ಪಣಜಿ: ಗೋವಾ-ಕರ್ನಾಟಕ ಗಡಿ ಭಾಗದಲ್ಲಿ ಭಾರಿ ಮಳೆ ಮುಂದುವರೆದಿದೆ. ಉಕ್ಕಿ ಹರಿಯುತ್ತಿರುವ ದೂಧಸಾಗರ ನದಿಯಿಂದಾಗಿ ಗೋವಾದ ಧಾರಾಬಾಂದೋಡಾದ ಸಕೊರ್ಡಾ ಡ್ಯೂಲ್ಮೊಲ್‌ನಲ್ಲಿರುವ ಕಾಸ್‌ವೇ ಸೇತುವೆ ಮುಳುಗಡೆಯಾಗಿದ್ದು ಸಂಪರ್ಕ ಕಡಿತಗೊಂಡಿದೆ.
ಸೇತುವೆಯ ಮೇಲೆ ರಭಸವಾಗಿ ನೀರು ಹರಿಯುತ್ತಿರುವುದರಿಂದ ಸೇತುವೆಯ ಎರಡೂ ಭಾಗದಲ್ಲಿ ವಾಹನ ಸವಾರರು ನದಿ ದಾಟಲಾಗದೆಯೇ ಕಾಯುತ್ತಿದ್ದ ದೃಶ್ಯ ಕಂಡುಬಂತು. ಭಾರಿ ಮಳೆಯ ಹಿನ್ನೆಲೆಯಲ್ಲಿ ಸೇತುವೆಯ ಮೇಲೆ ಹರಿಯುತ್ತಿರುವ ನೀರಿನ ಮಟ್ಟದಲ್ಲಿ ಏರಿಕೆಯಾಗುತ್ತಲೇ ಇದ್ದು ವಾಹನ ಸವಾರರು ಬೇರೆ ಮಾರ್ಗ ಬಳಸುವಂತೆ ಸೂಚನೆ ನೀಡಲಾಗಿದೆ. ಇಷ್ಟೇ ಅಲ್ಲದೆಯೇ ಯಾರೂ ಕೂಡ ಸೇತುವೆ ದಾಟುವ ಪ್ರಯತ್ನ ಮಾಡಬಾರದು ಎಂದು ಜಿಲ್ಲಾಡಳಿತವು ಜನತೆಗೆ ಎಚ್ಚರಿಕೆಯನ್ನೂ ನೀಡಿದೆ.






















