SK Home Ad
Home ನಮ್ಮ ಜಿಲ್ಲೆ ಧಾರವಾಡ ಧಾರವಾಡ ಹೈಕೋರ್ಟ್‌ನತ್ತ ಎಲ್ಲರ ಚಿತ್ತ

ಧಾರವಾಡ ಹೈಕೋರ್ಟ್‌ನತ್ತ ಎಲ್ಲರ ಚಿತ್ತ

0
3

ಒಂದೇ ದಿನ 10 ಮಹಿಳಾ ನ್ಯಾಯಮೂರ್ತಿಗಳಿಂದ ನ್ಯಾಯದಾನ

ಧಾರವಾಡ: ಭಾರತದ ನ್ಯಾಯಾಂಗ ಇತಿಹಾಸದಲ್ಲಿ ಮೊದಲ ಬಾರಿಗೆ ಹೈಕೋರ್ಟ್ ಪೀಠವೊಂದು ಸಂಪೂರ್ಣ ಮಹಿಳಾ ನ್ಯಾಯಮೂರ್ತಿಗಳಿಂದ ಕಾರ್ಯನಿರ್ವಹಿಸಲಿದ್ದು, ಅದು ಧಾರವಾಡ ಹೈಕೋರ್ಟ್ ಪೀಠ ಎನ್ನುವುದೇ ಉತ್ತರ ಕರ್ನಾಟಕ ಭಾಗದ ಹೆಮ್ಮೆಯಾಗಿದೆ.

ಹೌದು… ಆ. 1ರಂದು ಇಡೀ ದಿನದ ಕಲಾಪವನ್ನು ಮಹಿಳಾ ನ್ಯಾಯಮೂರ್ತಿಗಳೇ ನಡೆಸಿಕೊಡಲಿದ್ದು, ಇಲ್ಲಿರುವ ಮೂರು ವಿಭಾಗೀಯ ಹಾಗೂ ನಾಲ್ಕು ಏಕ ಸದಸ್ಯ ಪೀಠದಲ್ಲಿ ಮಹಿಳಾ ನ್ಯಾಯಮೂರ್ತಿಗಳು ಕುಳಿತು ಪ್ರಕರಣಗಳ ವಾದ-ವಿವಾದ ಆಲಿಸಲಿದ್ದಾರೆ.

ವಿಶೇಷತೆ ಏನು…?: ಕರ್ನಾಟಕ ಹೈಕೋರ್ಟ್‌ ಧಾರವಾಡ ಪೀಠದಲ್ಲಿ ಒಟ್ಟು 7 ನ್ಯಾಯಪೀಠಗಳಿವೆ. ಇದರಲ್ಲಿ 3 ವಿಭಾಗೀಯ ನ್ಯಾಯಪೀಠ ಮತ್ತು 4 ಏಕಸದಸ್ಯ ನ್ಯಾಯಪೀಠ ಸೇರಿವೆ. ರೋಸ್ಟರ್ ಅಧಿಸೂಚನೆಯ ಪ್ರಕಾರ ಆ. 1ರಂದು ಈ ಎಲ್ಲ 7 ಪೀಠಗಳಲ್ಲೂ ಮಹಿಳಾ ನ್ಯಾಯಮೂರ್ತಿಗಳೇ ಅಧ್ಯಕ್ಷತೆ ವಹಿಸಲಿದ್ದಾರೆ. ವಿಭಾಗೀಯ ನ್ಯಾಯಪೀಠದಲ್ಲಿ ತಲಾ 2 ಮಹಿಳಾ ನ್ಯಾಯಮೂರ್ತಿಗಳು ಮತ್ತು ಏಕಸದಸ್ಯ ಪೀಠದಲ್ಲಿ 1 ಮಹಿಳಾ ನ್ಯಾಯಮೂರ್ತಿ ಇರಲಿದ್ದಾರೆ.

10 ನ್ಯಾಯಮೂರ್ತಿಗಳು: ವಿಭಾಗೀಯ ನ್ಯಾಯಪೀಠದಲ್ಲಿ ನ್ಯಾ. ಅನು ಶಿವರಾಮನ್, ನ್ಯಾ. ಕೆ.ಜಿ. ಶಾಂತಿ, ನ್ಯಾ. ಜ್ಯೋತಿ ಎಂ, ನ್ಯಾ. ಪಿ. ಶ್ರೀಸುಧಾ, ನ್ಯಾ. ಲಲಿತಾ ಕನ್ನೇಗಂಟಿ ಹಾಗೂ ನ್ಯಾ.ಕೆ.ಎಸ್. ಹೇಮಲೇಖ ಅವರು ಅಧ್ಯಕ್ಷತೆ ವಹಿಸಲಿದ್ದರೆ, ಏಕಸದಸ್ಯ ನ್ಯಾಯಪೀಠದಲ್ಲಿ ಡಾ.ನ್ಯಾ. ಚಿಲ್ಲಕೂರ್ ಸುಮಲತಾ, ನ್ಯಾ. ತಾರಾ ವಿತಸ್ತ ಗಂಜು, ನ್ಯಾ. ಗೀತಾ ಕೆ.ಬಿ, ನ್ಯಾ. ರಾಜೇಶ್ವರಿ ಹೆಗ್ಡೆ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಧಾರವಾಡ ವಕೀಲರ ಸಂಘವು ಕಳೆದ ಮಾರ್ಚ್ನಲ್ಲಿ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರಿಗೆ ಮನವಿ ಸಲ್ಲಿಸಿತ್ತು. ಅದಕ್ಕೆ ಸ್ಪಂದಿಸಿದ ಮುಖ್ಯ ನ್ಯಾಯಮೂರ್ತಿಗಳು ಕಳೆದ ಜು. 24ರಂದು ವಿಶೇಷ ರೋಸ್ಟರ್ ಅಧಿಸೂಚನೆ ಹೊರಡಿಸಿದ್ದರು. ಇದು ಲಿಂಗ ನ್ಯಾಯ ಮತ್ತು ಸಬಲೀಕರಣದ ಸಂಕೇತ. ಉತ್ತರ ಕರ್ನಾಟಕದ ಯುವ ವಕೀಲರು, ಕಾನೂನು ವಿದ್ಯಾರ್ಥಿಗಳು ಮತ್ತು ಮಹಿಳಾ ಕಾನೂನು ತಜ್ಞರಿಗೆ ಸ್ಫೂರ್ತಿ ನೀಡುತ್ತದೆ ಎಂದು ಧಾರವಾಡ ಹೈಕೋರ್ಟ್ ವಕೀಲರ ಸಂಘದ ಅಧ್ಯಕ್ಷ ಬಿ.ಡಿ. ಹಿರೇಮಠ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಯಾಕಿದು ಐತಿಹಾಸಿಕ: ಸುಪ್ರೀಂ ಕೋರ್ಟ್ ಅಥವಾ ಕೇರಳ ಹೈಕೋರ್ಟ್ನಲ್ಲಿ 1-2 ಮಹಿಳಾ ನ್ಯಾಯಪೀಠಗಳು ಸಾಂಕೇತಿಕವಾಗಿ ರಚನೆಯಾಗಿದ್ದವು. ಆದರೆ, ಇಡೀ ಒಂದು ಪೀಠದ ಎಲ್ಲ 7 ನ್ಯಾಯಪೀಠಗಳೂ ಮಹಿಳಾ ನ್ಯಾಯಮೂರ್ತಿಗಳಿಂದ ನಡೆಯುವುದು ಇದೇ ಮೊದಲು. ಸಿವಿಲ್, ಕ್ರಿಮಿನಲ್, ಅಪೀಲ್, ರಿಟ್, ಕುಟುಂಬ, ತೆರಿಗೆ, ಸೇವಾ ವಿಷಯಗಳೆಲ್ಲವೂ ಮಹಿಳಾ ನ್ಯಾಯಮೂರ್ತಿಗಳಿಂದಲೇ ವಿಚಾರಣೆಗೊಳ್ಳಲಿದೆ. ಕಾನೂನು ತಜ್ಞರ ಪ್ರಕಾರ “ಮಹಿಳೆಯರು ಸಂಕೀರ್ಣ ಕಾನೂನು ವಿಷಯಗಳನ್ನು ನಿಭಾಯಿಸಲು ಸಮರ್ಥರಾಗಿದ್ದಾರೆ ಎಂಬ ಬಲವಾದ ಸಂದೇಶ ಈ ಮೂಲಕ ರವಾನೆಯಾಗಲಿದೆ ಎಂದು ಕಾನೂನು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.