ಮೈಸೂರು: ಭಾರತೀಯ ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರು ಶನಿವಾರ (ಜುಲೈ 11) ವಯೋಸಹಜ ಅನಾರೋಗ್ಯದಿಂದ ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು.
1938ರ ಏಪ್ರಿಲ್ 23ರಂದು ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಗ್ರಾಮದಲ್ಲಿ ಜನಿಸಿದ ಎಸ್. ಜಾನಕಿ ಅವರು ಬಾಲ್ಯದಲ್ಲಿಯೇ ಸಂಗೀತಾಭ್ಯಾಸ ಆರಂಭಿಸಿದರು. ಕೇವಲ ಮೂರು ವರ್ಷದ ವಯಸ್ಸಿನಲ್ಲೇ ಪೈಡಿಸ್ವಾಮಿ ಅವರ ಬಳಿ ಸಂಗೀತದ ಪಾಠ ಕಲಿಯಲು ಆರಂಭಿಸಿದ್ದ ಅವರು, ತಮ್ಮ ಅಪರೂಪದ ಗಾಯನ ಪ್ರತಿಭೆಯಿಂದ ಶೀಘ್ರವೇ ಗಮನ ಸೆಳೆದರು.
1956ರಲ್ಲಿ ಆಕಾಶವಾಣಿ ಆಯೋಜಿಸಿದ್ದ ಸಂಗೀತ ಸ್ಪರ್ಧೆಯಲ್ಲಿ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರಿಂದ ಪ್ರಶಸ್ತಿ ಸ್ವೀಕರಿಸಿದ ಜಾನಕಿ, ಬಳಿಕ ಚೆನ್ನೈಗೆ ತೆರಳಿ ಗಾಯನ ಕ್ಷೇತ್ರದಲ್ಲಿ ತಮ್ಮ ವೃತ್ತಿಜೀವನ ಆರಂಭಿಸಿದರು. ಲತಾ ಮಂಗೇಶ್ಕರ್ ಹಾಡಿದ್ದ ʻರಸಿಕ್ ಬಲ್ಮಾ’ ಗೀತೆಯನ್ನು ಹಾಡಿ ಎವಿಎಮ್ ಸ್ಟುಡಿಯೋ ಸಂಸ್ಥೆಯ ಗಮನ ಸೆಳೆದ ಅವರು, ಅಲ್ಲಿಂದಲೇ ಚಿತ್ರರಂಗದಲ್ಲಿ ಹಿನ್ನೆಲೆ ಗಾಯಕಿಯಾಗಿ ಭದ್ರ ನೆಲೆ ಕಂಡುಕೊಂಡರು.
ಸುಮಾರು ಆರು ದಶಕಗಳಿಗೂ ಹೆಚ್ಚು ಕಾಲದ ಸಂಗೀತ ಪಯಣದಲ್ಲಿ ಎಸ್. ಜಾನಕಿ ಅವರು ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ, ಒಡಿಯಾ, ಬಂಗಾಳಿ, ಮರಾಠಿ, ಕೊಂಕಣಿ, ತುಳು, ಉರ್ದು, ಪಂಜಾಬಿ, ಸಿಂಹಳ ಸೇರಿದಂತೆ 17ಕ್ಕೂ ಹೆಚ್ಚು ಭಾಷೆಗಳಲ್ಲಿ 48 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದಾರೆ. ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ಅವರು ಅತಿ ಹೆಚ್ಚು ಹಾಡುಗಳನ್ನು ಹಾಡಿರುವುದು ವಿಶೇಷ.
ಅವರ ಅಪೂರ್ವ ಗಾಯನ ಸೇವೆಗೆ ನಾಲ್ಕು ಬಾರಿ ಅತ್ಯುತ್ತಮ ಹಿನ್ನೆಲೆ ಗಾಯಕಿ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಇದಲ್ಲದೆ ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ಕೇರಳ ಸೇರಿದಂತೆ ವಿವಿಧ ರಾಜ್ಯ ಸರ್ಕಾರಗಳಿಂದ 28ಕ್ಕೂ ಹೆಚ್ಚು ರಾಜ್ಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಮಧುರ ಕಂಠ, ಭಾವಪೂರ್ಣ ಗಾಯನ ಮತ್ತು ಭಾಷೆಗಳ ಮೇಲಿನ ಹಿಡಿತದಿಂದ ಎಸ್. ಜಾನಕಿ ಅವರು ಹಲವು ತಲೆಮಾರುಗಳ ಸಂಗೀತಾಸಕ್ತರ ಮನಸ್ಸಿನಲ್ಲಿ ಅಚ್ಚಳಿಯದ ಸ್ಥಾನ ಪಡೆದಿದ್ದಾರೆ.





















