SK Home Ad
Home ನಮ್ಮ ಜಿಲ್ಲೆ ಕೋಲಾರ 7ನೇ ಗ್ಯಾರಂಟಿ ಮೂಲಕ ಕೋಲಾರ, ಚಿಕ್ಕಬಳ್ಳಾಪುರಕ್ಕೆ ಎತ್ತಿನಹೊಳೆ ನೀರು

7ನೇ ಗ್ಯಾರಂಟಿ ಮೂಲಕ ಕೋಲಾರ, ಚಿಕ್ಕಬಳ್ಳಾಪುರಕ್ಕೆ ಎತ್ತಿನಹೊಳೆ ನೀರು

0
8

ಕೋಲಾರ: “ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಯೋಜನೆಗಳ ಜತೆಗೆ ಆರನೇ ಗ್ಯಾರಂಟಿಯಾಗಿ ಭೂ ಗ್ಯಾರಂಟಿ ಹಾಗೂ ಏಳನೇ ಗ್ಯಾರಂಟಿಯಾಗಿ ನೀರಿನ ಗ್ಯಾರಂಟಿ ನೀಡುತ್ತಿದೆ. ಇದರ ಮೂಲಕ 2027ರ ಅಂತ್ಯದ ವೇಳೆಗೆ ಕೋಲಾರ ಹಾಗೂ ಚಿಕ್ಕಬಳ್ಳಾಪುರಕ್ಕೆ ಎತ್ತಿನಹೊಳೆ ನೀರು ಹರಿಸಲು ಸರ್ಕಾರ ಸಂಕಲ್ಪ ಮಾಡಿದೆ” ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನಲ್ಲಿ ನಡೆದ ವಿವಿಧ ಇಲಾಖೆಗಳ ಅಭಿವೃದ್ಧಿಯ ಯೋಜನೆಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಚಾಲನೆ ನೀಡಿ ಮಾತನಾಡಿದರು.

“ಎತ್ತಿನಹೊಳೆ ಯೋಜನೆ ಸಾಧ್ಯವಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷರು ಲೇವಡಿ ಮಾಡುತ್ತಿದ್ದಾರೆ. ಯಾವುದು ಸುಲಭವಾಗಿ ಸಿಗುವುದಿಲ್ಲ. ಈ ಯೋಜನೆ ಕಷ್ಟವಾಗಿದೆ. ಆದರೆ ಪ್ರಯತ್ನ ಮಾಡಬೇಕಲ್ಲವೇ? ಪಶ್ಚಿಮ ಘಟ್ಟದಿಂದ ಹಾಸನದ ಮೂಲಕ ಕೋಲಾರ, ಚಿಕ್ಕಬಳ್ಳಾಪುರ ಕೆರೆಗಳನ್ನು ತುಂಬಿಸಲಾಗುವುದು. ತುಮಕೂರುವರೆಗೂ ನೀರು ತರುವ ಪ್ರಯತ್ನ ಮಾಡಲಾಗಿದೆ. ಈಗಾಗಲೇ ನಾವು ಕೆಸಿ ವ್ಯಾಲಿ ಯೋಜನೆ ಮೂಲಕ 104 ಕೆರೆಗಳಿಗೆ ನೀರು ತುಂಬಿಸಲಾಗಿದೆ. ಹೆಚ್.ಎನ್ ವ್ಯಾಲಿ 65 ಕೆರೆ ತುಂಬಿಸುವ ಕೆಲಸ ನಡೆಯುತ್ತಿದೆ. 700ಕ್ಕೂ ಹೆಚ್ಚು ಕೆರೆಗಳಲ್ಲಿ ಸಂಸ್ಕರಿಸಿದ ನೀರನ್ನು ತುಂಬಿಸಲು ಮುಂದಾಗಿದ್ದೇವೆ. ಅಂತರ್ಜಲ ಹೆಚ್ಚಿಸಬೇಕು, ಕೆರೆಗಳಿಗೆ ಹಾಗೂ ರೈತರಿಗೆ ನೀರು ತಲುಪಬೇಕು. ಹೀಗಾಗಿ ಆಗಸ್ಟ್ 15ರಂದು ನಮ್ಮ ಸರ್ಕಾರ ಹಮ್ಮಿಕೊಂಡಿರುವ ಯೋಜನೆಗಳನ್ನು ಪ್ರಕಟಿಸಲಿದ್ದೇವೆ. ಜಲ ಜೀವಕ್ಕೆ ನೆಮ್ಮದಿ, ನೀರಿಲ್ಲದೆ ಬದುಕಿಲ್ಲ. ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜನರ ನೀರಿನ ಸಮಸ್ಯೆಗೆ ವಿವಿಧ ರೀತಿಯ ಕಾರ್ಯಕ್ರಮ ರೂಪಿಸಲಾಗಿದೆ” ಎಂದು ತಿಳಿಸಿದರು.

ಕೋಲಾರ ಭಾಗದ ರೈತರು, ರಾಜ್ಯಕ್ಕೆ ಮಾದರಿ: “ಈ ಜಿಲ್ಲೆಯ ರೈತರನ್ನು ರಾಜ್ಯದ ಜನತೆ ಸ್ಮರಿಸಬೇಕು. ಇಲ್ಲಿ ಅಂತರ್ಜಲ ನೀರಿನ ಮಟ್ಟ 2 ಸಾವಿರ ಅಡಿಗೆ ಕುಸಿದಾಗ ರೈತರು ಆತ್ಮಹತ್ಯೆ ಮಾಡಿಕೊಳ್ಳದೇ ಬೆಂಗಳೂರಿಗೆ ಹಾಲು, ತರಕಾರಿ, ರೇಷ್ಮೆ, ಹೂ ಬೆಳೆದು ತಮ್ಮ ಸ್ವಾಭಿಮಾನ ಮೆರೆದಿದ್ದಾರೆ. ಹೋರಾಟವಿಲ್ಲದೆ ಪ್ರಗತಿ ಸಾಧ್ಯವಿಲ್ಲ. ಬದಲಾವಣೆಗಳು ಅವಕಾಶ ಸೃಷ್ಟಿಸುತ್ತವೆ. ಒಳ್ಳೆಯದನ್ನು ಉಳಿಸಿಕೊಳ್ಳಲು ಕೆಟ್ಟವರ ಜೊತೆ ಹೋರಾಟ ಮಾಡಬೇಕು. ರೈತರ ಕಣ್ಣೀರು ಒರೆಸುವ ಸರ್ಕಾರ ನಿಮ್ಮ ಮುಂದೆ ನಿಂತಿದೆ. ಕೃಷಿ ನಿಮ್ಮೆಲ್ಲರ ಸಂಸ್ಕೃತಿ, ರೈತರು ನಮ್ಮೆಲ್ಲರ ಆಸ್ತಿ” ಎಂದು ಬಣ್ಣಿಸಿದರು.

ಮತದಾನದ ಹಕ್ಕು ಉಳಿಸಿಕೊಳ್ಳಿ: “ನನ್ನದು ಹೊಸ ಸರ್ಕಾರ ಅಲ್ಲ. ಸಿದ್ದರಾಮಯ್ಯ ನೇತೃತ್ವದಲ್ಲಿ 3 ವರ್ಷ ನಡೆದ ಸರ್ಕಾರದ ಮುಂದುವರಿದ ಭಾಗ. ರಾಜ್ಯದಲ್ಲಿ ಎಸ್ಐಆರ್ ನಡೆಯುತ್ತಿದೆ. ನೀವು ನಿಮ್ಮ ಮತ ಉಳಿಸಿಕೊಳ್ಳದಿದ್ದರೆ, ನೀವು ಅನೇಕ ಯೋಜನೆಗಳಿಂದ ವಂಚಿತರಾಗುತ್ತೀರಿ. ನಿಮ್ಮ ಮತ ನಿಮ್ಮ ಹಕ್ಕು. ನಿಮ್ಮ ಹಕ್ಕನ್ನು ಉಳಿಸಿಕೊಳ್ಳಿ. ಕರಡುಪಟ್ಟಿಯಲ್ಲಿ 1 ಕೋಟಿಗೂ ಹೆಚ್ಚು ಹೆಸರು ತೆಗೆಯಲಾಗುತ್ತಿದೆ. ನಿಮ್ಮ ಜಾತಿ ಪ್ರಮಾಣಪತ್ರ, ವಾಸ ದೃಢೀಕರಣ ಪತ್ರ ನೀಡಲು ಸರ್ಕಾರ ಮುಂದಾಗಿದೆ. ಸರ್ಕಾರ ಚುನಾವಣಾ ಆಯೋಗದ ಜತೆ ಕೈಜೋಡಿಸಲಿದೆ” ಎಂದು ಹೇಳಿದರು.

ಹುಂಡಿ ಕಳ್ಳರಿಗೆ ತಕ್ಕ ಶಿಕ್ಷೆ ನೀಡಿ: “ಈ ದೇಶದಲ್ಲಿ ಮತ ಕಳ್ಳತನ ನಡೆಯಿತು, ಹುಂಡಿ ಕಳ್ಳತನವೂ ಆಗಿದೆ. ನಮ್ಮ ಜನ ರಾಮ, ರಾಮ ಎಂದು ದೇಣಿಗೆ ಕೊಟ್ಟರು. ಅದನ್ನು ಕಳ್ಳತನ ಮಾಡಿದ್ದಾರೆ. ಹೀಗಾಗಿ ನಮ್ಮ ಸರ್ಕಾರ ಹುಂಡಿ ಹಾಗೂ ನಿಮ್ಮ ಕಾಣಿಕೆ ಕಾಪಾಡಲು ದೊಡ್ಡ ದೇವಾಲಯಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಅದನ್ನು ಪೊಲೀಸ್ ಠಾಣೆಗೆ ಸಂಪರ್ಕ ಕಲ್ಪಿಸಲಾಗಿದೆ. ಈ ವಿಚಾರದಲ್ಲಿ ನೀವು ಹೋರಾಟ ಮಾಡಿ ತೀರ್ಪು ನೀಡಬೇಕು. ದೇವರ ಹುಂಡಿಗೆ ಕೈಹಾಕಿದವರಿಗೆ ತಕ್ಕ ಶಿಕ್ಷೆ ನೀಡಬೇಕು” ಎಂದು ಕರೆಕೊಟ್ಟರು.

ಯುವಕರಿಗಾಗಿ ಕಾರ್ಯಕ್ರಮ: “ರಾಜ್ಯದಲ್ಲಿ ಯುವಕರಿಗೆ ಸಾಂಸ್ಕೃತಿಕ ಚಟುವಟಿಕೆ, ಕ್ರೀಡೆ, ಜಾತ್ಯಾತೀತ ಮನೋಭಾವ, ನಾಯಕತ್ವ ಗುಣ ಬೆಳೆಸಲು ಪಂಚಾಯ್ತಿ ಹಾಗೂ ವಾರ್ಡ್ ಮಟ್ಟದಲ್ಲಿ ಭಾರತ ಜೋಡೋ ಯುವ ಶಕ್ತಿ ಸಂಘ ರಚಿಸಲು ಮುಂದಾಗಿದ್ದೇವೆ. ಈ ಸಂಘದಲ್ಲಿ 16-40 ವರ್ಷದ ಯುವಕರು ಸದಸ್ಯರಾಗಬಹುದು. ಪ್ರತಿ ಸಂಘಕ್ಕೆ ವಾರ್ಷಿಕ 10 ಲಕ್ಷದಂತೆ ಒಟ್ಟು 1 ಸಾವಿರ ಕೋಟಿ ಅನುದಾನ ಮೀಸಲಿಡಲಾಗಿದೆ. ಪಂಚಾಯಿತಿ ಮಟ್ಟದಲ್ಲಿ ಗ್ಯಾರಂಟಿ ಸಮಿತಿ ರಚಿಸಲಾಗಿದೆ. ಮೂಲಕ ಫಲಾನುಭವಿಗಳ ಜತೆ ಸಂಪರ್ಕ ಸಾಧಿಸಲು ಅವಕಾಶ ಕಲ್ಪಿಸಲಾಗಿದೆ. ಆರು ಜನ ಸಮಿತಿಯಲ್ಲಿ ಹಿಂದುಳಿದವರು, ಅಲಪಸಂಖ್ಯಾತರು, ಪರಿಶಿಷ್ಟರು, ಮಹಿಳೆಯರಿಗೆ ಅವಕಾಶ ನೀಡಲಾಗುವುದು” ಎಂದರು.

“ಖಾಸಗಿ ಕಂಪನಿಗಳಲ್ಲಿ ಯುವಕರಿಗೆ ಉದ್ಯೋಗ ನೀಡಲು ಸರ್ಕಾರ ಉದ್ಯೋಗ ವಿನಿಮಯ ಕೇಂದ್ರ ಸ್ಥಾಪಿಸಲು ಮುಂದಾಗಿದೆ. ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಪಡೆಯಲು ಯುವಕರಿಗೆ ಅಗತ್ಯ ತರಬೇತಿ ನೀಡಲಾಗುವುದು. 72 ಸಾವಿರ ಸರ್ಕಾರಿ ಹುದ್ದೆಗಳ ಭರ್ತಿಗೆ ಸರ್ಕಾರ ಮುಂದಾಗಿದೆ. ನಮ್ಮ ಸರ್ಕಾರದಲ್ಲಿ ಕೇವಲ ನಾನು ಹಾಗೂ ಸಿದ್ದರಾಮಯ್ಯ ಅವರು ಮಾತ್ರ ಸಾಧನೆ ಮಾಡಿಲ್ಲ. ನಮ್ಮ ಸರ್ಕಾರದಲ್ಲಿ ನಮ್ಮ ಸಚಿವರು ತಮ್ಮ ಇಲಾಖೆಗಳಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದ್ದಾರೆ” ಎಂದರು.

ಎಲ್ಲಾ ಶಾಸಕರೂ ಮುಖ್ಯಮಂತ್ರಿ, ಸಚಿವರೇ: “ಜಿಲ್ಲೆಯ ಎಲ್ಲಾ ಶಾಸಕರು ಆಧಾರ ಸ್ತಂಭವಾಗಿದ್ದಾರೆ. ಒಗ್ಗಟ್ಟಿನಲ್ಲಿ ಬಲವಿದೆ. ಮಂತ್ರಿ ಮಂಡಲದಲ್ಲಿ ಜಿಲ್ಲೆಗೆ ಸಚಿವ ಸ್ಥಾನ ನೀಡಲು ಆಗಿಲ್ಲ. ಆದರೆ ಈ ಜಿಲ್ಲೆಯ ಪ್ರತಿ ಶಾಸಕರೂ ಮುಖ್ಯಮಂತ್ರಿಗಳು ಹಾಗೂ ಸಚಿವರುಗಳು. ಅವರಿಗೆ ಶಕ್ತಿ ತುಂಬುವ ಕೆಲಸ ನಾನು ಮಾಡುವೆ. ಅದು ನನ್ನ ಕರ್ತವ್ಯ. ಸರ್ಕಾರ ನಿಮ್ಮ ಮನೆ ಬಾಗಿಲಿಗೆ ಬರಲಿದೆ. ಜಿಲ್ಲಾ ಮಂತ್ರಿಗಳು ಪ್ರತಿ ತಾಲ್ಲೂಕಿನಲ್ಲಿ 15 ದಿನಕ್ಕೊಮ್ಮೆ ಜನರ ಅಹವಾಲು ಸ್ವೀಕರಿಸಲಿದ್ದಾರೆ. ಶಾಸಕರು ಪಂಚಾಯಿತಿಗಳಿಗೆ ಹೋಗಿ ಜನರ ಸಮಸ್ಯೆ ಆಲಿಸಬೇಕು. ಅದಕ್ಕಾಗಿ ಪ್ರಜಾಸೇವೆ ಇಲಾಖೆ ಪ್ರಾರಂಭಿಸುತ್ತಿದ್ದೇವೆ” ಎಂದರು.