ಬೆಂಗಳೂರು ಹಸಿರು ಮಾರ್ಗ ಮೆಟ್ರೋ ಸೇವೆಯಲ್ಲಿ ತಾಂತ್ರಿಕ ದೋಷ; ಪ್ರಯಾಣಿಕರಿಗೆ ತಾತ್ಕಾಲಿಕ ತೊಂದರೆ
ಬೆಂಗಳೂರು: ನಗರದ ನಿತ್ಯ ಲಕ್ಷಾಂತರ ಪ್ರಯಾಣಿಕರ ಜೀವನಾಡಿಯಾಗಿರುವ ನಾಡಪ್ರಭು ಕೆಂಪೇಗೌಡ ಮೆಟ್ರೋ ರೈಲು ನಿಗಮದ (BMRCL) ಹಸಿರು ಮಾರ್ಗ ಮೆಟ್ರೋ ಸೇವೆಯಲ್ಲಿ ತಾಂತ್ರಿಕ ದೋಷ ಉಂಟಾಗಿ, ಗುರುವಾರ ಬೆಳಿಗ್ಗೆ ಕೆಲಕಾಲ ಸಂಚಾರದಲ್ಲಿ ವಿಳಂಬ ಉಂಟಾಯಿತು. ಈ ಬಗ್ಗೆ BMRCL ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಮಾಹಿತಿ ನೀಡಿದ್ದು, ಸಮಸ್ಯೆಯನ್ನು ತುರ್ತಾಗಿ ಪರಿಹರಿಸಲು ತಾಂತ್ರಿಕ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದೆ.
BMRCL ಪ್ರಕಟಣೆಯ ಪ್ರಕಾರ, ಹಸಿರು ಮಾರ್ಗದಲ್ಲಿ ಸಂಭವಿಸಿದ ತಾಂತ್ರಿಕ ಸಮಸ್ಯೆಯಿಂದಾಗಿ ರೈಲುಗಳ ಸಂಚಾರದಲ್ಲಿ ವಿಳಂಬ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರು ನಿಲ್ದಾಣಗಳಲ್ಲಿ ಹೆಚ್ಚುವರಿ ಸಮಯ ಕಾಯಬೇಕಾದ ಪರಿಸ್ಥಿತಿ ಎದುರಾಯಿತು. ಕೆಲವು ನಿಲ್ದಾಣಗಳಲ್ಲಿ ಜನಸಂದಣಿ ಕೂಡ ಹೆಚ್ಚಾಗಿದ್ದು, ಕಚೇರಿಗೆ ತೆರಳುತ್ತಿದ್ದವರು ಮತ್ತು ವಿದ್ಯಾರ್ಥಿಗಳು ತೊಂದರೆ ಅನುಭವಿಸಿದರು.
ಇದನ್ನೂ ಓದಿ: ಅರಬೈಲ್ ಘಾಟ್ ಬಳಿ ಭೀಕರ ಅಪಘಾತ: ಧಾರವಾಡ ಮೂಲದ ಆರು ಜನ ಸಾವು!
“ಸಮಸ್ಯೆಯನ್ನು ತುರ್ತಾಗಿ ಪರಿಹರಿಸಲು ನಮ್ಮ ತಾಂತ್ರಿಕ ಸಿಬ್ಬಂದಿ ಆದ್ಯತೆಯ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದು, ಸಾಧ್ಯವಾದಷ್ಟು ಬೇಗ ಸಾಮಾನ್ಯ ಮೆಟ್ರೋ ಸಂಚಾರವನ್ನು ಪುನಃಸ್ಥಾಪಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಉಂಟಾದ ಅನಾನುಕೂಲತೆಗೆ ವಿಷಾದಿಸುತ್ತೇವೆ” ಎಂದು BMRCL ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಬೆಂಗಳೂರು ಮೆಟ್ರೋದಲ್ಲಿ ಇತ್ತೀಚಿನ ದಿನಗಳಲ್ಲಿ ಹಲವು ಬಾರಿ ತಾಂತ್ರಿಕ ದೋಷಗಳು ವರದಿಯಾಗಿದ್ದು, ನೇರಳೆ ಮಾರ್ಗ ಮತ್ತು ಹಸಿರು ಮಾರ್ಗಗಳಲ್ಲಿ ಕೆಲಕಾಲ ಸೇವೆ ವ್ಯತ್ಯಯ ಉಂಟಾಗಿದ್ದ ಘಟನೆಗಳು ನಡೆದಿವೆ. ಇಂತಹ ಘಟನೆಗಳಿಂದ ನಿತ್ಯ ಪ್ರಯಾಣಿಕರು ಪರ್ಯಾಯ ಸಾರಿಗೆ ವ್ಯವಸ್ಥೆಗೆ ಮೊರೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.
ಇದನ್ನೂ ಓದಿ: ಅಯೋಗ್ಯ 2 ಚಿತ್ರದ ಎರಡನೇ ಹಾಡು ಅನಾವರಣ
ಪ್ರಸ್ತುತ ತಾಂತ್ರಿಕ ತಂಡ ಸಮಸ್ಯೆ ನಿವಾರಣೆಗೆ ಶ್ರಮಿಸುತ್ತಿದ್ದು, ಶೀಘ್ರದಲ್ಲೇ ಮೆಟ್ರೋ ಸೇವೆ ಸಾಮಾನ್ಯ ಸ್ಥಿತಿಗೆ ಮರಳುವ ನಿರೀಕ್ಷೆಯಿದೆ. ಪ್ರಯಾಣಿಕರು ಮೆಟ್ರೋ ನಿಲ್ದಾಣಗಳಿಗೆ ತೆರಳುವ ಮುನ್ನ BMRCL ಅಧಿಕೃತ ಸಾಮಾಜಿಕ ಜಾಲತಾಣ ಹಾಗೂ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಸೇವೆಯ ಮಾಹಿತಿ ಪರಿಶೀಲಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.






















