ದಾವಣಗೆರೆ: ಸಾಲಬಾಧೆ ಹಾಗೂ ಬೆಳೆ ವೈಫಲ್ಯದಿಂದ ಮನನೊಂದು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನಲ್ಲಿ ಮಂಗಳವಾರ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಕುಂಬಳೂರು ಗ್ರಾಮದ ರೈತ ಕಡೂರು ಹನುಮಂತಪ್ಪ (45) ಮತ್ತು ಮಲ್ಲನಾಯಕನಹಳ್ಳಿ ಗ್ರಾಮದ ರವಿಕುಮಾರ್ (50) ಆತ್ಮಹತ್ಯೆಗೆ ಶರಣಾದ ರೈತರು. ಸುಮಾರು ಎರಡು ಎಕರೆ ಜಮೀನು ಹೊಂದಿದ್ದ ರವಿಕುಮಾರ್, ಕೃಷಿಯನ್ನೇ ಅವಲಂಬಿಸಿ ಜೀವನ ಸಾಗಿಸುತ್ತಿದ್ದರು. ಕುಟುಂಬ ನಿರ್ವಹಣೆ ಹಾಗೂ ಮಕ್ಕಳ ಶಿಕ್ಷಣಕ್ಕಾಗಿ ವಿವಿಧ ಸಹಕಾರ ಸಂಘಗಳು ಮತ್ತು ಪರಿಚಯಸ್ಥರಿಂದ 25 ಲಕ್ಷ ರೂ.ಗೂ ಅಧಿಕ ಸಾಲ ಪಡೆದಿದ್ದರು ಎನ್ನಲಾಗಿದೆ.
ಸಮರ್ಪಕ ಮಳೆಯ ಕೊರತೆ ಹಾಗೂ ಭದ್ರಾ ನಾಲೆಯಲ್ಲಿ ನೀರು ಹರಿಯದ ಕಾರಣ ಬೆಳೆ ಹಾನಿಗೊಳಗಾಗಿದ್ದು, ಸಾಲ ತೀರಿಸುವ ಚಿಂತೆಯಿಂದ ಅವರು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎಂದು ತಿಳಿದು ಬಂದಿದೆ. ಮನೆಯಲ್ಲಿ ಯಾರು ಇಲ್ಲದ ವೇಳೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಮತ್ತೊಂದು ಘಟನೆಯಲ್ಲಿ ಕುಂಬಳೂರು ಗ್ರಾಮದ ರೈತ ಕಡೂರು ಹನುಮಂತಪ್ಪ, ಕೋಮರನಹಳ್ಳಿ ಅರಣ್ಯ ಪ್ರದೇಶದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಅವರ ಹೆಸರಲ್ಲಿ ಕುಂಬಳೂರು ಗ್ರಾಮದ ಸರ್ವೆ ನಂ. 129/1ರಲ್ಲಿ 36 ಗುಂಟೆ ಜಮೀನಿದ್ದು, ಗ್ರಾಮೀಣ ಬ್ಯಾಂಕ್ ಹಾಗೂ ವ್ಯವಸಾಯ ಸೇವಾ ಸಹಕಾರ ಸಂಘದಿಂದ ಪಡೆದಿದ್ದ ಸಾಲವನ್ನು ತೀರಿಸಲು ಸಾಧ್ಯವಾಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು ಎನ್ನಲಾಗಿದೆ.
ಸಾಲವನ್ನು ತೀರಿಸಲು ಸಾಧ್ಯವಾಗದ ಕಾರಣದಿಂದ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಎರಡೂ ಘಟನೆಗಳಿಗೆ ಸಂಬಂಧಿಸಿದಂತೆ ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.






















