SK Home Ad
Home ಸುದ್ದಿ ರಾಜ್ಯ SIR: ಬಿಎಲ್ಒ ಮನೆ-ಮನೆ ಭೇಟಿ 17ರವರೆಗೆ ವಿಸ್ತರಣೆ

SIR: ಬಿಎಲ್ಒ ಮನೆ-ಮನೆ ಭೇಟಿ 17ರವರೆಗೆ ವಿಸ್ತರಣೆ

0
2

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯ ಅಂಗವಾಗಿ ಬೂತ್ ಮಟ್ಟದ ಅಧಿಕಾರಿಗಳ ಮನೆ-ಮನೆ ಭೇಟಿ ಅವಧಿ ಆಗಸ್ಟ್‌ 17ರವರೆಗೆ ರಾಜ್ಯ ಚುನಾವಣಾ ಆಯೋಗ ವಿಸ್ತರಿಸಿದೆ.

ಪರಿಷ್ಕೃತ ವೇಳಾಪಟ್ಟಿಯಂತೆ, ಮತಗಟ್ಟೆಗಳ ತಾರ್ಕಿಕ ಮರುಹೊಂದಾಣಿಕೆ ಕಾರ್ಯವು ಆಗಸ್ಟ್‌ 18ರಿಂದ ಆರಂಭವಾಗಲಿದೆ. ಬಳಿಕ ಕರಡು ಮತದಾರರ ಪಟ್ಟಿ ಆಗಸ್ಟ್‌ 24ರಂದು ಪ್ರಕಟಿಸಲಾಗುವುದು. ಕರಡು ಪಟ್ಟಿಗೆ ಸಂಬಂಧಿಸಿದಂತೆ ಹೆಸರು ಸೇರ್ಪಡೆ, ತಿದ್ದುಪಡಿ, ಹೆಸರು ತೆಗೆದುಹಾಕುವಿಕೆ ಸೇರಿದಂತೆ ಆಕ್ಷೇಪಣೆಗಳು ಹಾಗೂ ಹಕ್ಕು-ದಾವೆಗಳನ್ನು ಸಲ್ಲಿಸಲು ಆಗಸ್ಟ್‌ 24ರಿಂದ ಸೆಪ್ಟೆಂಬರ್ 23ರವರೆಗೆ ಅವಕಾಶ ಕಲ್ಪಿಸಲಾಗಿದೆ.

ಸ್ವೀಕರಿಸಲಾದ ಅರ್ಜಿಗಳು ಮತ್ತು ಆಕ್ಷೇಪಣೆಗಳ ಪರಿಶೀಲನೆ ಹಾಗೂ ವಿಲೇವಾರಿ ಪ್ರಕ್ರಿಯೆಯು ಆಗಸ್ಟ್‌ 24ರಿಂದ ಅಕ್ಟೋಬರ್ 22ರವರೆಗೆ ನಡೆಯಲಿದೆ. ಎಲ್ಲಾ ಪರಿಶೀಲನಾ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಅಂತಿಮ ಮತದಾರರ ಪಟ್ಟಿ ಅಕ್ಟೋಬರ್ 27ರಂದು ಪ್ರಕಟಿಸಲಾಗುವುದು ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ.

ಮತದಾರರು ಕರಡು ಪಟ್ಟಿ ಪ್ರಕಟವಾದ ಬಳಿಕ ತಮ್ಮ ಹೆಸರು, ವಿಳಾಸ ಹಾಗೂ ಇತರ ವಿವರ ಪರಿಶೀಲಿಸಿ, ಅಗತ್ಯ ತಿದ್ದುಪಡಿಗಳಿದ್ದರೆ ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸುವಂತೆ ಆಯೋಗ ಮನವಿ ಮಾಡಿದೆ.

ರೋಲ್ ಬ್ಯಾಕ್ಸ್‌ಗೆ ಸದಾವಕಾಶ: ವೇಳಾಪಟ್ಟಿ ವಿಸ್ತರಣೆ ಆದ ಹಿನ್ನೆಲೆಯಲ್ಲಿ ರೋಲ್ ಬ್ಯಾಕ್ಗೆ ಮತ್ತಷ್ಟು ಸಮಯ ಸಿಗಲಿದೆ. ಮತದಾರರೊಬ್ಬರು ತಪ್ಪಾಗಿ ಎಎಸ್‌ಡಿಡಿಒ ವರ್ಗಕ್ಕೆ ಸೇರಿಸಲ್ಪಟ್ಟಿದ್ದರೆ, ಅಂತಹ ಮತದಾರರು ಆಗಸ್ಟ್‌ 17ರ ವರೆಗೆ ತಮ್ಮ ಬಿಎಲ್ಒ ಅಥವಾ ಇಆರ್‌ಒ ಅವರನ್ನು ಸಂಪರ್ಕಿಸಿ ತಮ್ಮ ಹೆಸರನ್ನು ಮರುಸೇರ್ಪಡೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಡಿಇಒಗಳಿಗೆ 11 ಅಂಶಗಳ ಕಾರ್ಯಯೋಜನೆ: ಹೊಸ ಮತದಾರರ ಸೇರ್ಪಡೆ ಸೇರಿದಂತೆ ಎಸ್ಐಆರ್ ಪ್ರಕ್ರಿಯೆಯ ಮುಂದಿನ ಹಂತಕ್ಕೆ ಎಲ್ಲಾ ಜಿಲ್ಲಾ ಚುನಾವಣಾಧಿಕಾರಿಗಳಿಗೆ (ಡಿಇಒ) ಮುಖ್ಯ ಚುನಾವಣಾಧಿಕಾರಿಗಳು ಪ್ರಮುಖ ನಿರ್ದೇಶನಗಳನ್ನು ನೀಡಿದ್ದಾರೆ. ಎಎಸ್‌ಡಿಡಿಒ ಪಟ್ಟಿಯ ಬಗ್ಗೆ ವೆಬ್‌ಸೈಟ್, ಪತ್ರಿಕೆ, ಸಾಮಾಜಿಕ ಮಾಧ್ಯಮಗಳ ಮೂಲಕ ವ್ಯಾಪಕ ಪ್ರಚಾರ ನೀಡಿ. ಸಾರ್ವಜನಿಕರು ತಮ್ಮ ಹೆಸರು ಎಎಸ್‌ಡಿಡಿಒ ಪಟ್ಟಿಯಲ್ಲಿದೆಯೇ ಎಂದು ತಾವೇ ಪರಿಶೀಲಿಸಲು ಜಾಗೃತಿ ಮೂಡಿಸಿ. ಹಕ್ಕು ಮತ್ತು ಆಕ್ಷೇಪಣೆಗಳ ಅವಧಿಯಲ್ಲಿ ಫಾರ್ವ್-6 ಸಲ್ಲಿಸಲು ಅನುಕೂಲ ಮಾಡಿಕೊಡುವುದು.

ಹಕ್ಕು-ಆಕ್ಷೇಪಣೆ ಅವಧಿಯ ಎಲ್ಲಾ ಶನಿವಾರ ಮತ್ತು ಭಾನುವಾರಗಳಂದು ಬೂತ್ ಮಟ್ಟದಲ್ಲಿ ವಿಶೇಷ ಶಿಬಿರಗಳನ್ನು ನಡೆಸುವುದು. ಹೊಸ ನೋಂದಣಿಗೆ ಅಪಾರ್ಟ್ಮೆಂಟ್, ಐಟಿ ಪಾರ್ಕ್, ಕಾಲೇಜು ಮತ್ತು ಕೈಗಾರಿಕಾ ಪ್ರದೇಶಗಳಲ್ಲಿ ಮಿಂಚಿನ ನೋಂದಣಿ ನಡೆಸುವುದು. ಮೆಟ್ರೋ ಸ್ಟೇಷನ್, ಬಸ್ ನಿಲ್ದಾಣ, ರೈಲ್ವೆ ಸ್ಟೇಷನ್, ಮಾಲ್‌ಗಳಲ್ಲಿ ನೋಂದಣಿ ಸೇರಿದಂತೆ 11 ಕಾರ್ಯಾಯೋಜನೆ ರೂಪಿಸುವಂತೆ ಮುಖ್ಯಚುನಾವಣಾಧಿಕಾರಿ ಸೂಚಿಸಿದ್ದಾರೆ.

ಹೊಸ ಮತದಾರರಿಗೆ ಆಹ್ವಾನ: 2026 ಅಕ್ಟೋಬರ್ 1ಕ್ಕೆ 18 ವರ್ಷ ತುಂಬುವ ಅಥವಾ ಅರ್ಹತೆ ಪಡೆಯುವ ಎಲ್ಲಾ ಯುವಕ-ಯುವತಿಯರು ಫಾರ್ವ್-6 ಮತ್ತು ಸ್ವಯಂ ಘೋಷಣಾ ಪತ್ರದೊಂದಿಗೆ ನೋಂದಾಯಿಸಿಕೊಳ್ಳಲು ಚುನಾವಣಾ ಆಯೋಗ ಕರೆ ನೀಡಿದೆ. ಹೊಸದಾಗಿ ಹೆಸರು ಸೇರಿಸಲು ಮತ್ತು ಸ್ವಯಂ ಘೋಷಣಾಪತ್ರ ಸಲ್ಲಿಸಲು ಆನ್‌ಲೈನ್‌ನಲ್ಲೂ ಅವಕಾಶವಿದೆ. ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವವರು ಬಿಎಲ್ಒ ಅಥವಾ ಇಆರ್‌ಒ ಕಚೇರಿಯಲ್ಲಿ ಸಲ್ಲಿಸಬಹುದೆಂದು ಆಯೋಗ ತಿಳಿಸಿದೆ.