ದಾವಣಗೆರೆ: ಪ್ರೀತಿಸಿ ವಿವಾಹವಾಗಿದ್ದ ದಂಪತಿ ಜೀವಭಯದಿಂದ ಪೊಲೀಸ್ ರಕ್ಷಣೆ ಕೋರಿ ಠಾಣೆಗೆ ಬಂದಿದ್ದ ವೇಳೆ, ಯುವಕನ ಮೇಲೆ ಚಾಕುವಿನಿಂದ ಹಲ್ಲೆ ನಡೆದ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬಸವಾಪಟ್ಟಣ ಪೊಲೀಸ್ ಠಾಣೆ ಆವರಣದಲ್ಲಿ ಭಾನುವಾರ ಸಂಜೆ ನಡೆದಿದೆ.
ಚನ್ನಗಿರಿ ತಾಲೂಕಿನ ಕಂಚುಗಾರನಹಳ್ಳಿಯ ಸಿದ್ದೇಶ್ ಗಾಯಗೊಂಡ ಯುವಕರಾಗಿದ್ದು, ಚಾಕು ಇರಿತದಿಂದ ಅವರ ಬಲಗೈಗೆ ಗಂಭೀರ ಗಾಯಗಳಾಗಿವೆ. ತಕ್ಷಣ ಅವರನ್ನು ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಾಹಿತಿಯ ಪ್ರಕಾರ, ಸಿದ್ದೇಶ್ ಮೈಸೂರಿನ ಫಾರಂ ಹೌಸ್‌ನಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ನಾಲ್ಕು ವರ್ಷಗಳಿಂದ ದಾಗಿನಕಟ್ಟೆ ಗ್ರಾಮದ ಲೀಲಾವತಿ ಅವರನ್ನು ಪ್ರೀತಿಸುತ್ತಿದ್ದರು. ಇಬ್ಬರ ಪ್ರೀತಿಗೆ ಯುವತಿಯ ಕುಟುಂಬದ ವಿರೋಧವಿದ್ದರೂ, ಜುಲೈ 1ರಂದು ಇಬ್ಬರೂ ವಿವಾಹವಾಗಿದ್ದರು.
ಇದಕ್ಕೂ ಮುನ್ನ, ಜೂನ್ 30ರಂದು ಲೀಲಾವತಿ ನಾಪತ್ತೆಯಾಗಿರುವ ಕುರಿತು ಅವರ ಪೋಷಕರು ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಜೀವಭಯ ಇರುವುದಾಗಿ ತಿಳಿಸಿ ದಂಪತಿ ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ರಕ್ಷಣೆ ಕೋರಿದ್ದರು. ಅವರ ಸೂಚನೆಯಂತೆ ವಕೀಲರೊಂದಿಗೆ ಬಸವಾಪಟ್ಟಣ ಪೊಲೀಸ್ ಠಾಣೆಗೆ ತೆರಳಿದ್ದ ವೇಳೆ, ಯುವತಿಯ ಸಂಬಂಧಿಕರು ಸಿದ್ದೇಶ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ದಾಳಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಸಿದ್ದೇಶ್ ಅವರ ಬಲಗೈಗೆ ತೀವ್ರ ಗಾಯಗಳಾಗಿದ್ದು, ಪತಿಯನ್ನು ರಕ್ಷಿಸಲು ಮುಂದಾದ ಲೀಲಾವತಿ ಮೇಲೂ ಹಲ್ಲೆಗೆ ಯತ್ನಿಸಲಾಗಿದೆ ಎಂದು ತಿಳಿದುಬಂದಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿ, ಚಾಕು ದಾಳಿ ನಡೆಸಿದ ಆರೋಪದ ಮೇಲೆ ನಾಗರಾಜನನ್ನು ವಶಕ್ಕೆ ಪಡೆದಿದ್ದಾರೆ.
ಘಟನೆಯ ಬಳಿಕ ಮಾತನಾಡಿದ ಲೀಲಾವತಿ, “ನನಗೆ ಮತ್ತು ನನ್ನ ಪತಿಗೆ ಸೂಕ್ತ ಪೊಲೀಸ್ ರಕ್ಷಣೆ ನೀಡಬೇಕು. ನಮ್ಮಿಬ್ಬರ ಕೊಲೆಗೆ ಯತ್ನಿಸಿದ ನಾಗರಾಜ ಹಾಗೂ ನನ್ನ ಅಣ್ಣ ಮಂಜುನಾಥ ವಿರುದ್ಧವೂ ದೂರು ದಾಖಲಿಸುತ್ತೇನೆ” ಎಂದು ತಿಳಿಸಿದ್ದಾರೆ.
ಈ ಸಂಬಂಧ ನಾಗರಾಜ ಸೇರಿದಂತೆ ಯುವತಿಯ ಕಡೆಯವರ ವಿರುದ್ಧ ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.




















