ರಾಯಚೂರು: ವಿಚಾರಣಾಧಿನ ಖೈದಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ರಿಮ್ಸ್ ಆಸ್ಪತ್ರೆಯಲ್ಲಿ ಮಂಗಳವಾರ ನಡೆದಿದೆ.
ಆತ್ಮಹತ್ಯೆಗೆ ಶರಣರಾದ ದುರ್ದವಿ ಹುಬ್ಬಳ್ಳಿ ಮೂಲದ ಪವನಕುಮಾರ (32) ಎಂದು ಗುರುತಿಸಲಾಗಿದೆ. ಲಿಂಗಸುಗೂರು ತಾಲ್ಲೂಕಿನ ವ್ಯಾಪ್ತಿಯಲ್ಲಿ 2023ರಲ್ಲಿ ನಡೆದ ಘಟನೆ ಸಂಬಂಧ ಕೊಲೆ ಆರೋಪಿಯಾಗಿದ್ದ ವ್ಯಕ್ತಿ. ಕ್ಷಯ ಹಾಗೂ ಅನ್ನನಾಳದಲ್ಲಿ ರಕ್ತ ಸ್ರಾವ ಸಮಸ್ಯೆಗಳಿಂದ ಬಳಲುತ್ತಿದ್ದನು.
22ರಂದು ಹೆಚ್ಚಿನ ಚಿಕಿತ್ಸೆಗಾಗಿ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅನಾರೋಗ್ಯದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ರಿಮ್ಸ್ ಆಸ್ಪತ್ರೆಯ ಖೈದಿಗಳ ವಾರ್ಡ್‌ನ ಶೌಚಾಲಯಕ್ಕೆ ತೆರಳಿದ್ದ ಪವನ್ ಕುಮಾರ್ ಬಹಳ ಹೊತ್ತಾದರೂ ಹೊರಬರದ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ಅನುಮಾನ ಮೂಡಿದೆ. ಬಳಿಕ ಶೌಚಾಲಯವನ್ನು ಪರಿಶೀಲಿಸಿದಾಗ ಆತ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
ಘಟನೆಯ ಮಾಹಿತಿ ಪಡೆದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣವು ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ರಿಮ್ಸ್ ಆಸ್ಪತ್ರೆಯ ಬಿ ಬ್ಲಾಕ್‌ನಲ್ಲಿ ಖೈದಿಗಳ ವಾರ್ಡ್‌ನಲ್ಲಿನ ಶೌಚಾಲಯದಲ್ಲಿ ಬೆಡ್‌ಶೀಟ್‌ನಿಂದ ನೇಣು ಬಿಗಿದುಕೊಂಡು ಆತ್ನಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.






















