SK Home Ad
Home ನಮ್ಮ ಜಿಲ್ಲೆ ಉತ್ತರ ಕನ್ನಡ ಮರಮಟ್ಟುಗಳ ಡಿಪೋ ಹರಾಜಿನಲ್ಲಿ ಅವ್ಯವಹಾರ ಆರೋಪ: ತನಿಖೆಗೆ ಆಗ್ರಹ

ಮರಮಟ್ಟುಗಳ ಡಿಪೋ ಹರಾಜಿನಲ್ಲಿ ಅವ್ಯವಹಾರ ಆರೋಪ: ತನಿಖೆಗೆ ಆಗ್ರಹ

0
209

ದಾಂಡೇಲಿ: ದಾಂಡೇಲಿ ಮರಮಟ್ಟುಗಳ ಡಿಪೋದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಮರದ ದಿಮ್ಮೆಗಳ ಹರಾಜು ಪ್ರಕ್ರಿಯೆಯಲ್ಲಿ ಭಾರಿ ಅಕ್ರಮಗಳು ನಡೆಯುತ್ತಿವೆ ಎಂದು ಸ್ಥಳೀಯ ಕಟ್ಟಿಗೆ ವ್ಯಾಪಾರಸ್ಥರು ಗಂಭೀರ ಆರೋಪ ಮಾಡಿದ್ದಾರೆ.

ಈ ಕುರಿತು ಹಳಿಯಾಳ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ. ಪ್ರಶಾಂತ ಅವರು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕಟ್ಟಿಗೆ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಪ್ರೇಮಾನಂದ ಗವಸ ಆಗ್ರಹಿಸಿದ್ದಾರೆ.

ಸಂಘದ ಪರವಾಗಿ ನೀಡಿದ ಹೇಳಿಕೆಯಲ್ಲಿ, ಹರಾಜು ಪ್ರಕ್ರಿಯೆ ಪಾರದರ್ಶಕವಾಗಿ ನಡೆಯುತ್ತಿಲ್ಲ. ಕೆಲವು ಅಧಿಕಾರಿಗಳು ಹಾಗೂ ಸಿಬ್ಬಂದಿಯೇ ಬೇನಾಮಿ ಹೆಸರಿನಲ್ಲಿ ಹರಾಜು ವ್ಯವಹಾರ ನಡೆಸುತ್ತಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ. ಇದರಿಂದ ಸ್ಥಳೀಯ ಕಟ್ಟಿಗೆ ವ್ಯಾಪಾರಸ್ಥರಿಗೆ ಹರಾಜಿನಲ್ಲಿ ನ್ಯಾಯಯುತವಾಗಿ ಭಾಗವಹಿಸುವ ಅವಕಾಶ ಸಿಗದೇ ಆರ್ಥಿಕವಾಗಿ ನಷ್ಟವಾಗುತ್ತಿದೆ ಎಂದು ದೂರಲಾಗಿದೆ.

ಡಿಪೋದಲ್ಲಿ ನಡೆಯುತ್ತಿರುವ ಹರಾಜು ಪ್ರಕ್ರಿಯೆಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿ ವ್ಯವಸ್ಥಿತವಾಗಿ ಅಕ್ರಮ ನಡೆಸುತ್ತಿದ್ದಾರೆ ಎಂಬ ಆರೋಪವನ್ನು ಸಂಘ ಮಾಡಿದ್ದು, ಈ ಕುರಿತು ವಿವರವಾದ ಮಾಹಿತಿಯನ್ನು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಪ್ರೇಮಾನಂದ ಗವಸ ತಿಳಿಸಿದ್ದಾರೆ.

“ದಾಂಡೇಲಿ ಮರಮಟ್ಟುಗಳ ಡಿಪೋದಲ್ಲಿನ ಕಟ್ಟಿಗೆ ಹರಾಜು ರಾಜ್ಯದಲ್ಲೇ ಅತಿದೊಡ್ಡ ಅವ್ಯವಹಾರಗಳಲ್ಲಿ ಒಂದಾಗಿದೆ. ಈ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಕಟ್ಟಿಗೆ ವ್ಯಾಪಾರಸ್ಥರ ಸಂಘದ ನೇತೃತ್ವದಲ್ಲಿ ಉಗ್ರ ಹೋರಾಟ ನಡೆಸಲಾಗುವುದು” ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಸ್ಥಳೀಯ ವ್ಯಾಪಾರಸ್ಥರ ಹಿತಾಸಕ್ತಿ ಕಾಪಾಡುವ ಜೊತೆಗೆ ಸರ್ಕಾರದ ಆದಾಯಕ್ಕೂ ಧಕ್ಕೆಯಾಗದಂತೆ ಹರಾಜು ಪ್ರಕ್ರಿಯೆಯನ್ನು ಸಂಪೂರ್ಣ ಪಾರದರ್ಶಕವಾಗಿ ನಡೆಸಬೇಕು ಎಂಬುದು ಸಂಘದ ಪ್ರಮುಖ ಬೇಡಿಕೆಯಾಗಿದೆ.