SK Home Ad
Home ಕ್ರೀಡೆ ‘ಅದು ಕಾಕತಾಳೀಯವಾಗಿ ಸಿಕ್ಕಿಬಿದ್ದ ಸತ್ಯ’: ಸ್ಯಾಂಡ್‌ ಪೇಪರ್‌ಗೇಟ್ ವಿವಾದ ಬಯಲಾದ ರಹಸ್ಯ ಬಿಚ್ಚಿಟ್ಟ ಬ್ರಾಡ್‌ಕಾಸ್ಟರ್!

‘ಅದು ಕಾಕತಾಳೀಯವಾಗಿ ಸಿಕ್ಕಿಬಿದ್ದ ಸತ್ಯ’: ಸ್ಯಾಂಡ್‌ ಪೇಪರ್‌ಗೇಟ್ ವಿವಾದ ಬಯಲಾದ ರಹಸ್ಯ ಬಿಚ್ಚಿಟ್ಟ ಬ್ರಾಡ್‌ಕಾಸ್ಟರ್!

0
26

ವಿಶ್ವ ಕ್ರಿಕೆಟ್‌ ಇತಿಹಾಸದಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಶಾಶ್ವತ ಕಪ್ಪುಚುಕ್ಕೆ ತಂದಿಟ್ಟ 2018ರ ‘ಸ್ಯಾಂಡ್‌ಪೇಪರ್‌ಗೇಟ್’ ಚೆಂಡು ವಿರೂಪಗೊಳಿಸಿದ ಹಗರಣ (ಬಾಲ್ ಟ್ಯಾಂಪರಿಂಗ್) ಆಕಸ್ಮಿಕವಾಗಿ ಕ್ಯಾಮೆರಾ ಕಣ್ಣಿಗೆ ಬಿದ್ದ ಘಟನೆ ಎಂದು ಅಂದಿನ ಪ್ರಸಾರ ಮುಖ್ಯಸ್ಥ ಆಲ್ವಿನ್ ನಾಯ್ಕರ್ ಬಹಿರಂಗಪಡಿಸಿದ್ದಾರೆ. ಡರ್ಬನ್‌ನಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ-ಆಸ್ಟ್ರೇಲಿಯಾ ನಡುವಣ ಟೆಸ್ಟ್ ಸರಣಿ ಮುನ್ನ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಆಸ್ಟ್ರೇಲಿಯಾ ಆಟಗಾರರು ಸಿಕ್ಕಿಬಿದ್ದಿದ್ದು ಸಂಪೂರ್ಣ ಕಾಕತಾಳೀಯ ಎಂದಿದ್ದಾರೆ.

“ಆಸ್ಟ್ರೇಲಿಯಾ ತಂಡ ಮೋಸ ಮಾಡುತ್ತಿದೆ ಎಂಬುದನ್ನು ಪತ್ತೆಹಚ್ಚುವ ಯಾವುದೇ ಪೂರ್ವ ಉದ್ದೇಶ ನಮ್ಮ ಪ್ರಸಾರ ತಂಡಕ್ಕೆ ಇರಲಿಲ್ಲ. ಚೆಂಡು ವಿಕೆಟ್‌ಕೀಪರ್ ಕೈಯಿಂದ ಕ್ಯಾಮರೂನ್ ಬ್ಯಾನ್‌ಕ್ರಾಫ್ಟ್ ಕೈಗೆ ಹೋದಾಗ, ಅವರು ಸಾಮಾನ್ಯದಂತೆ ಪ್ಯಾಂಟ್‌ಗೆ ಉಜ್ಜದೆ ಹಸ್ತಕ್ಕೆ ಉಜ್ಜುತ್ತಿದ್ದರು. ಇದರಿಂದ ಸಂಶಯಗೊಂಡ ಕ್ಯಾಮೆರಾಮನ್ ಬ್ಯಾನ್‌ಕ್ರಾಫ್ಟ್ ಮೇಲೆ ಜೂಮ್ ಮಾಡಿದರು. ಅವರು ತಮ್ಮ ಕೈಯನ್ನು ಪ್ಯಾಂಟ್ ಜೇಬಿನೊಳಗೆ ಹಾಕಿದಾಗ, ಸ್ಲೋ-ಮೋಷನ್ ಆಪರೇಟರ್ ಜೂಮ್ ಮಾಡಿ ಹಳದಿ ಬಣ್ಣದ ವಸ್ತುವಿರುವುದನ್ನು (ಸ್ಯಾಂಡ್‌ಪೇಪರ್) ಪತ್ತೆಹಚ್ಚಿದರು” ಎಂದು ನಾಯ್ಕರ್ ವಿವರಿಸಿದ್ದಾರೆ.

ಆ ದೃಶ್ಯವನ್ನು ಮೈದಾನದ ದೊಡ್ಡ ಪರದೆಯ ಮೇಲೆ ರಿಪ್ಲೇ ತೋರಿಸುತ್ತಿದ್ದಂತೆ ಗಾಬರಿಗೊಂಡ ಬ್ಯಾನ್‌ಕ್ರಾಫ್ಟ್, ಸ್ಯಾಂಡ್‌ಪೇಪರ್ ಅನ್ನು ಪ್ಯಾಂಟ್‌ನಿಂದ ಒಳಉಡುಪಿನೊಳಗೆ (ಅಂಡರ್‌ವೇರ್) ಬಚ್ಚಿಟ್ಟುಕೊಂಡಿದ್ದನ್ನು ಕ್ಯಾಮೆರಾ ಸೆರೆಹಿಡಿಯಿತು.

ಈ ಕುಖ್ಯಾತ ಘಟನೆಯ ನಂತರ ಅಂದಿನ ನಾಯಕ ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ತಲಾ 12 ತಿಂಗಳ ನಿಷೇಧಕ್ಕೊಳಗಾಗಿ ನಾಯಕತ್ವ ಕಳೆದುಕೊಂಡರೆ, ಬ್ಯಾನ್‌ಕ್ರಾಫ್ಟ್ 9 ತಿಂಗಳು ಕ್ರಿಕೆಟ್‌ನಿಂದ ದೂರ ಉಳಿಯಬೇಕಾಯಿತು. 2018ರ ಬಳಿಕ ದಕ್ಷಿಣ ಆಫ್ರಿಕಾ ನೆಲದಲ್ಲಿ ಆಸ್ಟ್ರೇಲಿಯಾ ಮೊದಲ ಟೆಸ್ಟ್ ಆಡುತ್ತಿದ್ದು, ಸ್ಮಿತ್ ಮಾತ್ರ ಆ ವಿವಾದಿತ ತಂಡದಿಂದ ಸದ್ಯ ಆಡುತ್ತಿರುವ ಏಕೈಕ ಆಟಗಾರರಾಗಿದ್ದಾರೆ.