ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದ ದೇಣಿಗೆ ದುರ್ಬಳಕೆ ಆರೋಪಗಳ ಕುರಿತು ಅರವಿಂದ್ ಕೇಜ್ರಿವಾಲ್, ಪ್ರಿಯಾಂಕಾ ಗಾಂಧಿ ಸೇರಿದಂತೆ ವಿರೋಧ ಪಕ್ಷದ ನಾಯಕರ ಹೇಳಿಕೆ ದಾಖಲಿಸಿ, ಆರೋಪಗಳಿಗೆ ಪುರಾವೆ ಸಲ್ಲಿಸುವಂತೆ ವಿಶ್ವ ಹಿಂದೂ ಪರಿಷತ್ ಅಂತರರಾಷ್ಟ್ರೀಯ ಅಧ್ಯಕ್ಷ ಅಲೋಕ್ ಕುಮಾರ್ ಅಯೋಧ್ಯೆ ಪೊಲೀಸರಿಗೆ ಮನವಿ ಮಾಡಿದ್ದಾರೆ.
ನವದೆಹಲಿ/ಅಯೋಧ್ಯೆ: ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದ ದೇಣಿಗೆ ದುರ್ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್ (ವಿಹೆಚ್‌ಪಿ) ಅಂತರರಾಷ್ಟ್ರೀಯ ಅಧ್ಯಕ್ಷ ಅಲೋಕ್ ಕುಮಾರ್ ಅವರು ಅಯೋಧ್ಯೆ ಡಿಎಸ್ಪಿ ಹಾಗೂ ತನಿಖಾಧಿಕಾರಿಗೆ ಪತ್ರ ಬರೆದು, ಆರೋಪಗಳನ್ನು ಸಾರ್ವಜನಿಕವಾಗಿ ಮಾಡಿರುವ ವಿರೋಧ ಪಕ್ಷದ ನಾಯಕರ ಹೇಳಿಕೆಗಳನ್ನು ದಾಖಲಿಸುವಂತೆ ಮನವಿ ಮಾಡಿದ್ದಾರೆ.
ಪತ್ರದಲ್ಲಿ ಅರವಿಂದ್ ಕೇಜ್ರಿವಾಲ್, ರಾಮ್ ಗೋಪಾಲ್ ಯಾದವ್, ಸಂಜಯ್ ಸಿಂಗ್ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಹಲವು ನಾಯಕರನ್ನು ಉಲ್ಲೇಖಿಸಿರುವ ಅಲೋಕ್ ಕುಮಾರ್, ಅವರು ಮಾಡಿರುವ ಆರೋಪಗಳಿಗೆ ವಾಸ್ತವಿಕ ಆಧಾರ, ಮಾಹಿತಿ ಮೂಲಗಳು ಹಾಗೂ ಪೋಷಕ ದಾಖಲೆಗಳನ್ನು ತನಿಖಾಧಿಕಾರಿಗಳ ಮುಂದೆ ಸಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ತಂದೆ-ಮಗನ ಹೊಸ ಸಿನಿಮಾಗಳಿಗೆ ಮುಹೂರ್ತ: DK ಸಮ್ಮುಖದಲ್ಲಿ ಶುಭಾರಂಭ
ಪುರಾವೆ ಇದ್ದರೆ ತನಿಖೆಗೆ ನೆರವು : ಅಲೋಕ್ ಕುಮಾರ್ ಅವರ ಪತ್ರದಲ್ಲಿ, ಆರೋಪಗಳನ್ನು ಸಮರ್ಥಿಸುವ ದಾಖಲೆಗಳು ಅಥವಾ ವಿಶ್ವಾಸಾರ್ಹ ಮಾಹಿತಿ ಇದ್ದರೆ ಅವುಗಳನ್ನು ತನಿಖಾ ತಂಡಕ್ಕೆ ನೀಡಬೇಕು. ಅದರಿಂದ ನಡೆಯುತ್ತಿರುವ ತನಿಖೆಗೆ ಸಹಕಾರವಾಗುತ್ತದೆ ಎಂದು ಉಲ್ಲೇಖಿಸಲಾಗಿದೆ.
ಸಾಕ್ಷ್ಯವಿಲ್ಲದ ಆರೋಪಗಳ ವಿರುದ್ಧ ಕ್ರಮಕ್ಕೆ ಆಗ್ರಹ: ಯಾವುದೇ ಪುರಾವೆ ಇಲ್ಲದೆ ಸಾರ್ವಜನಿಕವಾಗಿ ಗಂಭೀರ ಆರೋಪಗಳನ್ನು ಮಾಡಿದ್ದರೆ, ಸಂಬಂಧಪಟ್ಟವರ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳುವಂತೆ ಅಲೋಕ್ ಕುಮಾರ್ ತಮ್ಮ ಪತ್ರದಲ್ಲಿ ಆಗ್ರಹಿಸಿದ್ದಾರೆ. ಇಂತಹ ಹೇಳಿಕೆಗಳು ಸಾರ್ವಜನಿಕರಲ್ಲಿ ಗೊಂದಲ ಉಂಟುಮಾಡುವ ಸಾಧ್ಯತೆ ಇರುವುದರಿಂದ ತನಿಖೆ ವಾಸ್ತವಾಂಶಗಳ ಆಧಾರದಲ್ಲೇ ನಡೆಯಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಅಪ್ರಾಪ್ತ ಬಾಲಕಿ ದೂರು: POCSO ಪ್ರಕರಣದಲ್ಲಿ PSI ಬಂಧನ!
ಹಿನ್ನಲೆ ಏನು? : ಇತ್ತೀಚೆಗೆ ಅಯೋಧ್ಯೆಯ ರಾಮ ಜನ್ಮಭೂಮಿ ದೇವಾಲಯದ ದೇಣಿಗೆ ನಿರ್ವಹಣೆಗೆ ಸಂಬಂಧಿಸಿದ ಆರೋಪಗಳು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿವೆ. ಪ್ರಕರಣದ ತನಿಖೆ ಈಗಾಗಲೇ ನಡೆಯುತ್ತಿದ್ದು, ಈ ನಡುವೆ ವಿಹೆಚ್‌ಪಿ ತನಿಖಾಧಿಕಾರಿಗೆ ಪತ್ರ ಬರೆದು ವಿರೋಧ ಪಕ್ಷದ ನಾಯಕರ ಹೇಳಿಕೆಗಳನ್ನೂ ತನಿಖೆಯ ಭಾಗವಾಗಿಸಬೇಕೆಂದು ಮನವಿ ಮಾಡಿದೆ.
ತನಿಖೆಯತ್ತ ಗಮನ : ಈ ಬೆಳವಣಿಗೆಯೊಂದಿಗೆ ಪ್ರಕರಣ ಮತ್ತಷ್ಟು ರಾಜಕೀಯ ಮಹತ್ವ ಪಡೆದುಕೊಂಡಿದ್ದು, ತನಿಖಾ ಸಂಸ್ಥೆಗಳು ಯಾವ ರೀತಿಯ ಮುಂದಿನ ಕ್ರಮ ಕೈಗೊಳ್ಳಲಿವೆ ಎಂಬುದರತ್ತ ರಾಜಕೀಯ ವಲಯ ಹಾಗೂ ಸಾರ್ವಜನಿಕರ ಗಮನ ನೆಟ್ಟಿದೆ. ಆರೋಪಗಳ ಸತ್ಯಾಸತ್ಯತೆಯನ್ನು ತನಿಖೆಯೇ ನಿರ್ಧರಿಸಬೇಕಾಗಿದ್ದು, ಯಾವುದೇ ಆರೋಪದ ಬಗ್ಗೆ ಅಂತಿಮ ತೀರ್ಮಾನ ನ್ಯಾಯಾಂಗ ಮತ್ತು ತನಿಖಾ ಪ್ರಕ್ರಿಯೆಯ ಬಳಿಕವೇ ಹೊರಬರಲಿದೆ.




















