SK Home Ad
Home ಸಿನಿ ಮಿಲ್ಸ್ ನಿರಂಜನ್–ರಚನಾ ಇಂದರ್ ಜೋಡಿಯ ʼಸ್ಪಾರ್ಕ್’ ಹಾಡು ಬಿಡುಗಡೆ

ನಿರಂಜನ್–ರಚನಾ ಇಂದರ್ ಜೋಡಿಯ ʼಸ್ಪಾರ್ಕ್’ ಹಾಡು ಬಿಡುಗಡೆ

0
72

ಬೆಂಗಳೂರು: ಬಹುನಿರೀಕ್ಷಿತ ‘ಸ್ಪಾರ್ಕ್’ ಚಿತ್ರದ ಮೊದಲ ಹಾಡು ‘ಶಕಲಕ ಭುಂ ಭೂಮ್..’ ಅದ್ಧೂರಿಯಾಗಿ ಬಿಡುಗಡೆಯಾಗಿದ್ದು, ಚಿತ್ರತಂಡದ ಆತ್ಮವಿಶ್ವಾಸ ಹಾಗೂ ಸಂಭ್ರಮಕ್ಕೆ ಸಾಕ್ಷಿಯಾಯಿತು. ನಿರಂಜನ್ ಸುಧೀಂದ್ರ ಮತ್ತು ರಚನಾ ಇಂದರ್ ಅವರ ಜೋಡಿಯ ನೃತ್ಯದಿಂದ ಕಂಗೊಳಿಸಿದ ಈ ಹಾಡು ಬಿಡುಗಡೆಯಾದ ಕ್ಷಣದಿಂದಲೇ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.

ಕಾರ್ಯಕ್ರಮದಲ್ಲಿ ಚಿತ್ರದ ಖಳನಾಯಕನ ಪಾತ್ರದಲ್ಲಿ ನಟಿಸಿರುವ ಪ್ರೇಮ್ ಮಾತನಾಡಿ, ನಿರಂಜನ್ ಸುಧೀಂದ್ರ ಅವರ ಅಭಿನಯ ಮತ್ತು ಪ್ರತಿಭೆಯನ್ನು ಶ್ಲಾಘಿಸಿದರು. “ನಿರಂಜನ್ ನಮ್ಮ ಕನ್ನಡದ ಪ್ರತಿಭೆ. ಪರಭಾಷೆಯವರು ಅವರನ್ನು ಕರೆದುಕೊಂಡು ಹೋಗುವ ಮೊದಲು ಕನ್ನಡದ ನಿರ್ಮಾಪಕರು ಉತ್ತಮ ಅವಕಾಶಗಳನ್ನು ನೀಡಬೇಕು. ಈ ಚಿತ್ರದ ನಿರ್ಮಾಪಕರು ದೊಡ್ಡ ಮಟ್ಟದ ಸಿನಿಮಾ ನಿರ್ಮಿಸುವ ಸಾಮರ್ಥ್ಯ ಹೊಂದಿದ್ದರೂ ಕನ್ನಡದ ಯುವ ಪ್ರತಿಭೆಯ ಮೇಲೆ ನಂಬಿಕೆ ಇಟ್ಟು ಹೂಡಿಕೆ ಮಾಡಿರುವುದು ಶ್ಲಾಘನೀಯ” ಎಂದು ಹೇಳಿದರು.

ಚಿತ್ರದಲ್ಲಿ ಪತ್ರಕರ್ತನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಿರಂಜನ್ ಸುಧೀಂದ್ರ, ಈ ಹಾಡಿನ ಬಗ್ಗೆ ಉಪೇಂದ್ರ ಅವರು ವ್ಯಕ್ತಪಡಿಸಿದ ಮೆಚ್ಚುಗೆಯನ್ನು ಹಂಚಿಕೊಂಡರು. “ಈ ಹಾಡು ದೊಡ್ಡ ಸ್ಟಾರ್‌ಗೆ ಸಿಗುವ ಮಟ್ಟದ್ದಾಗಿದೆ ಎಂದು ಚಿಕ್ಕಪ್ಪ ಉಪೇಂದ್ರ ಹೇಳಿದರು. ಇದು ನನ್ನ ಅದೃಷ್ಟ. ಸಂಗೀತ ನಿರ್ದೇಶಕ ಸಚಿನ್ ಬಸ್ರೂರು ಅದ್ಭುತ ಸಂಗೀತ ನೀಡಿದ್ದಾರೆ. ನನ್ನ ವೃತ್ತಿ ಜೀವನದಲ್ಲಿ ಅತ್ಯಂತ ವೇಗವಾಗಿ ಪೂರ್ಣಗೊಂಡ ಚಿತ್ರ ಇದಾಗಿದೆ” ಎಂದು ಹೇಳಿದರು.

ನಾಯಕಿ ರಚನಾ ಇಂದರ್, “ಇದು ನನ್ನ ಮೊದಲ ಕಮರ್ಷಿಯಲ್ ಡ್ಯಾನ್ಸ್ ಸಾಂಗ್. ಇದೇ ಮೊದಲ ಬಾರಿಗೆ ಇಷ್ಟು ಗ್ಲಾಮರಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದೇನೆ” ಎಂದು ಸಂತಸ ವ್ಯಕ್ತಪಡಿಸಿದರು.

ನಿರ್ದೇಶಕ ಮಹಾಂತೇಶ್ ಹಂದ್ರಾಳ್, “ಒಂದು ವರ್ಷದ ಪರಿಶ್ರಮದ ಫಲ ಇಂದು ಕಾಣುತ್ತಿದೆ. ಪ್ರೇಮ್ ಅವರು ನೆಗೆಟಿವ್ ಪಾತ್ರ ಒಪ್ಪಿಕೊಂಡು ನಮ್ಮ ತಂಡಕ್ಕೆ ನೀಡಿದ ಬೆಂಬಲ ದೊಡ್ಡ ಶಕ್ತಿಯಾಗಿದೆ” ಎಂದರು.

ಚಿತ್ರಕ್ಕೆ ನಾಲ್ಕು ಹಾಡುಗಳಿಗೆ ಸಂಗೀತ ನೀಡಿರುವ ಸಚಿನ್ ಬಸ್ರೂರು, ಈ ಆಲ್ಬಮ್ ತಮ್ಮ ವೃತ್ತಿಜೀವನಕ್ಕೆ ಮತ್ತೊಂದು ಮಹತ್ವದ ಮೈಲಿಗಲ್ಲಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಗೀತರಚನೆಕಾರ ಪ್ರಮೋದ್ ಮರವಂತೆ ಕನ್ನಡ ಹಾಗೂ ಹಿಂದಿ ಎರಡೂ ಭಾಷೆಗಳಲ್ಲಿ ಹಾಡುಗಳನ್ನು ರಚಿಸಿರುವುದಾಗಿ ತಿಳಿಸಿದರು. ಉತ್ತರ ಕರ್ನಾಟಕದ ಭಾಷೆಯ ಸೊಗಡನ್ನು ಹಾಡಿನಲ್ಲಿ ಬಳಸಿರುವುದು ವಿಶೇಷ ಎಂದರು.

ಕಾರ್ಯಕ್ರಮದಲ್ಲಿ ನಿರ್ಮಾಪಕರಾದ ಗರಿಮಾ ಹಾಗೂ ಅವಿನಾಶ್ ವಸಿಷ್ಠ, ಲಹರಿ ಸಂಸ್ಥೆಯ ಮನೋಹರ್ ಸೇರಿದಂತೆ ಚಿತ್ರತಂಡದ ಅನೇಕ ಸದಸ್ಯರು ಭಾಗವಹಿಸಿದ್ದರು. ಚಿತ್ರದ ಮೊದಲ ಹಾಡು ಸಾಮಾಜಿಕ ಜಾಲತಾಣಗಳಲ್ಲೂ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.