SK Home Ad
Home ನಮ್ಮ ಜಿಲ್ಲೆ ಚಿತ್ರದುರ್ಗ ಮದುವೆ ಸಂಭ್ರಮದ ಬೆನ್ನಲ್ಲೇ ನವವಧುವಿನ ದುರಂತ ಅಂತ್ಯ

ಮದುವೆ ಸಂಭ್ರಮದ ಬೆನ್ನಲ್ಲೇ ನವವಧುವಿನ ದುರಂತ ಅಂತ್ಯ

0
59

ಚಿತ್ರದುರ್ಗ: ಪ್ರೀತಿಸಿದ ಯುವಕನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೆಲವೇ ಗಂಟೆಗಳಲ್ಲಿ ನವವಿವಾಹಿತೆಯೊಬ್ಬಳು ಶವವಾಗಿ ಪತ್ತೆಯಾಗಿರುವ ದಾರುಣ ಘಟನೆ ತಾಲೂಕಿನ ಎನ್. ಮಹದೇವಪುರ ಗ್ರಾಮದ ಹೊರ ವಲಯದಲ್ಲಿ ನಡೆದಿದೆ.

ಚಳ್ಳಕೆರೆ ತಾಲ್ಲೂಕಿನ ಚಿಕ್ಕ ಉಳ್ಳಾರ್ತಿ ಗ್ರಾಮದ ಕಾರಿನಪಾಲಯ್ಯನಹಟ್ಟಿ ನಿವಾಸಿ ಸುಮಲತಾ (21) ಮೃತ ದುರ್ದೈವಿ. ಸುಮಲತಾ ತನ್ನ ಸಂಬಂಧಿಯೂ ಆಗಿದ್ದ ಗಜೇಂದ್ರ ಎಂಬ ಕುರಿಗಾಹಿಯನ್ನು ಕಳೆದ ಕೆಲ ಕಾಲದಿಂದ ಪ್ರೀತಿಸುತ್ತಿದ್ದಳು. ಇದೇ ವಿಚಾರವಾಗಿ ಕಳೆದ ಗುರುವಾರ ಆಕೆ ತನ್ನ ಸ್ವಗ್ರಾಮದಿಂದ ನಾಪತ್ತೆಯಾಗಿದ್ದಳು.

ತನ್ನ ಸಂಬಂಧಿಕರಾದ ಬೋರೇಶ ಹಾಗೂ ಅಶೋಕ ಎಂಬುವವರ ಜೊತೆ ಬೈಕ್ ಮೂಲಕ ಚಳ್ಳಕೆರೆ-ನಾಯಕನಹಟ್ಟಿ ಮಾರ್ಗವಾಗಿ ಎನ್. ಮಹದೇವಪುರ ಗ್ರಾಮದ ಹೊರವಲಯದಲ್ಲಿದ್ದ ಕುರಿ ದೊಡ್ಡಿಯೊಂದಕ್ಕೆ ಬಂದು ಗುರುವಾರ ರಾತ್ರಿ ಅಲ್ಲಿಯೇ ತಂಗಿದ್ದರು.

ಬಳಿಕ ಶುಕ್ರವಾರ ಮಧ್ಯಾಹ್ನ ಬೋರೇಶ ಮತ್ತು ಅಶೋಕ ಸೇರಿ ರಾಮಸಾಗರದ ಸಮೀಪವಿರುವ ಈಶ್ವರನತಿಪ್ಪೆ ಎಂಬಲ್ಲಿನ ದೇವಸ್ಥಾನದಲ್ಲಿ ಗಜೇಂದ್ರ ಹಾಗೂ ಸುಮಲತಾ ಅವರ ವಿವಾಹವನ್ನು ನೆರವೇರಿಸಿದ್ದರು. ಮದುವೆಯಾದ ಸಂಭ್ರಮದ ಫೋಟೋಗಳನ್ನು ಯುವತಿಯ ಪೋಷಕರಿಗೆ ಹಾಗೂ ಸ್ನೇಹಿತರಿಗೆ ಕಳುಹಿಸಿಕೊಡಲಾಗಿತ್ತು.

ಮದುವೆ ಮುಗಿಸಿಕೊಂಡು ನವದಂಪತಿಗಳು ನೇರವಾಗಿ ಮತ್ತೆ ಅದೇ ಕುರಿದೊಡ್ಡಿ ಬಳಿ ಬಂದಿದ್ದಾರೆ. ಈ ವೇಳೆ ಶೌಚಾಲಯಕ್ಕೆಂದು ಹೋದ ಸುಮಲತಾ ಬಹಳ ಹೊತ್ತಾದರೂ ಹಿಂದಿರುಗಲಿಲ್ಲ. ಆತಂಕಗೊಂಡ ಗಜೇಂದ್ರ ಹಾಗೂ ಆತನ ಸ್ನೇಹಿತರು ಸುತ್ತಮುತ್ತ ಹುಡುಕಾಡಿದರೂ ಆಕೆಯ ಸುಳಿವು ಸಿಗಲಿಲ್ಲ.

ಇತ್ತ ಮಗಳು ನಾಪತ್ತೆಯಾಗಿರುವ ಬಗ್ಗೆ ಸುಮಲತಾಳ ಪೋಷಕರು ಶನಿವಾರ ತಳಕು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಆಕೆ ಗಜೇಂದ್ರನೊಂದಿಗೆ ಹೋಗಿರುವ ಬಗ್ಗೆ ಮಾಹಿತಿ ನೀಡಿದ್ದರು. ಭಾನುವಾರ ಸಂಜೆ ಎನ್. ಮಹದೇವಪುರ ಗ್ರಾಮದ ಕುರಿರೊಪ್ಪದ ಸಮೀಪದ ಪಾಳುಬಿದ್ದ ಬಾವಿಯೊಂದರಲ್ಲಿ ಯುವತಿಯ ಮೃತದೇಹ ಪತ್ತೆಯಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್‌ಕುಮಾರ್ ಬಂಡಾರು ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣವನ್ನು ಮೊಳಕಾಲ್ಮೂರು ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.