ದೆಹಲಿ ವಿದ್ಯಾರ್ಥಿಗಳ ಪ್ರತಿಭಟನೆ ಪರಿಣಾಮ ಕನ್ನಾಟ್ ಪ್ಲೇಸ್ ಅಂಗಡಿ-ಕಚೇರಿಗಳನ್ನು ಬೇಗ ಮುಚ್ಚಲು ವ್ಯಾಪಾರಿಗಳ ಸಂಘ ಮನವಿ
ನವದೆಹಲಿ: ದೆಹಲಿಯ ಜಂತರ್ ಮಂತರ್ನಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ ರಾಷ್ಟ್ರ ರಾಜಧಾನಿಯ ಪ್ರಮುಖ ವಾಣಿಜ್ಯ ಕೇಂದ್ರವಾದ ಕನ್ನಾಟ್ ಪ್ಲೇಸ್ (Connaught Place – CP) ನಲ್ಲಿ ಭದ್ರತಾ ಆತಂಕ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ನವದೆಹಲಿ ವ್ಯಾಪಾರಿಗಳ ಸಂಘ (NDTA) ಇಂದು ಸಂಜೆ 6.30 ಗಂಟೆಯೊಳಗೆ ಕನ್ನಾಟ್ ಪ್ಲೇಸ್ನಲ್ಲಿರುವ ಎಲ್ಲಾ ಅಂಗಡಿಗಳು, ಕಾರ್ಪೊರೇಟ್ ಕಚೇರಿಗಳು, ರೆಸ್ಟೋರೆಂಟ್ಗಳು ಹಾಗೂ ಇತರ ವಾಣಿಜ್ಯ ಸಂಸ್ಥೆಗಳನ್ನು ಮುಚ್ಚುವಂತೆ ತುರ್ತು ಸಲಹೆ ನೀಡಿದೆ.
ವಿದ್ಯಾರ್ಥಿ ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ನಡುವೆ ನಡೆಯುತ್ತಿರುವ ನಿರಂತರ ಘರ್ಷಣೆಗಳ ಪರಿಣಾಮ ಕನ್ನಾಟ್ ಪ್ಲೇಸ್ ಪ್ರದೇಶಕ್ಕೂ ವ್ಯಾಪಿಸುವ ಸಾಧ್ಯತೆ ಇರುವುದರಿಂದ ಈ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಂಘ ತಿಳಿಸಿದೆ.
NDMC ಸಲಹೆ ಬಳಿಕ ತುರ್ತು ನಿರ್ಧಾರ : ನವದೆಹಲಿ ಮುನ್ಸಿಪಲ್ ಕೌನ್ಸಿಲ್ (NDMC) ಅಧ್ಯಕ್ಷರು ಮತ್ತು ಉಪಾಧ್ಯಕ್ಷರೊಂದಿಗೆ ನಡೆದ ಚರ್ಚೆಯ ಬಳಿಕ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಎನ್ಡಿಟಿಎ ಅಧ್ಯಕ್ಷ ಅತುಲ್ ಭಾರ್ಗವ ತಿಳಿಸಿದ್ದಾರೆ. ಅವರು ಹೊರಡಿಸಿದ ತುರ್ತು ಸುತ್ತೋಲೆಯಲ್ಲಿ, ಯಾವುದೇ ಅಹಿತಕರ ಘಟನೆಗಳನ್ನು ತಪ್ಪಿಸಲು ಹಾಗೂ ವ್ಯಾಪಾರಿಗಳು, ಸಿಬ್ಬಂದಿ ಮತ್ತು ಸಾರ್ವಜನಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಕನ್ನಾಟ್ ಪ್ಲೇಸ್ನ ಎಲ್ಲಾ ವಾಣಿಜ್ಯ ಚಟುವಟಿಕೆಗಳನ್ನು ಸಂಜೆ 6.30ರೊಳಗೆ ಸ್ಥಗಿತಗೊಳಿಸುವಂತೆ ಮನವಿ ಮಾಡಲಾಗಿದೆ.
ಅಂಗಡಿ, ಕಚೇರಿ, ರೆಸ್ಟೋರೆಂಟ್ಗಳಿಗೆ ಸೂಚನೆ : ಸಂಘದ ಸೂಚನೆಯ ಪ್ರಕಾರ ಎಲ್ಲಾ ಚಿಲ್ಲರೆ ಮತ್ತು ಸಗಟು ಅಂಗಡಿಗಳು, ಕಾರ್ಪೊರೇಟ್ ಕಚೇರಿಗಳು, ರೆಸ್ಟೋರೆಂಟ್ಗಳು, ಕಫೆಗಳು, ಇತರ ವಾಣಿಜ್ಯ ಸಂಸ್ಥೆಗಳು ನಿಗದಿತ ಸಮಯದೊಳಗೆ ಮುಚ್ಚಬೇಕು ಎಂದು ಸೂಚಿಸಲಾಗಿದೆ. ಇದು ಕೇವಲ ಮುನ್ನೆಚ್ಚರಿಕೆಯ ಕ್ರಮವಾಗಿದ್ದು, ಆಸ್ತಿ ಹಾನಿ, ಸಾರ್ವಜನಿಕರಿಗೆ ತೊಂದರೆ ಹಾಗೂ ಯಾವುದೇ ಅಹಿತಕರ ಘಟನೆಗಳನ್ನು ತಡೆಯುವ ಉದ್ದೇಶ ಹೊಂದಿದೆ ಎಂದು ಸಂಘ ಸ್ಪಷ್ಟಪಡಿಸಿದೆ.
ಭಾರೀ ಜನಸಂದಣಿಯ ಪ್ರದೇಶ: ಕನ್ನಾಟ್ ಪ್ಲೇಸ್ ದೆಹಲಿಯ ಅತಿ ಪ್ರಮುಖ ವ್ಯಾಪಾರ ಹಾಗೂ ಪ್ರವಾಸಿ ಕೇಂದ್ರಗಳಲ್ಲಿ ಒಂದಾಗಿದೆ. ಪ್ರತಿದಿನ ಸಾವಿರಾರು ಜನರು ಇಲ್ಲಿಗೆ ಭೇಟಿ ನೀಡುವುದರಿಂದ ಸಂಜೆ ವೇಳೆಯಲ್ಲಿ ಇಲ್ಲಿ ಹೆಚ್ಚಿನ ಜನಸಂದಣಿ ಇರುತ್ತದೆ. ಪ್ರತಿಭಟನೆಗಳು ಮತ್ತು ಭದ್ರತಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಜನಸಂದಣಿಯನ್ನು ನಿಯಂತ್ರಿಸುವುದು ಆಡಳಿತಕ್ಕೆ ಸವಾಲಾಗಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ವ್ಯಾಪಾರಕ್ಕೆ ಭಾರೀ ಹೊಡೆತ : ಇನ್ನೊಂದೆಡೆ, ವ್ಯಾಪಾರ ಮತ್ತು ಕೈಗಾರಿಕಾ ಮಂಡಳಿ (CTI) ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಹಾಗೂ ಮೆಟ್ರೋ ಸೇವೆಯಲ್ಲಿನ ನಿರ್ಬಂಧಗಳಿಂದ ವ್ಯಾಪಾರ ಚಟುವಟಿಕೆಗಳಿಗೆ ತೀವ್ರ ಹಿನ್ನಡೆಯಾಗಿದೆ ಎಂದು ಹೇಳಿದೆ. ಸಿಟಿಐ ಅಧ್ಯಕ್ಷ ಬ್ರಿಜೇಶ್ ಗೋಯಲ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, ಪ್ರಮುಖ ಪ್ರದೇಶಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಗಳನ್ನು ನಿಯಂತ್ರಿಸಲು ಹಾಗೂ ವ್ಯಾಪಾರ ಚಟುವಟಿಕೆಗಳಿಗೆ ಅಡ್ಡಿಯಾಗದಂತೆ ಪರ್ಯಾಯ ವ್ಯವಸ್ಥೆಗಳನ್ನು ರೂಪಿಸುವಂತೆ ಮನವಿ ಮಾಡಿದ್ದಾರೆ.
ಮೂರು ದಿನಗಳಲ್ಲಿ 70% ವ್ಯವಹಾರ ಕುಸಿತ : ಸಿಟಿಐ ಮಾಹಿತಿ ಪ್ರಕಾರ, ಕಳೆದ ಮೂರು ದಿನಗಳಿಂದ ಜಂತರ್ ಮಂತರ್ ಹಾಗೂ ಮಧ್ಯ ದೆಹಲಿಯ ಪ್ರತಿಭಟನೆಗಳ ಪರಿಣಾಮ ಕನ್ನಾಟ್ ಪ್ಲೇಸ್ ಸೇರಿದಂತೆ ಪ್ರಮುಖ ಮಾರುಕಟ್ಟೆಗಳಲ್ಲಿ ವ್ಯಾಪಾರ ಚಟುವಟಿಕೆ ಸುಮಾರು 70 ಶೇಕಡಾ ಕುಸಿದಿದೆ. ಮೆಟ್ರೋ ನಿಲ್ದಾಣಗಳ ತಾತ್ಕಾಲಿಕ ಮುಚ್ಚುವಿಕೆ, ರಸ್ತೆ ಸಂಚಾರ ನಿರ್ಬಂಧ ಹಾಗೂ ಭದ್ರತಾ ವ್ಯವಸ್ಥೆಯಿಂದ ಗ್ರಾಹಕರ ಸಂಚಾರ ಗಣನೀಯವಾಗಿ ಕಡಿಮೆಯಾಗಿದ್ದು, ವ್ಯಾಪಾರಿಗಳಿಗೆ ದೊಡ್ಡ ನಷ್ಟ ಉಂಟಾಗಿದೆ ಎಂದು ಸಂಘ ತಿಳಿಸಿದೆ.
ಸಾರ್ವಜನಿಕರಿಗೆ ಎಚ್ಚರಿಕೆ: ಇಂದು ಸಂಜೆ ಕನ್ನಾಟ್ ಪ್ಲೇಸ್ಗೆ ಭೇಟಿ ನೀಡಲು ಯೋಜಿಸಿರುವ ಸಾರ್ವಜನಿಕರು ತಮ್ಮ ಕೆಲಸಗಳನ್ನು ಸಾಧ್ಯವಾದಷ್ಟು ಬೇಗ ಮುಗಿಸಿ ಕೊಳ್ಳುವಂತೆ ಆಡಳಿತ ಮತ್ತು ವ್ಯಾಪಾರಿಗಳ ಸಂಘ ಮನವಿ ಮಾಡಿದೆ. ಪರಿಸ್ಥಿತಿ ಸಹಜವಾಗುವವರೆಗೆ ಭದ್ರತಾ ಪಡೆಗಳು ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಿವೆ.




















