ದಾವಣಗೆರೆ: ಮುಂಗಾರು ಆರಂಭದಲ್ಲಿ ಉತ್ತಮ ಮಳೆ ಸುರಿದು ರೈತರಲ್ಲಿ ನಿರೀಕ್ಷೆ ಮೂಡಿಸಿದ್ದ ಮಳೆ ಕಳೆದ ಕೆಲವು ದಿನಗಳಿಂದ ಕೈಕೊಟ್ಟಿತ್ತು. ಆದರೆ ಸೋಮವಾರ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸುರಿದ ಸಾಧಾರಣ ಮಳೆ ರೈತರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ.
ಬೆಳಗ್ಗೆಯಿಂದ ಬಿಸಿಲಿನ ವಾತಾವರಣವಿದ್ದರೂ ಮಧ್ಯಾಹ್ನದ ವೇಳೆಗೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿ ಹಲವೆಡೆ ಮಳೆ ಸುರಿಯಿತು. ಹರಿಹರ ತಾಲೂಕಿನಲ್ಲಿ ಸುಮಾರು ಎರಡೂವರೆ ಗಂಟೆಗಳ ಕಾಲ ಮಳೆಯಾಗಿದ್ದು, ಜಗಳೂರು ತಾಲೂಕಿನಲ್ಲಿ ಸುಮಾರು ಎರಡು ಗಂಟೆಗಳ ಕಾಲ ಹದ ಮಳೆಯಾಗಿದೆ. ಚನ್ನಗಿರಿ ಹಾಗೂ ಹೊನ್ನಾಳಿ ತಾಲೂಕುಗಳಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದೆ.
ದಾವಣಗೆರೆ ತಾಲೂಕಿನಲ್ಲಿ ಮಧ್ಯಾಹ್ನ ಅರ್ಧ ಗಂಟೆ ಮಳೆ ಸುರಿದು ವಿರಾಮ ಪಡೆದ ಬಳಿಕ ಸಂಜೆ 4.30ರ ಸುಮಾರಿಗೆ ಮತ್ತೆ ಮಳೆ ಆರಂಭವಾಯಿತು. ನಂತರ ಜಿಟಿಜಿಟಿಯಾಗಿ ಮಳೆ ಮುಂದುವರಿದ ಪರಿಣಾಮ ನಗರದಲ್ಲಿ ವಾಹನ ಸಂಚಾರಕ್ಕೆ ಕೆಲಕಾಲ ಅಡಚಣೆ ಉಂಟಾಯಿತು.
ಸಂಜೆ ವೇಳೆಯಲ್ಲಿ ಸುರಿದ ಮಳೆಯಿಂದ ಸರ್ಕಾರಿ ನೌಕರರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಮನೆ ತಲುಪಲು ಪರದಾಡಿದರು. ಕೆಲವರು ಮಳೆಯಲ್ಲಿ ನೆನೆಯುತ್ತಲೇ ಮನೆ ಸೇರಿದರೆ, ಇನ್ನು ಕೆಲವರು ಆಟೋ ಸೇರಿದಂತೆ ಇತರೆ ವಾಹನಗಳ ನೆರವಿನಿಂದ ಮನೆ ಸೇರಿದರು.
ಜಿಲ್ಲೆಯ ಕೆಲ ತಾಲೂಕುಗಳಲ್ಲಿ ಸುರಿದ ಹದ ಮಳೆಯಿಂದ ಈಗಾಗಲೇ ಬಿತ್ತನೆ ಮಾಡಿರುವ ಬೆಳೆಗಳಿಗೆ ಜೀವ ಬಂದಿದ್ದು, ರೈತರು ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ ಇನ್ನೂ ಬಿತ್ತನೆ ಕಾರ್ಯ ಆರಂಭಿಸದ ರೈತರು ಉತ್ತಮ ಹಸಿ ಮಳೆಯ ನಿರೀಕ್ಷೆಯಲ್ಲಿ ಆಕಾಶದತ್ತ ಚಿತ್ತ ಹರಿಸಿದ್ದಾರೆ.
ಮಳೆ ಮುಂದುವರಿದರೆ ಕೃಷಿ ಚಟುವಟಿಕೆಗಳು ಮತ್ತಷ್ಟು ಚುರುಕುಗೊಳ್ಳಲಿದ್ದು, ಮುಂಗಾರು ಬೆಳೆಗಳ ಬೆಳವಣಿಗೆಗೆ ಅನುಕೂಲವಾಗಲಿದೆ ಎಂಬ ವಿಶ್ವಾಸವನ್ನು ರೈತರು ವ್ಯಕ್ತಪಡಿಸಿದ್ದಾರೆ.






















