SK Home Ad
Home ನಮ್ಮ ಜಿಲ್ಲೆ ಮೈಸೂರು ರಾಜ್ಯದಲ್ಲಿ ಸದ್ಯಕ್ಕೆ ಲೋಡ್ ಶೆಡ್ಡಿಂಗ್ ಪ್ರಶ್ನೆಯೇ ಇಲ್ಲ

ರಾಜ್ಯದಲ್ಲಿ ಸದ್ಯಕ್ಕೆ ಲೋಡ್ ಶೆಡ್ಡಿಂಗ್ ಪ್ರಶ್ನೆಯೇ ಇಲ್ಲ

0
22

ಮೈಸೂರು: ರಾಜ್ಯದಲ್ಲಿ ಸದ್ಯಕ್ಕೆ ಲೋಡ್ ಶೆಡ್ಡಿಂಗ್ ಪ್ರಶ್ನೆಯೇ ಇಲ್ಲ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ ಹೇಳಿದರು.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಸಾವಿರ ಮೆಗಾವ್ಯಾಟ್ ವಿದ್ಯುತ್ ಕೊರತೆ ಇದೆ. ನಾವು ಹೇಗೊ ಬೇರೆ ಬೇರೆ ರಾಜ್ಯಗಳಿಂದ ತೆಗೆದುಕೊಂಡು ನಿರ್ವಹಣೆ ಮಾಡುತ್ತಿದ್ದೇವೆ. ಕಳೆದ ಏಳು ತಿಂಗಳಿಂದ ವಿದ್ಯುತ್ ಕೊರತೆ ಇದೆ. ಹಣ ಕೊಟ್ಟರು ಬೇರೆ ರಾಜ್ಯಗಳಿಂದ ಕೇಳಿದಷ್ಟು ಸಿಗುತ್ತಿಲ್ಲ. ದೇಶಾದ್ಯಂತ ಈ ಸಮಸ್ಯೆ ಇದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಕೈ ಮೀರಿದರೆ ಮುಖ್ಯಮಂತ್ರಿಗಳ ಜತೆ ಮಾತನಾಡಿ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.

ಈಗ ನಾವು ಎಲ್ಲೂ ಲೋಡ್ ಶೆಡ್ಡಿಂಗ್ ಮಾಡುತ್ತಿಲ್ಲ. ಒಂದು ವಾರದ ಹಿಂದೆ ಸ್ವಲ್ಪ ಸಮಸ್ಯೆಯಾದ ಕಾರಣ ಒಂದೆರೆಡು ದಿನ ಸಮಸ್ಯೆಯಾಗಿತ್ತು. ಕೃಷಿ ಹಾಗೂ ಮನೆ ಬಳಕೆಗೆ ನಾವು ವಿದ್ಯುತ್ ಕೊಡುತ್ತಿದ್ದೇವೆ. ಬೇರೆ ರಾಜ್ಯಗಳಿಂದ ಖರೀದಿ ಪ್ರಕ್ರಿಯೆ ನಿರಂತರವಾಗಿ ಸಾಗಿದೆ. ಉತ್ಪಾದನಾ ಘಟಕಗಳನ್ನ ಹೆಚ್ಚು ಮಾಡುವ ಪ್ರಕ್ರಿಯೆ ಜಾರಿಯಲ್ಲಿದೆ. ದಸರಾಗೆ ಯಾವ ವಿದ್ಯುತ್ ಕೊರತೆ ಆಗಲ್ಲ ಎಂದರು.

ಸಿದ್ದರಾಮಯ್ಯರೊಂದಿಗೆ ಎಲ್ಲರೂ ಚೆನ್ನಾಗಿದ್ದೇವೆ. ಮಾಜಿ ಸಿಎಂ ಸಿದ್ದರಾಮಯ್ಯ ದೊಡ್ಡ ನಾಯಕರು. ಅವರು ಯಾವಾಗ ಮಾತನಾಡಬೇಕೊ ಆಗ ಮಾತನಾಡುತ್ತಾರೆ. ಅವರು ಮುಖ್ಯಮಂತ್ರಿಗಳು ಎಲ್ಲರೂ ಚೆನ್ನಾಗಿಯೇ ಇದ್ದಾರೆ. ಅವರು ಮೌನವಾಗಿದ್ದಾರೆ ಎಂದು ನಿಮಗೆ ಹೇಳಿದವರು ಯಾರು. ಸಮಯ ಸಂದರ್ಭ ಬಂದಾಗ ಅವರು ಮಾತನಾಡುತ್ತಾರೆ ಎಂದರು.

ಸಿದ್ದರಾಮಯ್ಯ ಜೊತೆಗೆ ಅವರ ಎಲ್ಲಾ ಸ್ನೇಹಿತರು ಚೆನ್ನಾಗಿಯೇ ಇದ್ದಾರೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಎಲ್ಲರೂ ಜೊತೆಯಲ್ಲಿದ್ದರು. ನಾವು ಕಾಂಗ್ರೆಸ್‌ನವರು ಒಂದೇ ಕುಟುಂಬದವರ ರೀತಿ ಇದ್ದೇವೆ. ನಾನು ಸಿದ್ದರಾಮಯ್ಯ ಮಾತ್ರ ಆತ್ಮೀಯ ಅಲ್ಲ. ನಾನು ಇವತ್ತಿನ ಸಿಎಂಗೂ ಆತ್ಮೀಯನೇ. ಹಿಂದೆ ಇದ್ದ ಎಲ್ಲಾ ಸಿಎಂಗಳಿಗೆ ನಾನು ಆತ್ಮೀಯ. ನಾನು ಎಲ್ಲರ ಜೊತೆಯಲ್ಲಿ ಚೆನ್ನಾಗಿಯೇ ಇದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಗರಂ ಆದ ಸಚಿವ: ಗಣಪತಿ ಆತ್ಮಹತ್ಯೆ ಕೇಸ್‌ನಲ್ಲೂ ಮಾಧ್ಯಮಗಳು ನನ್ನ ಮೇಲೆ ಬಿದ್ದವು. ಅವರು ಒಂದು ವಿಡಿಯೋ ಹಿಡಿದುಕೊಂಡು ತಿಂಗಳುಗಟ್ಟಲೇ ವರದಿ ಮಾಡಿದವು. ಸತ್ಯ ಏನೇಂಬುದು ಆ ನಂತರ ತಾನೇ ಗೊತ್ತಾಗಿದ್ದು. ಈಗ ಎಇಇ ಕೇಸ್ ಕೂಡ ಅಷ್ಟೇ. ಇದನ್ನು ಏಕೆ ದೊಡ್ಡದು ಮಾಡುತ್ತಿದ್ದೀರಾ ಎಂದು ಗರಂ ಆದರು.

ಸರ್ಕಾರ ಅನುದಾನ ಕೊಡಲಿಲ್ಲ ಅಂಥ ಚೀಟಿ ಬರೆದಿಟ್ಟು ಕಣ್ಮರೆಯಾಗಿರುವುದನ್ನು ಹೇಗೆ ನಂಬುತ್ತೀರಾ ಹೇಳಿ. ಎಇಇಗೆ ಅಂತಹ ಒತ್ತಡ ಏನಿರುತ್ತದೆ. ಅನುದಾನದ ಒತ್ತಡ ಅವರ ಮೇಲೆ ಯಾಕೆ ಬರಬೇಕು. ಅವರೇನು ಆರ್ಥಿಕ ಇಲಾಖೆ ಅಧಿಕಾರಿನಾ?. ಈ ಕೇಸ್‌ನಲ್ಲಿ ಎಲ್ಲಿಂದ ಎಲ್ಲಿಗೆ ಸಂಬಂಧಗಳು ಕಾಣುತ್ತಿದೆ ಹೇಳಿ. ಇವರಿಗೆ ಸರ್ಕಾರ ಹೇಳಿತ್ತಾ ಒತ್ತಡ ತೆಗೆದುಕೋ ಅಂಥ. ಸುಮ್ಮನೆ ಇದನ್ನ ದೊಡ್ಡದು ಮಾಡಿಕೊಂಡು ಕೂರಬೇಡಿ. ನಾನು ಆ ಇಲಾಖೆ ಸಚಿವ ಅಲ್ಲ. ಆ ಇಲಾಖೆ ಸಚಿವರು ಆ ಬಗ್ಗೆ ಮಾತನಾಡುತ್ತಾರೆ. ನನಗೆ ನನ್ನ ಸ್ವಂತ ಅನುಭವ ಆದ ಕಾರಣ ಈಗ ಈ ಕೇಸ್ ಬಗ್ಗೆ ಮಾತನಾಡುತ್ತಿದ್ದೇನೆ ಎಂದು ಹೇಳಿದರು.