ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಚಿವ ಸಂಪುಟದಲ್ಲಿ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ 24 ಗಂಟೆಗಳಲ್ಲೇ ಸಚಿವ ಬಿ. ನಾಗೇಂದ್ರ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಬಿಗ್ ಶಾಕ್ ನೀಡಿದೆ.
ದೆಹಲಿಗೆ ಆಗಸ್ಟ್ 10ರವರೆಗೆ ಪ್ರವಾಸಕ್ಕೆ ತೆರಳಲು ಅನುಮತಿ ಕೋರಿ ಬಿ.ನಾಗೇಂದ್ರ ಸಲ್ಲಿಸಿದ್ದ ಮನವಿಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಕೆ.ಬಿ. ಶಿವಪ್ರಸಾದ್ ತಿರಸ್ಕರಿಸಿ ಆದೇಶ ಹೊರಡಿಸಿದ್ದಾರೆ.
ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ಹಗರಣದಲ್ಲಿ ಸಚಿವ ನಾಗೇಂದ್ರ ಶರತ್ತು ಬದ್ಧ ಜಾಮೀನು ಪಡೆದಿದ್ದರು. ಶರತ್ತಿನ ಅನ್ವಯ ನಾಗೇಂದ್ರ ರಾಜ್ಯ ಬಿಟ್ಟು ಹೊರ ಹೋಗುವಂತಿಲ್ಲ.
ಈ ಹಿನ್ನಲೆಯಲ್ಲಿ ಅರ್ಜಿ ಸಲ್ಲಿಸಿದ ನಾಗೇಂದ್ರ, ತಾವು ರಾಷ್ಟ್ರೀಯ ರಾಜಕೀಯ ಪಕ್ಷದ ನೇತಾರರಾಗಿದ್ದು ಪಕ್ಷದ ಚಟುವಟಿಕೆ ಹಿನ್ನೆಲೆಯಲ್ಲಿ ದೆಹಲಿಗೆ ಪ್ರವಾಸ ಕೈಗೊಳ್ಳಲು ಅನುಮತಿ ನೀಡಬೇಕೆಂದು ಕೋರಿದ್ದರು. ಆದರೆ ಸಚಿವ ನಾಗೇಂದ್ರ ಅವರ ಮನವಿಗೆ ಜಾರಿ ನಿರ್ದೇಶನಾಲಯದ ಪರ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿ ನಾಗೇಂದ್ರ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಮೂರು ಬಾರಿ ಸಮನ್ಸ್ ನೀಡಲಾಗಿದ್ದರೂ ವಿಚಾರಣೆಗೆ ಗೈರು ಹಾಜರಾಗಿದ್ದಾರೆ. ಪದೇ ಪದೇ ಸಮಯಾವಕಾಶ ಕೋರುತ್ತಿದ್ದಾರೆ.
ಅಲ್ಲದೆ ನ್ಯಾಯಾಲಯ ಈಗಾಗಲೇ ಮೂರು ಬಾರಿ ಜಾಮೀನು ಷರತ್ತು ಸಡಿಲಿಸಿ, ದೆಹಲಿ ಪ್ರವಾಸಕ್ಕೆ ಅನುಮತಿ ನೀಡಿತ್ತು. ಆರೋಪಿ ಪ್ರಕರಣದಲ್ಲಿ ಪದೇ ಪದೇ ಮಧ್ಯಂತರ ಅರ್ಜಿ ಸಲ್ಲಿಸುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಪ್ರಕರಣದಲ್ಲಿ ಸಿಬಿಐ ಈಗಾಗಲೇ ದೋಷಾರೋಪ ಪಟ್ಟಿ ಸಲ್ಲಿಸಿದ್ದು ಆರೋಪಿಗೆ ಜಾಮೀನು ನೀಡಬಾರದು ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು.




















