ಮೂವತ್ತು ವರ್ಷ ಸೇವೆಗೆ ಸಿಗದ ಬಡ್ತಿ : ನನಸಾಗದ ಪ್ರಾಂಶುಪಾಲರಾಗುವ ಉಪನ್ಯಾಸಕರ ಕನಸು – ಸಿದ್ದು, ಖರ್ಗೆ ಪತ್ರಕ್ಕೂ ಕಿಮ್ಮತ್ತಿಲ್ಲ
ಈ.ಮಹೇಶಬಾಬು
ಸಂ.ಕ.ಸಮಾಚಾರ, ಚಿತ್ರದುರ್ಗ : ಗುರು ಬ್ರಹ್ಮ, ಗುರು ವಿಷ್ಣು ಎಂಬ ಗೌರವಕ್ಕೆ ಪಾತ್ರರಾಗಿರುವ ಉಪನ್ಯಾಸಕರು ತಮಗೆ ನ್ಯಾಯಯುತವಾಗಿ ದೊರೆಯಬೇಕಾದ ಹಕ್ಕುಗಳು ಲಭಿಸದೆ ನಿವೃತ್ತಿ ಹೊಂದುತ್ತಲೇ ಇದ್ದು, ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಸೇರಿ 30 ವರ್ಷಗಳ ಕಾಲ ಸೇವೆ ಸಲ್ಲಿಸಿ ಪ್ರಾಂಶುಪಾಲ ಬಡ್ತಿ ಹೊಂದುವ ಉಪನ್ಯಾಸಕರುಗಳ ಕನಸು ನನಸಾಗುತ್ತಿಲ್ಲ.
ರಾಜ್ಯದ ಸರ್ಕಾರಿ ಕಾಲೇಜ್‌ಗಳಲ್ಲಿ 7,500, ಅನುದಾನಿತ ಕಾಲೇಜ್‌ಲ್ಲಿ 3,700 ಉಪನ್ಯಾಸಕರಿದ್ದು, ಇವರಲ್ಲಿ ಮುಂಬಡ್ತಿಗಾಗಿ 400 ಮಂದಿ ಸಿಆರ್ ಸಲ್ಲಿಸಿದ್ದು, ಇವರಲ್ಲಿ ಪ್ರತಿ ತಿಂಗಳು 10ಕ್ಕಿಂತಲೂ ಹೆಚ್ಚು ಮಂದಿ ನಿವೃತ್ತಿ ಆಗುತ್ತಿದ್ದಾರೆ. ನೂರಾರು ಪ್ರಾಂಶುಪಾಲರ ಹುದ್ದೆ ಖಾಲಿಯಿದ್ದರೂ ಬಡ್ತಿ ನೀಡುವಲ್ಲಿ ಆಡಳಿತ ಯಂತ್ರ ವಿಳಂಬ ಮಾಡುತ್ತಿದ್ದು, ತಮ್ಮದಲ್ಲದ ತಪ್ಪಿಗೆ ಉಪನ್ಯಾಸಕ ಹುದ್ದೆಯಲ್ಲೇ ನಿವೃತ್ತಿ ಹೊಂದುತ್ತಿದ್ದಾರೆ.
ಇದು ಒಬ್ಬಿಬ್ಬರ ಕಥೆಯಲ್ಲ. ರಾಜ್ಯದಾದ್ಯಂತ ನೂರಾರು ಹಿರಿಯ ಉಪನ್ಯಾಸಕರು ಇದೇ ನೋವಿನಲ್ಲಿದ್ದಾರೆ. 2016ರಿಂದ ಮೀಸಲಾತಿ ಪಟ್ಟಿ ಸರಿಯಾಗಿ ಪಾಲನೆಯಾಗದೆ 80 ಪ್ರಾಂಶುಪಾಲರ ಹುದ್ದೆಗಳನ್ನು ವಂಚಿಸಲಾಗಿದೆ ಎಂಬ ಸತ್ಯವನ್ನು ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರು, ಪಿಯು ಶಿಕ್ಷಣ ಇಲಾಖೆ ಅಧಿಕಾರಿಗಳು ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಬಹಿರಂಗವಾಗಿದೆ.
ವರದಿ ಒಪ್ಪಿಕೊಳ್ಳಲ್ಲ, ಒಂದು ಹುದ್ದೆಯೂ ಕೊಡಲು ಬರುವುದಿಲ್ಲ ಎಂಬ ಹಠ ಇಲಾಖೆ ಮಾಡುತ್ತಿದೆ. ಈ ಮಧ್ಯೆ ಸಮಾಜ ಕಲ್ಯಾಣ ಇಲಾಖೆಯ ವರದಿಯನ್ನು ಅನುಷ್ಠಾನಗೊಳಿಸುವಂತೆ ಕಲ್ಯಾಣ ಸಮಿತಿ ತಾಕೀತು ಮಾಡುತ್ತಲೇ ಇದೆ. ವರದಿ ಜಾರಿಗೊಂಡಿದ್ದಲ್ಲಿ 90 ಅರ್ಹ ಉಪನ್ಯಾಸಕರು ಜುಲೈ 2026ರಲ್ಲಿ ಪ್ರಾಂಶುಪಾಲರಾಗಿ ಬಡ್ತಿ ಪಡೆದು ನಿವೃತ್ತರಾಗಬೇಕಿತ್ತು. ಆದರೆ, ಅರ್ಹರಿಗೆ ಬಡ್ತಿ ಇಲ್ಲ, ಅನುಭವಕ್ಕೆ ಬೆಲೆ ಇಲ್ಲ, ಸೇವಾ ಹಿರಿತನಕ್ಕೆ ಗೌರವಿಲ್ಲದಂತಾಗಿದೆ ಎಂಬಂತಾಗಿದೆ.
ಇದು ಕೇವಲ ಆಡಳಿತದ ಲೋಪವಲ್ಲ. 10 ವರ್ಷಗಳಿಂದ ರೋಸ್ಟರ್ ಬಿಂದು ಅನುಸರಿಸದೆ, ಮೀಸಲಾತಿ ಪಟ್ಟಿ ಜಾರಿ ಮಾಡದೆ ಇರುವುದು ಸಂವಿಧಾನಾತ್ಮಕ ಹಕ್ಕು ಉಲ್ಲಂಘನೆ ಆಗಿದೆಯೆಂಬುದು ಉಪನ್ಯಾಸಕರ ಆಕ್ರೋಶ. ಸೇವಾವಧಿ ಅಂಚಿನಲ್ಲಿ ಒಂದಿಷ್ಟು ದಿನ ಪ್ರಾಂಶುಪಾಲ ಕುರ್ಚಿಯಲ್ಲಿ ಕುಳಿತು ಕಾರ್ಯನಿರ್ವಹಿಸಬೇಕೆಂಬ ಆಸೆ ಸಹಜ.
ಡಿಸೆಂಬರ್ 2025ರಲ್ಲಿ ಇಲಾಖೆ ಗೌಪ್ಯ ವರದಿ ಕೇಳಿದಾಗ ಆಸೆಗೆ ಜೀವ ಬಂದಿತ್ತು. ಆದರೆ, ಆಗಸ್ಟ್ 2026 ಬಂದರೂ ಬಡ್ತಿ ಭಾಗ್ಯ ದೊರೆಯುತ್ತಿಲ್ಲ. ಈ ಅನ್ಯಾಯ ಸರಿಪಡಿಸುವಂತೆ 2025 ಜುಲೈ ತಿಂಗಳಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಬರೆದಿದ್ದು, ಇದಕ್ಕೆ ಸ್ಪಂದಿಸಿದ್ದ ಮುಖ್ಯಮಂತ್ರಿ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಲಿಖಿತ ಸೂಚನೆ ನೀಡಿದ್ದರೂ ಕಾರ್ಯರೂಪಕ್ಕೆ ಬಂದಿಲ್ಲ. ಈಗಿನ ಸಿಎಂ ಡಿ.ಕೆ.ಶಿವಕುಮಾರ್ ಅವರಾದರೂ ಕ್ರಮಕೈಗೊಳ್ಳಬೇಕಿದೆ.
ಸದನದಲ್ಲಿ ಧ್ವನಿಯೆತ್ತಲಿ : ಶಿಕ್ಷಕ ಕ್ಷೇತ್ರದಿಂದ ಆಯ್ಕೆಯಾದ ವಿಧಾನ ಪರಿಷತ್ ಸದಸ್ಯರು ನ್ಯಾಯ ದೊರಕಿಸಿಕೊಡಬೇಕಿದೆ. ಅಧಿಕಾರಿಗಳೊಂದಿಗೆ ಚರ್ಚಿಸಿ ಬಡ್ತಿ ಕೊಡಿಸಲು ಶ್ರಮಿಸಬೇಕು. ಮುಖ್ಯವಾಗಿ ವಿಧಾನಸಭೆ ಅಧಿವೇಶದಲ್ಲಿ ಧ್ವನಿಯೆತ್ತಬೇಕು.
ಹಕ್ಕೋತ್ತಾಯ : ಪ್ರಾಂಶುಪಾಲರ ನೇಮಕಕ್ಕೆ ಪ್ರತ್ಯೇಕ ನಿಗದಿತ ಕಾಲಮಿತಿಯ ವೃಂದದ ಬಡ್ತಿ ನಿಯಮ ರೂಪಿಸಬೇಕು. ಪ್ರತಿ ಆರು ತಿಂಗಳಿಗೊಮ್ಮೆ ಮೀಸಲಾತಿ ಪಟ್ಟಿ ಲೆಕ್ಕ ಪರಿಶೋಧನೆ ಮಾಡಿ ಸಾರ್ವಜನಿಕವಾಗಿ ಪ್ರಕಟಿಸಬೇಕು. ಬಡ್ತಿ ತಪ್ಪಿದ್ದರಿಂದ ನಷ್ಟವಾದ ವೇತನ ಮತ್ತು ನಿವೃತ್ತರಾದವರ ಪಿಂಚಣಿ ವ್ಯತ್ಯಾಸವನ್ನು ಬಾಕಿ ಸಹಿತ ನೀಡಬೇಕು. ನಿವೃತ್ತರಾದವರನ್ನು ಗೌರವ ಪ್ರಾಂಶುಪಾಲರೆಂದು ಪರಿಗಣಿಸಬೇಕು. ಸಮಾಜ ಕಲ್ಯಾಣ ಇಲಾಖೆ, ಕಲ್ಯಾಣ ಸಮಿತಿ ಮತ್ತು ಪಿಯು ಶಿಕ್ಷಣ ಇಲಾಖೆಯ ಜಂಟಿ ಸಮಿತಿ ರಚಿಸಿ ಪ್ರತಿ ತಿಂಗಳು ಪ್ರಗತಿ ಪರಿಶೀಲಿಸಬೇಕು.






















