SK Home Ad
Home ಸಿನಿ ಮಿಲ್ಸ್ ‘ರಾಮಾಯಣ’ಕ್ಕೆ ಸೋನಿ ಪಿಕ್ಚರ್ಸ್ ಸಾಥ್: ಟ್ರೇಲರ್ ಮುಂದೂಡಿಕೆ!

‘ರಾಮಾಯಣ’ಕ್ಕೆ ಸೋನಿ ಪಿಕ್ಚರ್ಸ್ ಸಾಥ್: ಟ್ರೇಲರ್ ಮುಂದೂಡಿಕೆ!

0
66

₹4,000 ಕೋಟಿ ಬಜೆಟ್‌ನ ‘ರಾಮಾಯಣ’ಕ್ಕೆ ಮತ್ತೊಂದು ದೊಡ್ಡ ಹೆಜ್ಜೆ; ಸೋನಿ ಪಿಕ್ಚರ್ಸ್ ಪಾಲುದಾರಿಕೆ ಘೋಷಣೆ – ಟ್ರೇಲರ್ ಬಿಡುಗಡೆ ಮುಂದೂಡಿಕೆ

ಮುಂಬೈ : ನಿರ್ದೇಶಕ ನಿತೇಶ್ ತಿವಾರಿ ಅವರ ಬಹುನಿರೀಕ್ಷಿತ ‘ರಾಮಾಯಣ’ ಚಿತ್ರದ ಟ್ರೇಲರ್ ಬಿಡುಗಡೆಯನ್ನು ಮುಂದೂಡಲಾಗಿದೆ. ಇದೇ ವೇಳೆ, ಹಾಲಿವುಡ್‌ನ ಪ್ರಮುಖ ನಿರ್ಮಾಣ ಮತ್ತು ವಿತರಣಾ ಸಂಸ್ಥೆಯಾದ ಸೋನಿ ಪಿಕ್ಚರ್ಸ್ ಎಂಟರ್‌ಟೈನ್‌ಮೆಂಟ್ ಚಿತ್ರದ ಜಾಗತಿಕ ವಿತರಕರಾಗಿ ಸೇರ್ಪಡೆಯಾಗಿರುವುದಾಗಿ ನಿರ್ಮಾಪಕ ನಮಿತ್ ಮಲ್ಹೋತ್ರಾ ಶುಕ್ರವಾರ ಸಾಮಾಜಿಕ ಜಾಲತಾಣದ ಮೂಲಕ ಅಧಿಕೃತವಾಗಿ ಘೋಷಿಸಿದ್ದಾರೆ.

ಮೊದಲು ಚಿತ್ರದ ಟ್ರೇಲರ್ ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಬಿಡುಗಡೆಯಾಗಬೇಕಿತ್ತು. ಆದರೆ ಸೋನಿ ಪಿಕ್ಚರ್ಸ್ ಜೊತೆಗಿನ ಹೊಸ ಪಾಲುದಾರಿಕೆಯನ್ನು ಗಮನದಲ್ಲಿಟ್ಟುಕೊಂಡು, ಟ್ರೇಲರ್ ಅನ್ನು ವಿಶ್ವದಾದ್ಯಂತ ಏಕಕಾಲದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿರುವುದರಿಂದ ಅದರ ಬಿಡುಗಡೆಯನ್ನು ಮುಂದೂಡಲಾಗಿದೆ. ಆದರೆ ಹೊಸ ಬಿಡುಗಡೆ ದಿನಾಂಕವನ್ನು ನಿರ್ಮಾಪಕರು ಇನ್ನೂ ಪ್ರಕಟಿಸಿಲ್ಲ.

ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಸಂದೇಶದಲ್ಲಿ ನಮಿತ್ ಮಲ್ಹೋತ್ರಾ, “ಇಂದು ನಮ್ಮ ‘ರಾಮಾಯಣ’ ತಂಡಕ್ಕೆ ಅತ್ಯಂತ ವಿಶೇಷ ದಿನ. ಸೋನಿ ಪಿಕ್ಚರ್ಸ್ ಎಂಟರ್‌ಟೈನ್‌ಮೆಂಟ್ ಜೊತೆಗಿನ ಪಾಲುದಾರಿಕೆಯಿಂದ ರಾಮಾಯಣವನ್ನು ಇಡೀ ಜಗತ್ತಿಗೆ ತಲುಪಿಸುವ ನನ್ನ ಕನಸು ನನಸಾಗಿದೆ. ಈ ಮಹತ್ವದ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು, ಟ್ರೇಲರ್ ಅನ್ನು ನಂತರದ ದಿನಾಂಕದಲ್ಲಿ ಜಾಗತಿಕವಾಗಿ ಬಿಡುಗಡೆ ಮಾಡಲಿದ್ದೇವೆ” ಎಂದು ತಿಳಿಸಿದ್ದಾರೆ.

ಅವರು ಮುಂದುವರಿದು, “100 ವರ್ಷಗಳಿಗಿಂತಲೂ ಹೆಚ್ಚಿನ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ, ಯಾವುದೇ ದೊಡ್ಡ ಹಾಲಿವುಡ್ ಸಿನಿಮಾದ ಮಾದರಿಯಲ್ಲಿ ‘ರಾಮಾಯಣ’ವನ್ನು ವಿಶ್ವದಾದ್ಯಂತ ಬಿಡುಗಡೆ ಮಾಡುವುದು ಭಾರತೀಯ ಸಿನಿರಂಗಕ್ಕೆ ಹೆಮ್ಮೆಯ ಕ್ಷಣ. ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಮಹಾಕಾವ್ಯಗಳನ್ನು ಜಾಗತಿಕ ಪ್ರೇಕ್ಷಕರಿಗೆ ಹೊಸ ರೀತಿಯಲ್ಲಿ ಪರಿಚಯಿಸುವ ಅವಕಾಶ ಇದಾಗಿದೆ” ಎಂದು ಹೇಳಿದ್ದಾರೆ.

ಭಾರಿ ತಾರಾಗಣ : ನಿತೇಶ್ ತಿವಾರಿ ನಿರ್ದೇಶನದ ಈ ಮಹತ್ವಾಕಾಂಕ್ಷೆಯ ಚಿತ್ರದಲ್ಲಿ ರಣಬೀರ್ ಕಪೂರ್ ಶ್ರೀರಾಮನ ಪಾತ್ರದಲ್ಲಿ, ಸಾಯಿ ಪಲ್ಲವಿ ಸೀತೆಯಾಗಿ, ಯಶ್ ರಾವಣನಾಗಿ, ಸನ್ನಿ ಡಿಯೋಲ್ ಹನುಮಂತನಾಗಿ ಹಾಗೂ ರವಿ ದುಬೆ ಲಕ್ಷ್ಮಣನಾಗಿ ಅಭಿನಯಿಸುತ್ತಿದ್ದಾರೆ. ಈ ಭಾರೀ ತಾರಾಗಣದ ಕಾರಣದಿಂದಲೇ ಸಿನಿಮಾ ಕುರಿತು ದೇಶಾದ್ಯಂತ ಅಪಾರ ನಿರೀಕ್ಷೆ ಮೂಡಿದೆ.

ಎ.ಆರ್. ರೆಹಮಾನ್ – ಹ್ಯಾನ್ಸ್ ಜಿಮ್ಮರ್ ಸಂಗೀತ : ಚಿತ್ರಕ್ಕೆ ಭಾರತೀಯ ಸಂಗೀತ ದಿಗ್ಗಜ ಎ.ಆರ್. ರೆಹಮಾನ್ ಹಾಗೂ ಆಸ್ಕರ್ ಪ್ರಶಸ್ತಿ ವಿಜೇತ ಹಾಲಿವುಡ್ ಸಂಗೀತ ನಿರ್ದೇಶಕ ಹ್ಯಾನ್ಸ್ ಜಿಮ್ಮರ್ ಸಂಗೀತ ಸಂಯೋಜಿಸುತ್ತಿದ್ದಾರೆ. ಸಾಹಿತ್ಯವನ್ನು ಖ್ಯಾತ ಕವಿ ಕುಮಾರ್ ವಿಶ್ವಾಸ್ ರಚಿಸಿದ್ದು, ಕಥೆ ಹಾಗೂ ಚಿತ್ರಕಥೆಯನ್ನು ಶ್ರೀಧರ್ ರಾಘವನ್ ಬರೆದಿದ್ದಾರೆ.

₹4,000 ಕೋಟಿ ಬಜೆಟ್ : ‘ರಾಮಾಯಣ’ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ದುಬಾರಿ ಸಿನಿಮಾಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ವಿವಿಧ ವರದಿಗಳ ಪ್ರಕಾರ, ಚಿತ್ರದ ಒಟ್ಟು ಬಜೆಟ್ ₹4,000 ಕೋಟಿಗೂ ಅಧಿಕ ಎನ್ನಲಾಗಿದೆ. ಈ ಚಿತ್ರವನ್ನು ನಮಿತ್ ಮಲ್ಹೋತ್ರಾ ಅವರ ಪ್ರೈಮ್ ಫೋಕಸ್ ಸ್ಟುಡಿಯೋಸ್, ಡಿಎನ್‌ಇಜಿ (DNEG) ಹಾಗೂ ನಟ ಯಶ್ ಅವರ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಂಸ್ಥೆಗಳು ಜಂಟಿಯಾಗಿ ನಿರ್ಮಿಸುತ್ತಿವೆ.

ಎರಡು ಭಾಗಗಳಲ್ಲಿ ಬಿಡುಗಡೆ : ‘ರಾಮಾಯಣ’ವನ್ನು ಎರಡು ಭಾಗಗಳಲ್ಲಿ ಬಿಡುಗಡೆ ಮಾಡುವ ಯೋಜನೆ ರೂಪಿಸಲಾಗಿದೆ. ಮೊದಲ ಭಾಗವು 2026ರ ದೀಪಾವಳಿ ಸಂದರ್ಭದಲ್ಲಿ ಚಿತ್ರಮಂದಿರಗಳಿಗೆ ಬರಲಿದ್ದು, ಎರಡನೇ ಭಾಗವು 2027ರಲ್ಲಿ ಬಿಡುಗಡೆಯಾಗಲಿದೆ. ಭಾರತೀಯ ಪೌರಾಣಿಕ ಕಥೆಯನ್ನು ಅತ್ಯಾಧುನಿಕ ದೃಶ್ಯ ತಂತ್ರಜ್ಞಾನ (VFX) ಮತ್ತು ಜಾಗತಿಕ ಮಟ್ಟದ ನಿರ್ಮಾಣ ಮೌಲ್ಯಗಳೊಂದಿಗೆ ತೆರೆಗೆ ತರುವ ಪ್ರಯತ್ನ ಇದಾಗಿದೆ.

ಸೋನಿ ಪಿಕ್ಚರ್ಸ್ ಪಾಲುದಾರಿಕೆಯಿಂದ ಚಿತ್ರದ ಅಂತರರಾಷ್ಟ್ರೀಯ ಬಿಡುಗಡೆಗೆ ಮತ್ತಷ್ಟು ಬಲ ಸಿಕ್ಕಿದ್ದು, ‘ರಾಮಾಯಣ’ ಭಾರತೀಯ ಸಿನಿರಂಗದ ಜಾಗತಿಕ ಮೈಲುಗಲ್ಲಾಗುವ ನಿರೀಕ್ಷೆ ಹೆಚ್ಚಾಗಿದೆ.