SK Home Ad
Home ಸಿನಿ ಮಿಲ್ಸ್ ‘ಕರಾವಳಿ’ ಕಿರಿಕ್: ವಿವಾದಕ್ಕೆ ಬೇಸರ – ರಾಜ್ ಬಿ ಶೆಟ್ಟಿ ಭಾವುಕ ಮನವಿ

‘ಕರಾವಳಿ’ ಕಿರಿಕ್: ವಿವಾದಕ್ಕೆ ಬೇಸರ – ರಾಜ್ ಬಿ ಶೆಟ್ಟಿ ಭಾವುಕ ಮನವಿ

0
60

ಬೆಂಗಳೂರು: ಬಿಡುಗಡೆಗೆ ಸಜ್ಜಾಗಿರುವ ‘ಕರಾವಳಿ’ ಸಿನಿಮಾ ವಿವಾದದ ನಡುವೆಯೇ ಇದೀಗ ನಟ ರಾಜ್ ಬಿ ಶೆಟ್ಟಿ ಕನ್ನಡ ಸಿನಿಪ್ರೇಕ್ಷಕರಿಗೆ ಭಾವುಕ ಕ್ಷಮೆಯಾಚನೆ ಮಾಡಿದ್ದಾರೆ. ಸಿನಿಮಾ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಡೆದ ಗಲಾಟೆ ಹಾಗೂ ಬಳಿಕ ನಟ ಪ್ರಜ್ವಲ್ ದೇವರಾಜ್ ಮತ್ತು ನಿರ್ದೇಶಕ ಗುರುದತ್ ಗಾಣಿಗಾ ನಡುವೆ ಬಹಿರಂಗವಾಗಿ ನಡೆದ ಆರೋಪ–ಪ್ರತ್ಯಾರೋಪಗಳ ಹಿನ್ನೆಲೆಯಲ್ಲಿ ರಾಜ್ ಬಿ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹಂಚಿಕೊಂಡು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿರುವ ವಿಡಿಯೊದಲ್ಲಿ ಮಾತನಾಡಿರುವ ಅವರು, ಕನ್ನಡ ಚಿತ್ರರಂಗದ ಬೆಳವಣಿಗೆಗೆ ಇಂತಹ ಘಟನೆಗಳು ಧಕ್ಕೆಯಾಗಬಾರದು ಎಂಬ ಆಶಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: 20 ದಿನಗಳ ಉಪವಾಸ: ಸೋನಮ್ ವಾಂಗ್ಚುಕ್ ಆಸ್ಪತ್ರೆಗೆ ದಾಖಲು

“ಇದು ಕನ್ನಡ ಚಿತ್ರರಂಗಕ್ಕೆ ಬೇಸರದ ಸಂಗತಿ” : ರಾಜ್ ಬಿ ಶೆಟ್ಟಿ ಮಾತನಾಡುತ್ತಾ, “‘ಕೆಜಿಎಫ್’, ‘ಕಾಂತಾರ’ ಸಿನಿಮಾಗಳು ವಿಶ್ವಮಟ್ಟದಲ್ಲಿ ಯಶಸ್ಸು ಸಾಧಿಸಿದಾಗ ನಾವು ಹೆಮ್ಮೆಯಿಂದ ಕನ್ನಡ ಸಿನಿಮಾ ಎಂದು ಹೇಳಿಕೊಳ್ಳುತ್ತೇವೆ. ಆದರೆ ಇದೇ ಚಿತ್ರರಂಗದಲ್ಲಿ ಇಂತಹ ವಿವಾದಗಳು ನಡೆಯುವಾಗ ನೋವಾಗುತ್ತದೆ. ಇದು ಕನ್ನಡ ಸಿನಿಮಾವನ್ನು ಪ್ರೀತಿಸುವ ಪ್ರತಿಯೊಬ್ಬರಿಗೂ ಬೇಸರ ತರುವ ವಿಚಾರ” ಎಂದಿದ್ದಾರೆ.

ಅಲ್ಲದೆ, “ಈ ಸಂದರ್ಭದಲ್ಲಿ ಯಾರು ಸರಿ, ಯಾರು ತಪ್ಪು ಎಂಬುದಕ್ಕಿಂತ, ಕನ್ನಡ ಸಿನಿಮಾದವರಾಗಿ ನಾವು ಪ್ರೇಕ್ಷಕರ ಮುಂದೆ ಹೇಗೆ ಕಾಣಿಸಿಕೊಳ್ಳುತ್ತಿದ್ದೇವೆ ಎಂಬುದೇ ಮುಖ್ಯ. ಚಿತ್ರರಂಗದ ಸದಸ್ಯನಾಗಿ ನಾನು ಇಡೀ ಕನ್ನಡ ಸಿನಿಪ್ರೇಕ್ಷಕರಲ್ಲಿ ಕ್ಷಮೆ ಕೇಳುತ್ತೇನೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ನಮ್ಮಿಂದಾಗುವ ಪ್ರಯತ್ನ ಮಾಡುತ್ತೇವೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ವಾಂಗ್ಚುಕ್ ಬಳಿಕ ಅಭಿಜೀತ್ ದೀಪ್ಕೆ ಉಪವಾಸ ಸತ್ಯಾಗ್ರಹಕ್ಕೆ ಚಾಲನೆ

‘ಕರಾವಳಿ’ ವಿವಾದದ ಹಿನ್ನೆಲೆ : ಗುರುದತ್ ಗಾಣಿಗಾ ನಿರ್ದೇಶನದ ‘ಕರಾವಳಿ’ ಸಿನಿಮಾ ಆರಂಭದಿಂದಲೇ ತನ್ನ ಕಥಾವಸ್ತು ಹಾಗೂ ಕಲಾವಿದರ ಬಳಗದಿಂದ ಗಮನ ಸೆಳೆದಿತ್ತು. ಆದರೆ, ಇತ್ತೀಚೆಗೆ ನಡೆದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಕೆಲ ಅಭಿಮಾನಿಗಳು ಗಲಾಟೆ ನಡೆಸಿದ್ದರಿಂದ ಕಾರ್ಯಕ್ರಮ ವಿವಾದಕ್ಕೆ ಕಾರಣವಾಯಿತು.

ಈ ಘಟನೆಯ ಬಳಿಕ ನಾಯಕ ನಟ ಪ್ರಜ್ವಲ್ ದೇವರಾಜ್ ಮತ್ತು ನಿರ್ದೇಶಕ ಗುರುದತ್ ಗಾಣಿಗಾ ನಡುವೆ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡಿದ್ದು, ಇಬ್ಬರೂ ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನು ಮಾಡಿರುವುದು ಸುದ್ದಿಯಾಗಿತ್ತು. ಈ ಬೆಳವಣಿಗೆ ಸಾಮಾಜಿಕ ಜಾಲತಾಣಗಳಲ್ಲೂ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ: ರೈತರು ಕಡಿಮೆ ನೀರಿನ ಬೆಳೆಗಳತ್ತ ಮುಖ ಮಾಡಲಿ: ಸುಷ್ಮಾ ಗೋಡಬೋಲೆ

“ನನ್ನದು ಅತಿಥಿ ಪಾತ್ರ, ಆದರೆ ಮಹತ್ವದ್ದು” : ರಾಜ್ ಬಿ ಶೆಟ್ಟಿ ತಮ್ಮ ವಿಡಿಯೊದಲ್ಲಿ ಚಿತ್ರದ ಬಗ್ಗೆ ಮಾತನಾಡುತ್ತಾ, “‘ಕರಾವಳಿ’ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ನಾಯಕನಾಗಿ ಅಭಿನಯಿಸಿದ್ದಾರೆ. ನಾನು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಅದು ಸಣ್ಣ ಪಾತ್ರವಲ್ಲ, ಕಥೆಗೆ ಮಹತ್ವದ ಪಾತ್ರವಾಗಿದೆ. ಈ ಚಿತ್ರದಲ್ಲಿ ಸಂಪದಾ, ಮಿತ್ರ, ರಮೇಶ್ ಇಂದಿರಾ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ಅಭಿನಯಿಸಿದ್ದಾರೆ” ಎಂದರು.

ನಿರ್ದೇಶಕ ಗುರುದತ್ ಗಾಣಿಗಾ ಅವರ ಪ್ರಯತ್ನವನ್ನು ಶ್ಲಾಘಿಸಿದ ಅವರು, “ಒಂದು ಉತ್ತಮ ಕನ್ನಡ ಸಿನಿಮಾ ನಿರ್ಮಿಸಬೇಕು ಎಂಬ ಪ್ರಾಮಾಣಿಕ ಉದ್ದೇಶದಿಂದ ಈ ಚಿತ್ರವನ್ನು ಮಾಡಲಾಗಿದೆ. ಪ್ರೇಕ್ಷಕರು ಸಿನಿಮಾವನ್ನು ಬೆಂಬಲಿಸಬೇಕು” ಎಂದು ಮನವಿ ಮಾಡಿದರು.

ಬಿಡುಗಡೆಗೆ ನಿರೀಕ್ಷೆ : ವಿವಾದಗಳ ನಡುವೆಯೂ ‘ಕರಾವಳಿ’ ಚಿತ್ರದ ಬಗ್ಗೆ ಸಿನಿಪ್ರಿಯರಲ್ಲಿ ಕುತೂಹಲ ಹೆಚ್ಚಾಗಿದ್ದು, ಚಿತ್ರದ ಬಿಡುಗಡೆಗೆ ಚಿತ್ರತಂಡ ಸಿದ್ಧತೆ ನಡೆಸುತ್ತಿದೆ. ಇತ್ತೀಚಿನ ಬೆಳವಣಿಗೆಗಳ ನಡುವೆ ರಾಜ್ ಬಿ ಶೆಟ್ಟಿ ಅವರ ಸಮತೋಲನದ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ಪಡೆಯುತ್ತಿದೆ.