SK Home Ad
Home ಸಿನಿ ಮಿಲ್ಸ್ ‘ಸೃಜನಾತ್ಮಕ ಸ್ವಾತಂತ್ರ್ಯವಿಲ್ಲ’: ಚಿತ್ರ ನಿರ್ದೇಶನದಿಂದ ದೂರ ಸರಿದ ಬಾಲಿವುಡ್ ದಿಕ್ಸೂಚಿ ಮಹೇಶ್ ಭಟ್

‘ಸೃಜನಾತ್ಮಕ ಸ್ವಾತಂತ್ರ್ಯವಿಲ್ಲ’: ಚಿತ್ರ ನಿರ್ದೇಶನದಿಂದ ದೂರ ಸರಿದ ಬಾಲಿವುಡ್ ದಿಕ್ಸೂಚಿ ಮಹೇಶ್ ಭಟ್

0
25

ಬಾಲಿವುಡ್‌ನ ಖ್ಯಾತ ಹಿರಿಯ ನಿರ್ದೇಶಕ ಹಾಗೂ ನಟಿ ಆಲಿಯಾ ಭಟ್ ತಂದೆ ಮಹೇಶ್ ಭಟ್ ಚಿತ್ರ ನಿರ್ದೇಶನಕ್ಕೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ್ದಾರೆ. ಈ ಮೂಲಕ ತಮ್ಮ ಐದು ದಶಕಗಳ ಸುದೀರ್ಘ ಹಾಗೂ ಯಶಸ್ವಿ ಚಲನಚಿತ್ರ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದು, ಇನ್ನು ಮುಂದೆ ಎಂದಿಗೂ ಮೆಗಾಫೋನ್ ಹಿಡಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸದ್ಯ ಸಿನಿಮಾ ರಂಗದಲ್ಲಿನ ಬದಲಾವಣೆಗಳೇ ಈ ನಿರ್ಧಾರಕ್ಕೆ ಮುಖ್ಯ ಕಾರಣ ಎನ್ನಲಾಗುತ್ತಿದೆ. ಇಂದಿನ ದಿನಗಳಲ್ಲಿ ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ಚಿತ್ರೀಕರಣಕ್ಕೂ ಮುನ್ನವೇ ಕಥೆ ಮತ್ತು ಕಂಟೆಂಟ್ ಹೀಗೆಯೇ ಇರಬೇಕು ಎಂದು ನಿರ್ಧರಿಸಲಾಗುತ್ತದೆ. ಇದರಿಂದಾಗಿ ನಿರ್ದೇಶಕರಿಗೆ ತಮ್ಮ ಸ್ವಂತ ಕಲ್ಪನೆ ಹಾಗೂ ಸೃಜನಾತ್ಮಕ ಸ್ವಾತಂತ್ರ್ಯ ಬಳಸಲು ಅವಕಾಶ ಸಿಗುತ್ತಿಲ್ಲ ಎಂದು ಮಹೇಶ್ ಭಟ್ ಬೇಸರ ವ್ಯಕ್ತಪಡಿಸಿದ್ದಾರೆ.

ಹಾಗೇ ತಮ್ಮ ಐದು ದಶಕಗಳ ವೃತ್ತಿಜೀವನದಲ್ಲಿ 50ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶಿಸಿದ್ದು, ‘ಅರ್ಥ್’, ‘ಸಾರಂಶ್’, ‘ನಾಮ್’, ‘ದಿಲ್ ಹೈ ಕಿ ಮಾಂತಾ ನಹೀ’ ಹಾಗೂ ‘ಸಡಕ್’ ನಂತಹ ಸೂಪರ್ ಹಿಟ್ ಮತ್ತು ಭಾವನಾತ್ಮಕ ಚಿತ್ರಗಳನ್ನು ನೀಡಿದ್ದಾರೆ. 1999ರ ‘ಕಾರ್ತೂಸ್’ ಚಿತ್ರದ ಬಳಿಕ ನಿರ್ದೇಶನದಿಂದ ದೂರವಿದ್ದ ಮಹೇಶ್‌ ಭಟ್, ಎರಡು ದಶಕಗಳ ನಂತರ 2020ರಲ್ಲಿ ಆಲಿಯಾ ಭಟ್ ನಟನೆಯ ‘ಸಡಕ್ 2’ ಚಿತ್ರವನ್ನು ನಿರ್ದೇಶಿಸಿದ್ದರು. ಇದೇ ಈಗ ನಿರ್ದೇಶನ ಹಾಗೂ ವೃತ್ತಿಜೀವನದ ಕೊನೆಯ ಸಿನಿಮಾವಾಗಿದೆ.

ನಿವೃತ್ತಿಯ ನಂತರದ ದಿನಗಳಲ್ಲಿ ತಮಗಾಗಿ ಸಿನಿಮಾ ಮಾಡುವುದಕ್ಕಿಂತ, ಚಿತ್ರರಂಗಕ್ಕೆ ಬರುವ ಯುವ ಪ್ರತಿಭೆಗಳಿಗೆ ಮಾರ್ಗದರ್ಶನ (ಮೆಂಟರ್) ನೀಡುವುದರಲ್ಲಿ ತಮಗೆ ಹೆಚ್ಚಿನ ಸಂತೋಷ ಸಿಗುತ್ತಿದೆ ಎಂದು ಮಹೇಶ್ ಭಟ್ ತಿಳಿಸಿದ್ದಾರೆ. ಹೊಸಬರ ಯಶಸ್ಸಿಗೆ ಕಾರಣವಾಗುವುದು ಮತ್ತು ಅವರ ಕನಸುಗಳಿಗೆ ಹೆಗಲಾಗುವುದೇ ತಮ್ಮ ಮುಂದಿನ ಗುರಿ ಎಂದು ತಮ್ಮ ಮನದ ಮಾತು ಹಂಚಿಕೊಂಡಿದ್ದಾರೆ.