SK Home Ad
Home ನಮ್ಮ ಜಿಲ್ಲೆ ಉತ್ತರ ಕನ್ನಡ ಯುವತಿಗೆ ಅಶ್ಲೀಲ ಸಂದೇಶ ಆರೋಪ: ಪೊಲೀಸ್ ಕಾನ್ಸ್ಟೇಬಲ್ ಅಮಾನತು

ಯುವತಿಗೆ ಅಶ್ಲೀಲ ಸಂದೇಶ ಆರೋಪ: ಪೊಲೀಸ್ ಕಾನ್ಸ್ಟೇಬಲ್ ಅಮಾನತು

0
130

ಕಾರವಾರದಿಂದ ಬಂದ ಅಧಿಕಾರಿಗಳಿಂದ ದಾಂಡೇಲಿಯಲ್ಲಿ ಸ್ಥಳ ಪರಿಶೀಲನೆ, ಪಂಚನಾಮೆ; ಪಿಸಿ ಇಮ್ರಾನ್ ಪಾತ್ರದ ಬಗ್ಗೆಯೂ ತನಿಖೆ ಚುರುಕು.

ದಾಂಡೇಲಿ (ಉತ್ತರ ಕನ್ನಡ) ಸಂ. ಕ. ಸಮಾಚಾರ: ಯುವತಿಗೆ ಅಶ್ಲೀಲ ಸಂದೇಶ ಕಳುಹಿಸಿದ ಆರೋಪದ ಹಿನ್ನೆಲೆಯಲ್ಲಿ ದಾಂಡೇಲಿ ನಗರ ಪೊಲೀಸ್ ಠಾಣೆಯ ಪೊಲೀಸ್ ಕಾನ್ಸ್ಟೇಬಲ್ ಮಾಂತೇಶ್ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರವಾರದಿಂದ ಹಿರಿಯ ಪೊಲೀಸ್ ಅಧಿಕಾರಿಗಳ ತಂಡವು ಶನಿವಾರ ದಾಂಡೇಲಿಗೆ ಆಗಮಿಸಿ ಯುವತಿಯ ಉಪಸ್ಥಿತಿಯಲ್ಲಿ ಸ್ಥಳ ಪರಿಶೀಲನೆ, ಪಂಚನಾಮೆ ಹಾಗೂ ಸಾಕ್ಷ್ಯ ಸಂಗ್ರಹ ಕಾರ್ಯ ನಡೆಸಿತು.

ಯುವತಿಯು ನೀಡಿದ ದೂರಿನ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ತೀವ್ರಗೊಳಿಸಲಾಗಿದ್ದು, ಘಟನೆಯ ಎಲ್ಲ ಆಯಾಮಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ತನಿಖೆಯ ಭಾಗವಾಗಿ ಸಂಬಂಧಪಟ್ಟ ಸ್ಥಳಗಳಿಗೆ ಭೇಟಿ ನೀಡಿ ಅಗತ್ಯ ಮಾಹಿತಿಯನ್ನು ಕಲೆಹಾಕಿದ ಅಧಿಕಾರಿಗಳು, ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು ಮತ್ತು ಇತರೆ ಸಾಕ್ಷ್ಯಾಧಾರಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಇದೇ ಪ್ರಕರಣದಲ್ಲಿ ಮತ್ತೋರ್ವ ಪೊಲೀಸ್ ಕಾನ್ಸ್ಟೇಬಲ್ ಇಮ್ರಾನ್ ಅವರ ಪಾತ್ರದ ಬಗ್ಗೆಯೂ ತನಿಖೆ ಮುಂದುವರಿದಿದೆ. ಅವರ ವಿರುದ್ಧದ ಆರೋಪಗಳ ಕುರಿತು ಅಧಿಕಾರಿಗಳು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುತ್ತಿದ್ದು, ತನಿಖೆಯ ವರದಿ ಆಧರಿಸಿ ಇಲಾಖಾ ಹಾಗೂ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

ಪ್ರಕರಣ ಪೊಲೀಸ್ ಇಲಾಖೆಯಲ್ಲಿಯೇ ಚರ್ಚೆಗೆ ಗ್ರಾಸವಾಗಿದ್ದು, ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ತನಿಖೆ ಇನ್ನೂ ಮುಂದುವರಿದಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಮಾಹಿತಿ ಬಹಿರಂಗವಾಗುವ ನಿರೀಕ್ಷೆಯಿದೆ. ದೂರುದಾರೇ ಯುವತಿಯ ಮೇಲೆ ದೂರು ಹಿಂಪಡೆಯುವಂತೆ ಒತ್ತಡ ಹೇರಲಾಗುತ್ತಿದೆಯೆನ್ನಲಾಗಿದೆ.