ಬೆಂಗಳೂರು: ಸ್ಯಾಂಡಲ್‌ವುಡ್‌ನ ಜನಪ್ರಿಯ ಮತ್ತು ಖ್ಯಾತ ನಟ ‘ಗೋಲ್ಡನ್ ಸ್ಟಾರ್’ ಗಣೇಶ್ ಜುಲೈ 2 ಇಂದು ತಮ್ಮ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ಅಭಿಮಾನಿಗಳಿಗೆ ಚಿತ್ರತಂಡಗಳು ಭರ್ಜರಿ ಉಡುಗೊರೆ ನೀಡಿದ್ದು, 2026ರ ಅಕ್ಟೋಬರ್ ತಿಂಗಳೊಂದರಲ್ಲೇ ಗಣೇಶ್ ನಟನೆಯ ಎರಡು ಬಹುನಿರೀಕ್ಷಿತ ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿವೆ. ಕೇವಲ 14 ದಿನಗಳ ಅಂತರದಲ್ಲಿ ನೆಚ್ಚಿನ ನಟನ ಎರಡು ಚಿತ್ರಗಳು ಬಿಡುಗಡೆಯಾಗುತ್ತಿರುವುದು ಅಭಿಮಾನಿಗಳಲ್ಲಿ ಹಬ್ಬದ ಸಂಭ್ರಮ ಮೂಡಿಸಿದೆ.
‘ಗೋಲ್ಡನ್ ಸ್ಟಾರ್’ ನಟನೆಯ ಸಿನಿಮಾ ಮೊದಲನೇಯದ್ದಾಗಿ ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ಟಿ.ಜಿ. ವಿಶ್ವಪ್ರಸಾದ್ ಹಾಗೂ ಟಿ.ಜಿ. ಕೃತಿ ಪ್ರಸಾದ್ ನಿರ್ಮಿಸುತ್ತಿರುವ ‘ಪಿನಾಕ’ ಸಿನಿಮಾ ಅಕ್ಟೋಬರ್ 2ರಂದು ವಿಶ್ವಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಕೊರಿಯೋಗ್ರಫರ್ ಧನಂಜಯ್ ನಿರ್ದೇಶನದ ಈ ಥ್ರಿಲ್ಲರ್ ಕಥಾಹಂದರದ ಚಿತ್ರದಲ್ಲಿ ಗಣೇಶ್ ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಜನ್ಮದಿನದ ಅಂಗವಾಗಿ ಬಿಡುಗಡೆಯಾದ ಪೋಸ್ಟರ್ ಸಖತ್ ವೈರಲ್ ಆಗಿದೆ.
ಈ ಸಿನಮಾದ ಬಿಡುಗಡೆಯ ಬೆನ್ನಲ್ಲೇ, ಅಕ್ಟೋಬರ್ 16ರಂದು ಗಣೇಶ್ ನಟನೆಯ ಮತ್ತೊಂದು ಬಹುನಿರೀಕ್ಷಿತ ಚಿತ್ರ ‘ಬೃಂದವಿಹಾರಿ’ ಬಿಡುಗಡೆಯಾಗಲಿದೆ. ಶ್ರೀನಿವಾಸ್ ರಾಜು ನಿರ್ದೇಶನದ ಹಾಗೂ ಸಮೃದ್ಧಿ ವಿ. ಮಂಜುನಾಥ್ ನಿರ್ಮಾಣದ ಈ ಚಿತ್ರವನ್ನು ಪ್ರತಿಷ್ಠಿತ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯು ಕರ್ನಾಟಕದಾದ್ಯಂತ ವಿತರಣೆ ಮಾಡುತ್ತಿದೆ.
ಸಿನಿಪ್ರೇಮಿಗಳ ಆತಂಕ: ಬಾಕ್ಸ್ ಆಫೀಸ್ ಸವಾಲು ಒಂದೇ ತಿಂಗಳಲ್ಲಿ ಬ್ಯಾಕ್-ಟು-ಬ್ಯಾಕ್ ಸಿನಿಮಾಗಳು ಬರುತ್ತಿರುವುದು ಅಭಿಮಾನಿಗಳಿಗೆ ಥ್ರಿಲ್ ಕೊಟ್ಟಿದ್ದರೂ, ಚಿತ್ರರಂಗದ ವಿಶ್ಲೇಷಕರು ಹಾಗೂ ಸಿನಿಪ್ರೇಮಿಗಳು ಕೊಂಚ ಆತಂಕ ವ್ಯಕ್ತಪಡಿಸಿದ್ದಾರೆ. ಎರಡು ಚಿತ್ರಗಳ ನಡುವೆ ಕನಿಷ್ಠ ಒಂದು ತಿಂಗಳ ಅಂತರವಿದ್ದಿದ್ದರೆ ಪ್ರಚಾರ, ಥಿಯೇಟರ್ ಹಂಚಿಕೆ ಹಾಗೂ ಬಾಕ್ಸ್ ಆಫೀಸ್ ಕಲೆಕ್ಷನ್‌ಗೆ ಅನುಕೂಲವಾಗುತ್ತಿತ್ತು ಎಂಬ ಅಭಿಪ್ರಾಯಗಳು ಕೇಳಿಬಂದಿವೆ. ಹೀಗಾಗಿ ಅಕ್ಟೋಬರ್ ಹಬ್ಬದ ಸೀಸನ್‌ನಲ್ಲಿ ಗೋಲ್ಡನ್ ಸ್ಟಾರ್ ಈ ಡಬಲ್ ಧಮಾಕಾ ನೋಡಲು ಪ್ರೇಕ್ಷಕರು ಕಾತರರಾಗಿದ್ದಾರೆ.






















