SK Home Ad
Home ನಮ್ಮ ಜಿಲ್ಲೆ ಉತ್ತರ ಕನ್ನಡ ಅತಿಕ್ರಮಣಕ್ಕೆ ಬ್ರೇಕ್: JCB ಮೂಲಕ ಅಕ್ರಮ ಕಟ್ಟಡ ನೆಲಸಮ

ಅತಿಕ್ರಮಣಕ್ಕೆ ಬ್ರೇಕ್: JCB ಮೂಲಕ ಅಕ್ರಮ ಕಟ್ಟಡ ನೆಲಸಮ

0
211

ದಾಂಡೇಲಿ, (ಸಂ.ಕ. ಸಮಾಚಾರ) : ದಾಂಡೇಲಿಯ ಅಂಬೇವಾಡಿ ಮುಖ್ಯ ಸರ್ಕಲ್ ಸಮೀಪ ನಗರಸಭೆಗೆ ಸೇರಿದ ಜಮೀನಿನಲ್ಲಿ ಅಕ್ರಮವಾಗಿ ನಿರ್ಮಿಸಲಾಗುತ್ತಿದ್ದ ಕಟ್ಟಡವನ್ನು ದಾಂಡೇಲಿ ನಗರಸಭೆ ಶುಕ್ರವಾರ ಬೆಳಿಗ್ಗೆ ತೆರವುಗೊಳಿಸಿದೆ.

ನಗರಸಭೆಯ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಅವರ ನಿರ್ದೇಶನದ ಮೇರೆಗೆ ನಡೆದ ಈ ಕಾರ್ಯಾಚರಣೆ ನಗರದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರವಾಗಿದೆ.

ಇದನ್ನೂ ಓದಿ: ಬಂಟ್ವಾಳ ಯುವತಿ ಹತ್ಯೆ ಪ್ರಕರಣ: ಮಂಗಳೂರಿನಲ್ಲಿ ಆರೋಪಿ ಬಂಧನ

ನಗರಸಭೆ ಮಾಲೀಕತ್ವದ ಆಸ್ತಿಯ ಅತಿಕ್ರಮಣ ಹಾಗೂ ಅಕ್ರಮ ಕಟ್ಟಡ ನಿರ್ಮಾಣದ ಕುರಿತು ಸಂಯುಕ್ತ ಕರ್ನಾಟಕದಲ್ಲಿ ವರದಿಗಳು ಪ್ರಕಟವಾದ ಬೆನ್ನಲ್ಲೇ ಜಿಲ್ಲಾಧಿಕಾರಿಗಳು ನಗರಸಭೆ ಪೌರಾಯುಕ್ತ ವಿವೇಕ್ ಬನ್ನೆ ಅವರಿಗೆ ಸ್ಥಳ ಪರಿಶೀಲನೆ ನಡೆಸಿ, ನಿಯಮಾನುಸಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಅದರಂತೆ ಪೌರಾಯುಕ್ತರ ನೇತೃತ್ವದಲ್ಲಿ ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಅಕ್ರಮ ಕಟ್ಟಡವನ್ನು ಜೆಸಿಬಿ ಮೂಲಕ ನೆಲಸಮಗೊಳಿಸಿದರು. ಬಳಿಕ ಕೈಗೊಂಡ ಕ್ರಮದ ಕುರಿತು ಪಾಲನಾ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು.

ಇತ್ತೀಚೆಗೆ ಅಂಬೇವಾಡಿ ಹಾಗೂ ಸುಭಾಸ ನಗರ ಪ್ರದೇಶಗಳಲ್ಲಿ ನಗರಸಭೆಯ ಬೆಲೆಬಾಳುವ ಜಮೀನಿನ ಅತಿಕ್ರಮಣ ಕುರಿತು ಸಾರ್ವಜನಿಕರು ಹಾಗೂ ಮಾಜಿ ಜನಪ್ರತಿನಿಧಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ತ್ವರಿತ ಮಧ್ಯಪ್ರವೇಶ ಮತ್ತು ಕಾನೂನು ಕ್ರಮವು ಅತಿಕ್ರಮಣದಾರರಿಗೆ ಎಚ್ಚರಿಕೆಯ ಸಂದೇಶವಾಗಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ‘ಏನೇ ಆದರೂ ಜುಲೈ 20ರವರೆಗೆ ಜೀವಂತವಾಗಿರುತ್ತೇನೆ’: ವಾಂಗ್‌ಚುಕ್

ನಗರದಲ್ಲಿ ಇದೇ ರೀತಿಯಾಗಿ ನಗರಸಭೆಯ ಜಮೀನನ್ನು ಅಕ್ರಮವಾಗಿ ಅತಿಕ್ರಮಿಸಿ, ದಾಖಲೆಗಳಲ್ಲಿ ಅಕ್ರಮ ಅಥವಾ ವಂಚನೆಯ ಮೂಲಕ ಕಬಳಿಸಿರುವ ಎಲ್ಲ ಪ್ರಕರಣಗಳನ್ನೂ ಸಮಗ್ರವಾಗಿ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.

ಜಿಲ್ಲಾಧಿಕಾರಿಗಳ ಈ ದಿಟ್ಟ ಕ್ರಮದಿಂದ ನಗರಸಭೆಯ ಆಸ್ತಿಗಳ ಸಂರಕ್ಷಣೆಗೆ ಹೊಸ ಭರವಸೆ ಮೂಡಿದ್ದು, ಸಾರ್ವಜನಿಕ ಆಸ್ತಿಯ ಅತಿಕ್ರಮಣಕ್ಕೆ ಜಿಲ್ಲಾಡಳಿತ ಯಾವುದೇ ರೀತಿಯ ಸಡಿಲಿಕೆ ನೀಡುವುದಿಲ್ಲ ಎಂಬ ಸ್ಪಷ್ಟ ಸಂದೇಶ ರವಾನೆಯಾಗಿದೆ.