SK Home Ad
Home ನಮ್ಮ ಜಿಲ್ಲೆ ದಕ್ಷಿಣ ಕನ್ನಡ ಬಂಟ್ವಾಳ ಯುವತಿ ಹತ್ಯೆ ಪ್ರಕರಣ: ಮಂಗಳೂರಿನಲ್ಲಿ ಆರೋಪಿ ಬಂಧನ

ಬಂಟ್ವಾಳ ಯುವತಿ ಹತ್ಯೆ ಪ್ರಕರಣ: ಮಂಗಳೂರಿನಲ್ಲಿ ಆರೋಪಿ ಬಂಧನ

0
82

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿ ಏಕಮುಖ ಪ್ರೀತಿಯನ್ನು ನಿರಾಕರಿಸಿದ್ದಕ್ಕೆ 21 ವರ್ಷದ ಲಾವಣ್ಯಳನ್ನು ತಲ್ವಾರ್‌ನಿಂದ ಹತ್ಯೆ ಮಾಡಲಾಗಿದೆ. ಪ್ರಕರಣ ಸಂಬಂಧ ಆರೋಪಿ ಚೇತನ್‌ರನ್ನು ಮಂಗಳೂರು ಹೊರವಲಯದ ವಾಮಂಜೂರು ಬಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿ ಗುರುವಾರ ಸಂಜೆ ನಡೆದ ಯುವತಿಯೊಬ್ಬಳ ಭೀಕರ ಹತ್ಯೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಏಕಮುಖ ಪ್ರೀತಿಯನ್ನು ಯುವತಿ ನಿರಾಕರಿಸಿದ್ದಕ್ಕೆ ಆಕ್ರೋಶಗೊಂಡ ಯುವಕ, ಸಾರ್ವಜನಿಕ ಸ್ಥಳದಲ್ಲೇ ತಲ್ವಾರ್‌ನಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಆರೋಪಿಯನ್ನು ಬಂಧಿಸಿದ್ದಾರೆ. ಆದರೆ ಆರೋಪಿಯು ವಿಷಪ್ರಾಷನ ಮಾಡಿದ್ದು, ಹೀಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತ ಯುವತಿಯನ್ನು ಕಕ್ಕೆಪದವು ನಿವಾಸಿ ಲಾವಣ್ಯ (21) ಎಂದು ಗುರುತಿಸಲಾಗಿದೆ. ಲಾವಣ್ಯ ಕಲ್ಲಡ್ಕದ ಖಾಸಗಿ ನರ್ಸಿಂಗ್ ಹೋಮ್‌ನಲ್ಲಿ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಆರೋಪಿ ಚೇತನ್ ಮತ್ತು ಲಾವಣ್ಯ ದೂರದ ಸಂಬಂಧಿಕರಾಗಿದ್ದು, ಚೇತನ್ ಯುವತಿಯನ್ನು ಏಕಮುಖವಾಗಿ ಪ್ರೀತಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಬಸ್‌ ಸ್ಟ್ಯಾಂಡ್‌ನಲ್ಲಿ ಸಾರ್ವಜನಿಕರ ಎದುರೇ ಯುವತಿಯ ಬರ್ಬರ ಹತ್ಯೆ

ಬಸ್‌ನಲ್ಲೇ ಆರಂಭವಾದ ಆತಂಕ : ಗುರುವಾರ ಸಂಜೆ ಸುಮಾರು 6 ಗಂಟೆ ವೇಳೆಗೆ ಲಾವಣ್ಯ ಬಂಟ್ವಾಳದಿಂದ ಕಕ್ಕೆಪದವಿಗೆ ತೆರಳಲು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಕುಳಿತಿದ್ದರು. ಈ ವೇಳೆ ಆರೋಪಿ ಚೇತನ್ ಬಂದು ಆಕೆಯ ಪಕ್ಕದಲ್ಲಿ ಕುಳಿತಿದ್ದಾನೆ.

ಬಸ್‌ನಿಂದ ಇಳಿದ ಬಳಿಕ ಬೆನ್ನಟ್ಟಿ ಹಲ್ಲೆ: ಬಸ್‌ನಿಂದ ಕೆಳಗಿಳಿದ ತಕ್ಷಣ ಲಾವಣ್ಯಳನ್ನು ಆರೋಪಿ ಚೇತನ್ ಬೆನ್ನಟ್ಟಿದ್ದಾನೆ. ತನ್ನ ಬ್ಯಾಗ್‌ನಲ್ಲಿದ್ದ ತಲ್ವಾರ್‌ನ್ನು ಹೊರತೆಗೆದಾಗ, ಲಾವಣ್ಯ ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾಳೆ. ಆದರೆ, ಸಾರ್ವಜನಿಕರ ಕಣ್ಮುಂದೆಯೇ ಆಕೆಯ ಮೇಲೆ ಮಾರಕ ಹಲ್ಲೆ ನಡೆಸಿದ ಚೇತನ್, ಸ್ಥಳದಿಂದ ಪರಾರಿಯಾಗಿದ್ದಾನೆ. ತೀವ್ರವಾಗಿ ಗಾಯಗೊಂಡ ಲಾವಣ್ಯ ಅವರನ್ನು ತಕ್ಷಣ ಬಂಟ್ವಾಳ ತಾಲೂಕು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ.

ಇದನ್ನೂ ಓದಿ: ‘3 Idiots’ ನ ರಾಂಚೊ ಪಾತ್ರಕ್ಕೆ ವಾಂಗ್‌ಚುಕ್ ಸ್ಫೂರ್ತಿ ಅಲ್ಲ : ಆಮಿರ್

‘ನಿಮ್ಮ ಮಗಳನ್ನು ಕೊಂದಿದ್ದೇನೆ’ ಎಂದು ತಂದೆಗೆ ಕರೆ : ಕೃತ್ಯ ಎಸಗಿದ ಬಳಿಕ ಆರೋಪಿ ತನ್ನ ಆಲ್ಟೋ ಕಾರಿನಲ್ಲಿ ಮಂಗಳೂರಿನತ್ತ ಪರಾರಿಯಾಗಿದ್ದಾನೆ. ಈ ವೇಳೆ ಲಾವಣ್ಯ ಅವರ ತಂದೆಗೆ ಕರೆ ಮಾಡಿ, “ನಾನು ನಿಮ್ಮ ಮಗಳನ್ನು ಕೊಂದಿದ್ದೇನೆ, ಈಗ ನಾನೂ ಜೀವನ ಕೊನೆಗೊಳಿಸಿಕೊಳ್ಳುತ್ತೇನೆ,” ಎಂದು ಹೇಳಿದ್ದಾನೆ ಎನ್ನಲಾಗಿದೆ. ಈ ಮಾಹಿತಿ ಸಿಕ್ಕ ತಕ್ಷಣ ಬಂಟ್ವಾಳ ಉಪವಿಭಾಗದ ಪೊಲೀಸರು ವಿಶೇಷ ತಂಡ ರಚಿಸಿ ಕಾರ್ಯಾಚರಣೆ ಆರಂಭಿಸಿದರು.

ವಾಮಂಜೂರು ಬಳಿ ಆರೋಪಿ ವಶಕ್ಕೆ: ಮೊಬೈಲ್ ನೆಟ್‌ವರ್ಕ್, ಸಿಸಿಟಿವಿ ದೃಶ್ಯಾವಳಿ ಹಾಗೂ ತಾಂತ್ರಿಕ ಮಾಹಿತಿಯ ಆಧಾರದ ಮೇಲೆ ಮಂಗಳೂರು ಹೊರವಲಯದ ವಾಮಂಜೂರು ಪಚ್ಚನಾಡಿ ಪ್ರದೇಶದಲ್ಲಿ ಆರೋಪಿಯನ್ನು ಆತನ ಕಾರು ಸಮೇತ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ‘ಏನೇ ಆದರೂ ಜುಲೈ 20ರವರೆಗೆ ಜೀವಂತವಾಗಿರುತ್ತೇನೆ’: ವಾಂಗ್‌ಚುಕ್

ಪೊಲೀಸ್ ಮೂಲಗಳ ಪ್ರಕಾರ, ಸುಮಾರು ಒಂದು ತಿಂಗಳ ಹಿಂದೆ ಆರೋಪಿ ಚೇತನ್ ಲಾವಣ್ಯ ಕೆಲಸ ಮಾಡುತ್ತಿದ್ದ ಖಾಸಗಿ ಆಸ್ಪತ್ರೆಗೆ ತೆರಳಿ ಗಲಾಟೆ ಮಾಡಿದ್ದ. ಆಗ ಆಸ್ಪತ್ರೆಯ ಸಿಬ್ಬಂದಿ ಮಧ್ಯಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಿದ್ದರು.

ಪ್ರಕರಣ ದಾಖಲು : ಬಂಟ್ವಾಳ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ವಿರುದ್ಧ ಕೊಲೆ ಸೇರಿದಂತೆ ವಿವಿಧ ಆರೋಪಗಳಡಿ ಕಾನೂನು ಕ್ರಮ ಕೈಗೊಂಡಿದ್ದಾರೆ. ಈ ಘಟನೆ ಮತ್ತೊಮ್ಮೆ ಮಹಿಳೆಯರ ಸುರಕ್ಷತೆ ಹಾಗೂ ಏಕಮುಖ ಪ್ರೀತಿಯ ಹೆಸರಿನಲ್ಲಿ ನಡೆಯುತ್ತಿರುವ ಅಪರಾಧಗಳ ಬಗ್ಗೆ ಗಂಭೀರ ಚರ್ಚೆಗೆ ಕಾರಣವಾಗಿದೆ.