ಧಾರವಾಡ: ಯೋಗೀಶಗೌಡ ಗೌಡರ ಹತ್ಯೆ ಪ್ರಕರಣದಲ್ಲಿ ಶಾಸಕ ವಿನಯ ಕುಲಕರ್ಣಿಗೆ ಹೈಕೋರ್ಟ್ ಪೀಠ ಜಾಮೀನು ಮಂಜೂರು ಮಾಡಿದ್ದರಿಂದ ತಾತ್ಕಾಲಿಕವಾಗಿ ರಿಲೀಫ್ ದೊರೆತಂದಾಗಿದ್ದು, ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹರ್ಷ ಮೂಡಿಸಿದೆ.
ಕಳೆದ ಏ. 17ರಂದು ಜನಪ್ರತಿನಿಧಿಗಳ ನ್ಯಾಯಾಲಯ ವಾದ-ವಿವಾದವನ್ನು ಆಲಿಸಿ ಒಟ್ಟು 17 ಜನರಿಗೆ ಶಿಕ್ಷೆ ಪ್ರಕಟ ಮಾಡಿತ್ತು. ವಿನಯ ಕುಲಕರ್ಣಿ ಅವರಿಗೆ ಜೀವಾವಧಿ ಶಿಕ್ಷೆಯನ್ನು ಪ್ರಕಟಿಸಿತ್ತು.
10 ವರ್ಷಗಳ ಪ್ರಕರಣ: ಕಳೆದ 2016ರ ಜೂ. 15ರಂದು ಬೆಳ್ಳಂಬೆಳಗ್ಗೆ ಧಾರವಾಡದ ಸಪ್ತಾಪುರ ಉದಯ ಜಿಮ್‌ನಲ್ಲಿ ಯೋಗೀಶಗೌಡ ಗೌಡರ ಹತ್ಯೆಯಾಗಿತ್ತು. ಈ ಪ್ರಕರಣದಲ್ಲಿ ವಿನಯ ಕುಲಕರ್ಣಿ ಅವರ ಕೈವಾಡವಿದೆ ಎಂದು ಅವರನ್ನು ಬಂಧಿಸಲಾಗಿತ್ತು. ಆಗಲೇ ಅವರಿಗೆ ಜಿಲ್ಲೆಗೆ ಪ್ರವೇಶವನ್ನೂ ನಿರ್ಬಂಧಿಸಲಾಗಿತ್ತು.
ನಿರಂತರ 10 ವರ್ಷಗಳ ವರೆಗೆ ಪ್ರಕರಣದ ವಿಚಾರಣೆ ನಡೆಸಿ ಕಳೆದ ಏಪ್ರಿಲ್ ತಿಂಗಳಲ್ಲಿ ಜೀವಾವಧಿ ಶಿಕ್ಷೆ ಪ್ರಕಟಿಸಲಾಗಿತ್ತು. ಆದರೆ, ಈಗ ಹೈಕೋರ್ಟ್ ಪೀಠ ಶಿಕ್ಷೆಯನ್ನು ಅಮಾನತು ಮಾಡಿ ಆದೇಶಿಸಿರುವುದು ತವರಿನ ಕಾರ್ಯಕರ್ತರಲ್ಲಿ ಮಾತ್ರವಲ್ಲದೇ ಕುಟುಂಬದಲ್ಲಿಯೂ ಸಂತಸ ಮೂಡಿಸಿದೆ.




















