ಸಿರಿಗೆರೆ: ಸಿರಿಗೆರೆಯ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ ಹಾಗೂ ಮಠವು ಧರ್ಮದ ಜತೆಗೆ ಶಿಕ್ಷಣ, ನೀರಾವರಿ, ರೈತರು ಹಾಗೂ ಸಮಾಜ ಸೇವೆಯ ಮೂಲಕ ಜನರ ಬದುಕಿನಲ್ಲಿ ಮಹತ್ವದ ಬದಲಾವಣೆ ತರುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಸಿರಿಗೆರೆಯ ತರಳಬಾಳು ಮಠದಲ್ಲಿ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ 35ನೇ ವರ್ಷದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಧಾರ್ಮಿಕ ಸಂಪ್ರದಾಯ ಹಾಗೂ ಸಂಸ್ಕಾರಗಳು ಸಮಾಜಕ್ಕೆ ಅಗತ್ಯ. ಧರ್ಮ ಬೇಡ ಎನ್ನುವವರಿಗೂ ಸಂಸ್ಕಾರಗಳ ಮಹತ್ವವನ್ನು ತಿಳಿಸಿಕೊಡುವ ಶಕ್ತಿ ಧರ್ಮಕ್ಕಿದೆ. ತರಳಬಾಳು ಮಠಕ್ಕೆ ಆಗಮಿಸಿ ಶ್ರೀಗಳ ಆಶೀರ್ವಾದ ಪಡೆಯುವ ಅವಕಾಶ ದೊರೆತಿರುವುದು ತಮ್ಮ ಪಾಲಿಗೆ ಪಾವನವಾದ ಕ್ಷಣ ಎಂದರು.
ʻಸೇವೆ ಎನ್ನುವುದು ಧರ್ಮಕ್ಕೆ ಹೆದ್ದಾರಿʼ ಎಂಬ ಸಂದೇಶವನ್ನು ಮಠವು ನಿರಂತರವಾಗಿ ಸಾರುತ್ತಿದೆ. ತರಳಬಾಳು ಮಠವು ಜಾತ್ಯತೀತ ತತ್ವಕ್ಕೆ ಬದ್ಧವಾಗಿ ಸಮಾಜದ ಎಲ್ಲ ವರ್ಗಗಳ ಜನರಿಗೂ ಸೇವೆ ಸಲ್ಲಿಸುತ್ತಿದೆ. ಸರ್ಕಾರದಿಂದ ಮಾಡಲಾಗದ ಕೆಲವು ಸಾಮಾಜಿಕ ಕಾರ್ಯಗಳನ್ನು ಧಾರ್ಮಿಕ ಮಠಗಳು ಮಾಡುತ್ತಿವೆ. ನ್ಯಾಯದಾನ ಮಾಡುವ ಪರಂಪರೆಯನ್ನೂ ಮಠ ಮುಂದುವರಿಸಿಕೊಂಡು ಬರುತ್ತಿರುವುದು ಗಮನಾರ್ಹ. ಮಠದ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇಲ್ಲಿನ ಶಿಕ್ಷಣದ ವ್ಯಾಪ್ತಿ ಎಷ್ಟೊಂದು ದೊಡ್ಡದಾಗಿದೆ ಎಂದರೆ, ಇಲ್ಲಿನ ವಿದ್ಯಾರ್ಥಿಗಳು ಚಂದ್ರನಲ್ಲಿಯೂ ಇರಬಹುದು ಎಂದು ಅನಿಸುವಷ್ಟು ಮಠದ ಶಿಕ್ಷಣ ಕ್ಷೇತ್ರದ ಇತಿಹಾಸ ವಿಸ್ತಾರವಾಗಿದೆ ಎಂದು ಹೇಳಿದರು.
ರೈತರ ಬದುಕಿಗೆ ನೀರಾವರಿ ಅಗತ್ಯ: ರೈತರ ಬದುಕು ಸುಧಾರಿಸಲು ನೀರಾವರಿ ಅತ್ಯಂತ ಅಗತ್ಯ. ರೈತರಿಗೆ ಲಂಚ, ನಿಗದಿತ ಸಂಬಳ ಅಥವಾ ನಿವೃತ್ತಿ ಎಂಬ ವ್ಯವಸ್ಥೆ ಇಲ್ಲ. ಹೀಗಾಗಿ ರೈತರ ಪರವಾಗಿ ಸರ್ಕಾರ ಬದ್ಧತೆಯಿಂದ ಕೆಲಸ ಮಾಡಲಿದೆ. ರಾಜ್ಯದ ನೀರಾವರಿ ವಿಚಾರದಲ್ಲಿ ತಾವು ನಿರಂತರವಾಗಿ ಪ್ರಯತ್ನಿಸುತ್ತಿದ್ದು, ಕೇಂದ್ರ ಸಚಿವರನ್ನು ಭೇಟಿ ಮಾಡಿ ಚರ್ಚೆ ನಡೆಸಿರುವುದಾಗಿ ತಿಳಿಸಿದರು.
ಕಾವೇರಿ, ಕೃಷ್ಣಾ ಹಾಗೂ ಗೋದಾವರಿ ನದಿಗಳ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಕುರಿತು ಚರ್ಚೆ ನಡೆಯುತ್ತಿದೆ. ರಾಜ್ಯದ ನೀರಾವರಿ ಅಭಿವೃದ್ಧಿಗೆ ಸಂಬಂಧಿಸಿದ ವಿಚಾರಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಕಸ್ತೂರಿ ರಂಗನ್ ವರದಿ ಕುರಿತು ಹಿಂದಿನ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಹಾಗೂ ಸಿದ್ದರಾಮಯ್ಯ ಅವರು ವಿರೋಧ ವ್ಯಕ್ತಪಡಿಸಿದ್ದನ್ನು ಉಲ್ಲೇಖಿಸಿದ ಸಿಎಂ, ಈ ಕುರಿತು ಸಚಿವ ಸಂಪುಟ ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಚಿತ್ರದುರ್ಗ ಜಿಲ್ಲೆಯ ಬರಪೀಡಿತ ಪ್ರದೇಶಗಳಿಗೆ ನೀರು ಹರಿಸುವ ಕಾರ್ಯಕ್ಕೆ ಸರ್ಕಾರ ಆದ್ಯತೆ ನೀಡಿದೆ. ಈಗಾಗಲೇ ಭದ್ರಾ ನೀರು ಚಿತ್ರದುರ್ಗದತ್ತ ಹರಿದಿದ್ದು, ಮುಂಬರುವ ದಿನಗಳಲ್ಲಿ ಜಿಲ್ಲೆಯ ಸಂಪೂರ್ಣ ಬರದ ನಾಡಿಗೆ ನೀರು ಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಶ್ರೀಗಳ ಆಶೀರ್ವಾದ ಸದಾ ಸರ್ಕಾರ ಹಾಗೂ ನಾಡಿನ ಜನರ ಮೇಲಿರಲಿ ಎಂದು ಪ್ರಾರ್ಥಿಸಿದ ಸಿಎಂ, ರೈತರು, ಶಿಕ್ಷಣ, ಧರ್ಮ ಹಾಗೂ ಸಮಾಜ ಸೇವೆಯ ಕ್ಷೇತ್ರಗಳಲ್ಲಿ ತರಳಬಾಳು ಮಠದ ಮಾರ್ಗದರ್ಶನ ಮುಂದುವರಿಯಲಿ ಎಂದು ಆಶಿಸಿದರು.
ಗ್ರಾಮ ಪಂಚಾಯಿತಿಗಳನ್ನೇ ಬರಗಾಲ ನಿರ್ವಹಣಾ ಘಟಕಗಳಾಗಿಸಲಿ: ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಸಿರಿಗೆರೆಯ ತರಳಬಾಳು ಮಠದ ಜಗದ್ಗುರು ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ಬರಗಾಲ ಪರಿಸ್ಥಿತಿಯನ್ನು ಸಮರ್ಪಕವಾಗಿ ಗುರುತಿಸಲು ತಾಲೂಕು ಮಟ್ಟವನ್ನು ಮಾನದಂಡವನ್ನಾಗಿಸುವ ಬದಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಳೆ ಹಾಗೂ ಬೆಳೆ ಪರಿಸ್ಥಿತಿಯನ್ನು ಆಧರಿಸಿ ಸಮೀಕ್ಷೆ ನಡೆಸಿ ಬರಗಾಲ ನಿರ್ಧರಿಸುವ ವ್ಯವಸ್ಥೆ ಜಾರಿಗೆ ಬರಬೇಕು ಎಂದು ಹೇಳಿದರು.
‘ಬಿಸಿಲು ಬೆಳದಿಂಗಳ ಲಾಲಿ ಮೋಡಗಳು ತಾಲೂಕು ನೋಡಿ ಮಳೆ ಸುರಿಸುವುದಿಲ್ಲ’ ಎಂಬ ಲೇಖನವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ತೋರಿಸಿ, ಬರಗಾಲದ ವಾಸ್ತವ ಪರಿಸ್ಥಿತಿಯನ್ನು ಶ್ರೀಗಳು ವಿವರಿಸಿದರು.
ಒಂದೇ ತಾಲೂಕಿನ ಎಲ್ಲ ಗ್ರಾಮಗಳಲ್ಲಿಯೂ ಮಳೆ ಪ್ರಮಾಣ ಮತ್ತು ಬೆಳೆ ಪರಿಸ್ಥಿತಿ ಒಂದೇ ರೀತಿ ಇರುವುದಿಲ್ಲ. ಹೀಗಾಗಿ ತಾಲೂಕನ್ನು ಒಂದು ಘಟಕವಾಗಿ ಪರಿಗಣಿಸುವ ಬದಲು ಗ್ರಾಮ ಪಂಚಾಯಿತಿಯನ್ನು ಬರಗಾಲ ನಿರ್ಧರಿಸುವ ಘಟಕವನ್ನಾಗಿ ಮಾಡಬೇಕು. ಇದರಿಂದ ಬರದಿಂದ ತೊಂದರೆಗೊಳಗಾದ ರೈತರಿಗೆ ಸೂಕ್ತ ಪರಿಹಾರ ಹಾಗೂ ಸರ್ಕಾರದ ನೆರವು ತಲುಪಿಸಲು ಸಾಧ್ಯವಾಗುತ್ತದೆ ಎಂದರು.
ನೀತಿ ಸಂಹಿತಿಗಳು ಕೆಲವು ಸಂದರ್ಭಗಳಲ್ಲಿ ಜನಪರ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲು ಅಡ್ಡಿಯಾಗುತ್ತಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇಂತಹ ಅನಗತ್ಯ ಕಟ್ಟುಪಾಡುಗಳನ್ನು ಪರಿಶೀಲಿಸಿ ರದ್ದುಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ರಾಜಕಾರಣಿಗಳು ನೀತಿ ಸಂಹಿತೆಯ ನೆಪವೊಡ್ಡಿ ಜನಪರ ಕೆಲಸಗಳಿಂದ ಹಿಂದೆ ಸರಿಯುವಂತಾಗಬಾರದು ಎಂದು ಹೇಳಿದರು.
ರಾಜಕಾರಣಿಗಳು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪರಸ್ಪರ ಗೌರವದಿಂದ ನಡೆದುಕೊಳ್ಳುವಂತೆ ಸಂಸತ್ತಿನ ಕಲಾಪಗಳಿಗೂ ಗೌರವ ನೀಡಬೇಕು. ಪಕ್ಷಭೇದ ಮರೆತು ಉತ್ತಮ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸುವ ಮೂಲಕ ರೈತರ ಕಲ್ಯಾಣಕ್ಕೆ ಆದ್ಯತೆ ನೀಡಬೇಕು ಎಂದು ಶ್ರೀಗಳು ಸಲಹೆ ನೀಡಿದರು.
ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಮಾತನಾಡಿ, ನಾಡಿನ ಜನತೆಗೆ ಧಾರ್ಮಿಕ ಆಚರಣೆಗಳ ಜತೆಗೆ ಸಮಾಜಕ್ಕೆ ಮಾರ್ಗದರ್ಶನ ನೀಡಿದ ಪುಣ್ಯಾತ್ಮರಲ್ಲಿ ಶಿವಕುಮಾರ ಶ್ರೀಗಳು ಪ್ರಮುಖರು. ಅವರು ಹಾಕಿಕೊಟ್ಟ ಪರಂಪರೆಯನ್ನು ತರಳಬಾಳು ಶ್ರೀಗಳು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ನ್ಯಾಯಾಲಯ ಹಾಗೂ ಸರ್ಕಾರದ ವ್ಯವಸ್ಥೆಗಳ ಜತೆಗೆ ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಜನತಾ ನ್ಯಾಯಾಲಯದ ಮೂಲಕ ಪರಿಹಾರ ನೀಡುತ್ತಿರುವುದು ವಿಶಿಷ್ಟ ಸೇವೆಯಾಗಿದೆ.
ನೀರಾವರಿ ಯೋಜನೆಗಳಿಗೆ ಎಲ್ಲರ ಸಹಕಾರ ಅಗತ್ಯ: ಅಪ್ಪರ್ ಭದ್ರಾ ಯೋಜನೆಗೆ ಕೇಂದ್ರ ಸರ್ಕಾರ ಘೋಷಿಸಿರುವ ₹5,300 ಕೋಟಿ ಅನುದಾನ ಇನ್ನೂ ಬಿಡುಗಡೆಯಾಗಿಲ್ಲ. ಅಕ್ಟೋಬರ್‌ನಲ್ಲೇ ಹಣ ಬಿಡುಗಡೆಯಾದರೆ ಯೋಜನೆಗೆ ಹೆಚ್ಚಿನ ವೇಗ ದೊರೆಯಲಿದೆ. ಎತ್ತಿನಹೊಳೆ, ಕಳಸಾ-ಬಂಡೂರಿ, ಮಹದಾಯಿ ಸೇರಿದಂತೆ ರಾಜ್ಯದ ವಿವಿಧ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಬದ್ಧವಾಗಿದೆ. ನೀರಾವರಿ ಯೋಜನೆಗಳಿಗೆ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.
ಶಾಸಕ ಎಚ್.ಡಿ. ತಮ್ಮಯ್ಯ ಮಾತನಾಡಿ ಶಿಕ್ಷಣ, ಸಮಾಜ ಸಂಘಟನೆ, ರೈತಪರ ಕಾಳಜಿಯಲ್ಲಿ ಲಿಂ. ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ ಕೊಡುಗೆ ಅಪಾರ. ಶೋಷಿತರು, ಜನಸಾಮಾನ್ಯರನ್ನು ಸಂಘಟಿಸಿ ವಚನ ಚಳವಳಿಗೆ ಉತ್ತೇಜನ ನೀಡಿದ ಅವರು, ಗ್ರಾಮೀಣ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಶಾಲೆಗಳನ್ನು ತೆರೆದರು. ರೈತರಿಗೆ ಅನುಕೂಲವಾಗುವ ನೀರಾವರಿ ಯೋಜನೆಗಳಿಗೆ ಸರ್ಕಾರದ ಗಮನ ಸೆಳೆದರು ಎಂದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ, ಆರ್ಥಿಕವಾಗಿ ಹಿಂದುಳಿದಿದ್ದ ಸಿರಿಗೆರೆ ಮಠವನ್ನು ಸಬಲಗೊಳಿಸಿ, ಸಮಾಜವನ್ನು ಸಾಕ್ಷರತೆಯತ್ತ ಕೊಂಡೊಯ್ದ ಲಿಂ. ಶಿವಕುಮಾರ ಶ್ರೀಗಳು ಮಹಾನ್ ಚೇತನರಾಗಿದ್ದರು. ಅವರ ಕ್ರಿಯಾಶೀಲತೆ, ಜ್ಞಾನ ಮತ್ತು ಏಕತೆಯ ಆಶಯಗಳನ್ನು ಸಮಾಜ ಮುಂದುವರಿಸಬೇಕು ಎಂದರು.
ಶಾಸಕ ಹೆಚ್.ಡಿ. ತಮ್ಮಯ್ಯ, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿದರು.
ತರಳಬಾಳು ಪ್ರಕಾಶನದ ಸಾಹಿತ್ಯ ಸಿರಿ ಮಾಲಿಕೆಯ ಕೃತಿಗಳು, ಭದ್ರಾವತಿ ತರಳಬಾಳು ಹುಣ್ಣಿಮೆ ಸ್ಮರಣ ಸಂಚಿಕೆ 2026 ಕೃತಿಗಳು ಲೋಕಾರ್ಪಣೆಗೊಂಡವು. ತರಳಬಾಳು ಕಲಾಸಂಘದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಕಾರ್ಯಕ್ರಮದಲ್ಲಿ ಶ್ರೀಮನ್ ಸಾಧು ಸದ್ಧರ್ಮ ವೀರಶೈವ ಸಂಘ ಅಧ್ಯಕ್ಷರಾದ ಎಚ್.ಆರ್. ಬಸವರಾಜಪ್ಪ ಅಧ್ಯಕ್ಷತೆ ವಹಿಸಲಿದ್ದು, ಸಚಿವರಾದ ಕೆ.ಎಸ್. ಬಸವಂತಪ್ಪ, ಟಿ. ರಘುಮೂರ್ತಿ, ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ, ಜಿ.ಎಂ. ಸಿದ್ಧೇಶ್ವರ, ಶಾಸಕರಾದ ಯು.ಬಿ. ಬಣಕಾರ್, ಡಿ.ಜಿ. ಶಾಂತನಗೌಡ, ಡಾ.ಎಂ. ಚಂದ್ರಪ್ಪ, ಶಿವಗಂಗಾ ಬಸವರಾಜ್, ಬಿ. ದೇವೇಂದ್ರಪ್ಪ, ವೀರೇಂದ್ರಪಪ್ಪಿ, ಮಾಜಿ ಸಚಿವ ಹೆಚ್. ಆಂಜನೇಯ, ಮಾಜಿ ಸಂಸದ ಚಂದ್ರಪ್ಪ, ಎಸ್.ಆರ್. ಪಾಟೀಲ್, ಪಿ.ರಘು, ಡಾ. ಬಸವರಾಜ ನೆಲ್ಲಿಸರ ಭಾಗವಹಿಸಿದ್ದರು.






















