SK Home Ad
Home ಸುದ್ದಿ ವಿದೇಶ 11 ಭಾರತೀಯರಿದ್ದ ಹಡಗಿನ ಮೇಲೆ ದಾಳಿಯನ್ನು ಖಂಡಿಸಿದ ಭಾರತ

11 ಭಾರತೀಯರಿದ್ದ ಹಡಗಿನ ಮೇಲೆ ದಾಳಿಯನ್ನು ಖಂಡಿಸಿದ ಭಾರತ

0
86

ನವದೆಹಲಿ/ಮಸ್ಕಟ್: ಓಮನ್ ಕರಾವಳಿಯಲ್ಲಿ ಇಂದು ಮುಂಜಾನೆ ವಾಣಿಜ್ಯ ಹಡಗು ಜಿಎಫ್‌ಎಸ್ ಗ್ಯಾಲಕ್ಸಿ (GFS Galaxy) ಮೇಲೆ ನಡೆದ ದಾಳಿಯನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ. ಹಡಗಿನಲ್ಲಿ ಒಟ್ಟು 11 ಭಾರತೀಯ ಪ್ರಜೆಗಳು ಇದ್ದು, ಅವರಲ್ಲಿ 10 ಮಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಆದರೆ ಓರ್ವ ಭಾರತೀಯ ಪ್ರಜೆ ಇನ್ನೂ ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ಈ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಒಮಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಓಮನ್ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ತಿಳಿಸಿದೆ.

ಇದನ್ನೂ ಓದಿ: ಮುಂಬೈನ ಐತಿಹಾಸಿಕ ತಾಜ್ ಹೋಟೆಲ್‌ಗೆ ಬಾಂಬ್ ಬೆದರಿಕೆ ಕರೆ

ಓಮನ್ ಅಧಿಕಾರಿಗಳೊಂದಿಗೆ ಸಮನ್ವಯ : ಭಾರತೀಯ ರಾಯಭಾರ ಕಚೇರಿ ಮತ್ತು ಸ್ಥಳೀಯ ಆಡಳಿತಗಳು ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದು, ನಾಪತ್ತೆಯಾಗಿರುವ ಭಾರತೀಯ ಪ್ರಜೆಯ ಪತ್ತೆಗಾಗಿ ಎಲ್ಲ ರೀತಿಯ ಪ್ರಯತ್ನಗಳು ನಡೆಯುತ್ತಿವೆ. ಈ ಕಾರ್ಯಾಚರಣೆಯಲ್ಲಿ ಸಹಕಾರ ನೀಡುತ್ತಿರುವ ಓಮನ್ ಸರ್ಕಾರಕ್ಕೆ ಭಾರತ ಧನ್ಯವಾದಗಳನ್ನು ಸಲ್ಲಿಸಿದೆ.

ಸಮುದ್ರ ಮಾರ್ಗಗಳ ಮೇಲಿನ ದಾಳಿಗಳ ಬಗ್ಗೆ ಭಾರತಕ್ಕೆ ಕಳವಳ : ಈ ಪ್ರದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ವಾಣಿಜ್ಯ ಹಡಗುಗಳ ಮೇಲೆ ನಡೆಯುತ್ತಿರುವ ದಾಳಿಗಳ ಸಂಖ್ಯೆ ಹೆಚ್ಚುತ್ತಿರುವುದು ಭಾರತಕ್ಕೆ ಗಂಭೀರ ಕಳವಳ ಉಂಟುಮಾಡಿದೆ. ಇಂತಹ ಘಟನೆಗಳು ಜಾಗತಿಕ ವ್ಯಾಪಾರ ಮತ್ತು ಸಮುದ್ರ ಭದ್ರತೆಯ ಮೇಲೆ ದುಷ್ಪರಿಣಾಮ ಬೀರುತ್ತಿವೆ ಎಂದು ಭಾರತ ಆತಂಕ ವ್ಯಕ್ತಪಡಿಸಿದೆ. ವಿದೇಶಾಂಗ ಸಚಿವಾಲಯದ ಪ್ರಕಟಣೆಯಲ್ಲಿ, “ಪ್ರದೇಶದಲ್ಲಿ ಉದ್ವಿಗ್ನತೆಯನ್ನು ತಕ್ಷಣವೇ ಕಡಿಮೆ ಮಾಡಿ, ಶಾಂತಿ ಮತ್ತು ಸ್ಥಿರತೆಯನ್ನು ಮರುಸ್ಥಾಪಿಸಲು ರಾಜತಾಂತ್ರಿಕ ಮಾತುಕತೆಗಳಿಗೆ ವೇಗ ನೀಡಬೇಕು” ಎಂದು ಒತ್ತಾಯಿಸಲಾಗಿದೆ.

ಇದನ್ನೂ ಓದಿ: ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಶಾಸಕ ಸೈಯದ್ ಯಾಸೀನ್ ನಿಧನ

ವಾಣಿಜ್ಯ ಹಡಗುಗಳು ಮತ್ತು ನಾಗರಿಕ ಮೂಲಸೌಕರ್ಯಗಳ ಮೇಲೆ ದಾಳಿ ನಿಲ್ಲಬೇಕು : ಅಂತರರಾಷ್ಟ್ರೀಯ ಜಲಮಾರ್ಗಗಳಲ್ಲಿ ಸಾಗುವ ವಾಣಿಜ್ಯ ಹಡಗುಗಳು ಹಾಗೂ ನಾಗರಿಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ದಾಳಿಗಳನ್ನು ತಕ್ಷಣ ನಿಲ್ಲಿಸಬೇಕು ಎಂದು ಭಾರತ ಸ್ಪಷ್ಟಪಡಿಸಿದೆ. ಭಾರತವು ಅಂತರರಾಷ್ಟ್ರೀಯ ಕಾನೂನಿನ ಪ್ರಕಾರ ಸಮುದ್ರ ಮಾರ್ಗಗಳಲ್ಲಿ ಮುಕ್ತ, ಸುರಕ್ಷಿತ ಮತ್ತು ಅಡೆತಡೆಯಿಲ್ಲದ ಸಂಚಾರ ಹಾಗೂ ವಾಣಿಜ್ಯ ಚಟುವಟಿಕೆಗಳನ್ನು ಶೀಘ್ರ ಪುನಃಸ್ಥಾಪಿಸುವಂತೆ ಕರೆ ನೀಡಿದೆ.

ಜಾಗತಿಕ ವ್ಯಾಪಾರಕ್ಕೆ ಹೊಡೆತ : ಮಧ್ಯಪ್ರಾಚ್ಯ ಪ್ರದೇಶದ ಸಮುದ್ರ ಮಾರ್ಗಗಳು ಜಾಗತಿಕ ವ್ಯಾಪಾರದ ಪ್ರಮುಖ ಕೊಂಡಿಯಾಗಿದ್ದು, ಈ ಪ್ರದೇಶದಲ್ಲಿ ಉಂಟಾಗುತ್ತಿರುವ ಅಶಾಂತಿ ತೈಲ ಸಾಗಣೆ, ಸರಕು ಸರಬರಾಜು ಮತ್ತು ಅಂತರರಾಷ್ಟ್ರೀಯ ವಾಣಿಜ್ಯ ಚಟುವಟಿಕೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಜಾಗತಿಕ ಸಮುದಾಯವೂ ಪರಿಸ್ಥಿತಿಯ ಮೇಲೆ ಕಣ್ಣಿಟ್ಟಿದೆ.