ಬೆಂಗಳೂರು: ಭಾರತೀಯ ಚಿತ್ರರಂಗದ ಪ್ರಮುಖ ನಿರ್ಮಾಣ ಸಂಸ್ಥೆಯಾದ ಕೆವಿಎನ್ ಪ್ರೊಡಕ್ಷನ್ಸ್ ಸಿನಿಪ್ರಿಯರಿಗೆ ಭರ್ಜರಿ ಕೊಡುಗೆ ನೀಡಿದೆ. ಗುಣಮಟ್ಟದ ಹಾಗೂ ಬೃಹತ್ ಕ್ಯಾನ್ವಾಸ್‌ನ ಸಿನಿಮಾಗಳ ಮೂಲಕ ಗಮನಸೆಳೆದಿರುವ ನಿರ್ಮಾಪಕ ವೆಂಕಟ್ ಕೆ. ನಾರಾಯಣ ಅವರ ಸಾರಥ್ಯದಲ್ಲಿ, ಕನ್ನಡದ ಬಹುನಿರೀಕ್ಷಿತ ಇನ್ವೆಸ್ಟಿಗೇಟಿವ್ ಥ್ರಿಲ್ಲರ್ ‘ಬೀರ್‌ಬಲ್ ಟ್ರೈಲಜಿ ಕೇಸ್ 2’ ಚಿತ್ರ ಅಧಿಕೃತವಾಗಿ ಘೋಷಣೆಯಾಗಿದೆ.
ಹಿಂದೆ ವಿಶಿಷ್ಟ ಚಿತ್ರಕಥೆ, ಚಾಣಾಕ್ಷ ತಿರುವುಗಳು ಹಾಗೂ ಕೌತುಕದ ಕೋರ್ಟ್‌ರೂಮ್ ಡ್ರಾಮಾದ ಮೂಲಕ ಸದ್ದು ಮಾಡಿದ್ದ ‘ಬೀರ್‌ಬಲ್ ಟ್ರೈಲಜಿ ಕೇಸ್ 1: ಫೈಂಡಿಂಗ್ ವಜ್ರಮುನಿ’ ಚಿತ್ರವು ಪ್ರೇಕ್ಷಕರಿಂದ ಮುಕ್ತ ಕಂಠದ ಪ್ರಶಂಸೆ ಪಡೆದಿತ್ತು. ಅದರಲ್ಲಿ ವಕೀಲ ‘ಮಹೇಶ್ ದಾಸ್’ ಆಗಿ ಎಂ.ಜಿ. ಶ್ರೀನಿವಾಸ್ (ಶ್ರೀನಿ) ಪ್ರದರ್ಶಿಸಿದ ಬುದ್ಧಿವಂತಿಕೆಯ ತನಿಖಾ ಶೈಲಿ ಸಿನಿಪ್ರಿಯರ ಮೆಚ್ಚುಗೆಗೆ ಪಾತ್ರವಾಗಿತ್ತು. ಆ ಯಶಸ್ಸಿನ ಮುಂದುವರಿದ ಭಾಗವಾಗಿ, ಇದೀಗ ಮತ್ತಷ್ಟು ಜಟಿಲ ಹಾಗೂ ಕಗ್ಗಂಟಾದ ನಿಗೂಢ ಪ್ರಕರಣವನ್ನು ಭೇದಿಸಲು ಮಹೇಶ್ ದಾಸ್ ‘ಬೀರ್‌ಬಲ್ ಟ್ರೈಲಜಿ ಕೇಸ್ 2’ ಮೂಲಕ ಅಖಾಡಕ್ಕಿಳಿಯುತ್ತಿದ್ದಾರೆ.
ಈ ಚಿತ್ರದ ಮತ್ತೊಂದು ದೊಡ್ಡ ಆಕರ್ಷಣೆಯೆಂದರೆ ‘ಶ್ರೀನಿ ಸಿನಿಮ್ಯಾಟಿಕ್ ಯೂನಿವರ್ಸ್’ (SCU) ಈ ಚಿತ್ರದ ಮೂಲಕ ಅಧಿಕೃತವಾಗಿ ವಿಸ್ತಾರಗೊಳ್ಳುತ್ತಿರುವುದು. ಈ ಹಿಂದೆ ಶ್ರೀನಿ ನಿರ್ದೇಶನದಲ್ಲಿ ತೆರೆಕಂಡು ಬ್ಲಾಕ್‌ಬಸ್ಟರ್ ಎನಿಸಿಕೊಂಡಿದ್ದ ‘ಘೋಸ್ಟ್’ ಚಿತ್ರದ ಕಥೆಯ ಕೊಂಡಿಯನ್ನು ಬೆಸೆದು, ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್‌ಕುಮಾರ್ ಅವರು ಈ ಸೀಕ್ವೆಲ್‌ನಲ್ಲಿ ಪವರ್‌ಫುಲ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೈ-ವೋಲ್ಟೇಜ್ ಕ್ರಾಸ್‌ಓವರ್ ಕ್ಷಣಗಳು ಮತ್ತು ಪಾತ್ರಗಳ ಪರಸ್ಪರ ನಂಟು ಈ ಸಿನಿಮ್ಯಾಟಿಕ್ ಯೂನಿವರ್ಸ್‌ಗೆ ಅಂತರರಾಷ್ಟ್ರೀಯ ಮಟ್ಟದ ಮೆರುಗು ನೀಡಲಿವೆ.
ಚಿತ್ರದ ತಾರಾಗಣದಲ್ಲಿ ಹಲವು ದಿಗ್ಗಜ ಕಲಾವಿದರ ಪುನರಾಗಮನವು ಸಿನಿಪ್ರಿಯರಲ್ಲಿ ಕುತೂಹಲ ದುಪ್ಪಟ್ಟುಗೊಳಿಸಿದೆ. ಬಹುಭಾಷಾ ತಾರೆ ಖುಷ್ಬೂ ಸುಂದರ್ ಶಕ್ತಿಶಾಲಿ ಪಾತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಮರಳುತ್ತಿದ್ದರೆ, ಬಹುಕಾಲದ ನಂತರ ಪ್ರತಿಭಾವಂತ ನಟಿ ಡೈಸಿ ಬೋಪಣ್ಣ ಕೂಡ ಬೆಳ್ಳಿತೆರೆಗೆ ಅದ್ಧೂರಿ ರೀ-ಎಂಟ್ರಿ ಕೊಡುತ್ತಿದ್ದಾರೆ. ಇವರೊಂದಿಗೆ ಯುವ ಪ್ರತಿಭೆ ಯೋಗಲಕ್ಷ್ಮಿ ಈ ಚಿತ್ರದ ಮೂಲಕ ನಾಯಕಿಯಾಗಿ ಚಂದನವನಕ್ಕೆ ಪದಾರ್ಪಣೆ ಮಾಡುತ್ತಿದ್ದು, ಖಳನಟ ಸಂಪತ್ ರಾಜ್ ಪ್ರಮುಖ ಪಾತ್ರಕ್ಕೆ ಸಾಥ್ ನೀಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಹಾಗೂ ಮಹೇನ್ ಸಿಂಹ ಅವರ ಛಾಯಾಗ್ರಹಣವಿರುವ ಈ ಅದ್ಧೂರಿ ಇನ್ವೆಸ್ಟಿಗೇಟಿವ್ ಥ್ರಿಲ್ಲರ್ ಸದ್ಯದಲ್ಲೇ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ.





















