ ನಡೆಸಲಾಗಿದೆ. ಈ ವೇಳೆ ಮಹೇಂದ್ರ ಎಂಬ ವ್ಯಕ್ತಿಗೆ ಸಂಬಂಧಿಸಿದೆ ಎನ್ನಲಾದ ಅನಧಿಕೃತ ಸ್ಟಾಕ್ ಪಾಯಿಂಟ್‌ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಲೈಸನ್ಸ್ ಇಲ್ಲದೆ ಔಷಧ ಸಂಗ್ರಹ : ಔಷಧ ಮಾರಾಟ ಹಾಗೂ ಸಂಗ್ರಹಕ್ಕೆ ಅಗತ್ಯವಿರುವ ಯಾವುದೇ ನೋಂದಣಿ ಅಥವಾ ಪರವಾನಗಿ ಪಡೆಯದೆ ಬೃಹತ್ ಪ್ರಮಾಣದಲ್ಲಿ ಔಷಧಿಗಳನ್ನು ಸಂಗ್ರಹಿಸಲಾಗಿತ್ತು ಎಂಬುದು ಪ್ರಾಥಮಿಕ ಪರಿಶೀಲನೆಯಲ್ಲಿ ಬೆಳಕಿಗೆ ಬಂದಿದೆ. ವಿವಿಧ ಕಂಪನಿಗಳ ಔಷಧಿಗಳು, ಜನರಿಕ್ ಔಷಧಿಗಳು ಹಾಗೂ ಸ್ಯಾಂಪಲ್‌ಗಳನ್ನು ದೊಡ್ಡ ಪ್ರಮಾಣದಲ್ಲಿ ದಾಸ್ತಾನು ಮಾಡಲಾಗಿತ್ತು ಎನ್ನಲಾಗಿದೆ.

ಈ ಔಷಧಿಗಳನ್ನು ಕಡಿಮೆ ಬೆಲೆಗೆ ಪಡೆದು ಅರ್ಧ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು ಎಂಬ ಆರೋಪವೂ ಕೇಳಿಬಂದಿದೆ. ಬಳ್ಳಾರಿ ನಗರ ಮಾತ್ರವಲ್ಲದೆ ಸುತ್ತಮುತ್ತಲಿನ ಹಳ್ಳಿಗಳಿಗೂ ಇವುಗಳನ್ನು ಸರಬರಾಜು ಮಾಡಲಾಗುತ್ತಿತ್ತು ಎನ್ನಲಾಗಿದ್ದು, ಈ ಅಕ್ರಮ ಜಾಲದ ವ್ಯಾಪ್ತಿಯ ಕುರಿತು ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

ಆರ್‌ಎಂಪಿ ವೈದ್ಯರಿಗೆ ಅಕ್ರಮ ಮಾರಾಟ? : ಅನಧಿಕೃತವಾಗಿ ಸಂಗ್ರಹಿಸಿದ್ದ ಔಷಧಿಗಳನ್ನು ನಿಯಮಬಾಹಿರವಾಗಿ ಆರ್‌ಎಂಪಿ ವೈದ್ಯರು ಸೇರಿದಂತೆ ವಿವಿಧೆಡೆಗೆ ಸರಬರಾಜು ಮಾಡಲಾಗುತ್ತಿತ್ತು ಎಂಬ ಆರೋಪವೂ ಕೇಳಿಬಂದಿದೆ. ಔಷಧ ಮಾರಾಟಕ್ಕೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸಿರುವ ಬಗ್ಗೆ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ತೆರಿಗೆ ವಂಚನೆಯ ಶಂಕೆ : ದೊಡ್ಡ ಪ್ರಮಾಣದಲ್ಲಿ ಔಷಧಿಗಳ ವಹಿವಾಟು ನಡೆಸುತ್ತಿದ್ದರೂ ಸರಿಯಾದ ನೋಂದಣಿ ಹಾಗೂ ಪರವಾನಗಿ ಇಲ್ಲದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸರ್ಕಾರಕ್ಕೆ ತೆರಿಗೆ ವಂಚನೆ ನಡೆದಿರುವ ಸಾಧ್ಯತೆಯ ಬಗ್ಗೆಯೂ ಪರಿಶೀಲನೆ ನಡೆಯುತ್ತಿದೆ.

ಪರವಾನಗಿ ಇಲ್ಲದೆ ಕೋಟಿಗೂ ಅಧಿಕ ಮೌಲ್ಯದ ಔಷಧಿಗಳನ್ನು ದಾಸ್ತಾನು ಮಾಡಿಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಆರೋಪ ಗಂಭೀರವಾಗಿದ್ದು, ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಅವಧಿ ಮೀರಿದ, ಮಾದರಿ ಅಥವಾ ನಿಯಮಬಾಹಿರವಾಗಿ ಮಾರಾಟವಾಗುವ ಔಷಧಿಗಳು ಸಾರ್ವಜನಿಕರ ಕೈಗೆ ಸೇರುವ ಅಪಾಯವಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ.

ಮಹೇಂದ್ರ ಎಂಬಾತನಿಗೆ ಸಂಬಂಧಿಸಿದ ಅನಧಿಕೃತ ಸ್ಟಾಕ್ ಪಾಯಿಂಟ್‌ಗಳನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು, ಅವರ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ. ಜಪ್ತಿ ಮಾಡಲಾದ ಔಷಧಿಗಳ ಗುಣಮಟ್ಟ, ಅವಧಿ, ಮೂಲ ಹಾಗೂ ಅವುಗಳನ್ನು ಎಲ್ಲೆಲ್ಲಿಗೆ ಸರಬರಾಜು ಮಾಡಲಾಗುತ್ತಿತ್ತು ಎಂಬುದರ ಕುರಿತು ತನಿಖೆ ಮುಂದುವರಿದಿದೆ.

ಬಳ್ಳಾರಿ ನಗರದಲ್ಲಿ ಇಂತಹ ಅಕ್ರಮ ಔಷಧ ದಂಧೆ ಇನ್ನೂ ಎಲ್ಲೆಲ್ಲಿ ನಡೆಯುತ್ತಿದೆ ಎಂಬುದರ ಕುರಿತು ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ಹೆಚ್ಚಿನ ಪರಿಶೀಲನೆ ನಡೆಸುವ ಸಾಧ್ಯತೆ ಇದೆ.