ಶಿವಮೊಗ್ಗ: ಮಗನನ್ನು ಮಂತ್ರಿ ಮಾಡುವಾಗ ರಾಜಕೀಯ ಕ್ಷೇತ್ರ ಸರಿ ಇತ್ತಾ..? ಎಂದು ಮಾಜಿ ಸಿಎಂ ಸಿದ್ದರಾಮಯ್ಯಗೆ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಪ್ರಶ್ನೆ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ಕ್ಷೇತ್ರ ಕಲುಷಿತಗೊಂಡಿದೆ ಎಂದು ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ಅವರು ಪ್ರತಿಕ್ರಿಯೆ ನೀಡಿ, ತಮ್ಮ ಹಿಂಬಾಲಕರ ಮೂಲಕ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಲು ಒತ್ತಡ ಹೇರುವ ಯತ್ನವಿದು. ಸಿದ್ದರಾಮಯ್ಯನವರು ರಾಜಕೀಯ ನಿವೃತ್ತಿ ಕುರಿತು ನೀಡಿರುವ ಹೇಳಿಕೆ ನಂಬಲು ಅರ್ಹವಲ್ಲ ಎಂದರು.
ಸರ್ಕಾರದ ಮೊದಲ ಮೂರು ವರ್ಷ ಅಧಿಕಾರ ಹಂಚಿಕೆಯಲ್ಲಿಯೇ ಹೋಯಿತು. ಈಗ ಸಂಪುಟ ವಿಸ್ತರಣೆ ವಿಚಾರಕ್ಕೆ ದೆಹಲಿಗೆ ಅಲೆದಾಡುತ್ತಿದ್ದಾರೆ. ರಾಜ್ಯದಲ್ಲಿ ಭೀಕರ ಬರ ಆವರಿಸಿದೆ. ಬರದ ಸರ್ವೆನೂ ಆಗಿಲ್ಲ. ಅದರ ಗಂಭೀರತೆಯೂ ಸರ್ಕಾರಕ್ಕೆ ಇಲ್ಲ. 40 ಶಾಸಕರು ದೆಹಲಿಗೆ ಹೋಗಿ ಠಿಕಾಣಿ ಹೂಡಿದ್ದಾರೆ. ಉಸ್ತುವಾರಿ ಸಚಿವರೂ ಇಲ್ಲ ಎಂದು ಕುಟುಕಿದರು.
ಬರದ ರಿಪೋರ್ಟ್ ತೆಗೆದುಕೊಳ್ಳುವುದಕ್ಕೆ ನಿಮ್ಮ ಶಾಸಕರನ್ನಾದರೂ ಕ್ಷೇತ್ರಗಳಿಗೆ ಕಳುಹಿಸಿ. ರಾಜಕಾರಣಕ್ಕಾಗಿ ಕೇಂದ್ರದತ್ತ ಬೊಟ್ಟು ಮಾಡಬೇಡಿ. ಕೇಂದ್ರ ಸಚಿವರಾಗಿದ್ದ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿರುವುದಕ್ಕೆ ಬೇಸರ ವ್ಯಕ್ತಪಡಿಸಿ, ಪ್ರಾಮಾಣಿಕ ವ್ಯಕ್ತಿ. ಅಂತಹವರು ದೇಶಕ್ಕೆ ಬೇಕು. ಶಿಕ್ಷಣದಲ್ಲಿ ಸಾಕಷ್ಟು ಸುಧಾರಣೆ ತಂದಿದ್ದಾರೆ. ಮುಂಬರುವ ದಿನಗಳಲ್ಲಿ ಉನ್ನತ ಹುದ್ದೆ ಅಲಂಕರಿಸಲಿದ್ದಾರೆ ಎಂದು ಹೇಳಿದರು.






















