ದಾಂಡೇಲಿ (ಸಂ.ಕ. ಸಮಾಚಾರ.) : ಮಂಗಳೂರಿನಲ್ಲಿ ಪ್ರಸ್ತಾಪಿತ ಹೈಕೋರ್ಟ್ ಪೀಠದ ವ್ಯಾಪ್ತಿಗೆ ಉತ್ತರ ಕನ್ನಡ ಜಿಲ್ಲೆಯನ್ನು ಸೇರಿಸುವ ಪ್ರಸ್ತಾವನೆಗೆ ಆಲ್ ಇಂಡಿಯಾ ಲಾಯರ್ಸ್ ಯೂನಿಯನ್ (AILU) ಸದಸ್ಯರು ಹಾಗೂ ಹೈಕೋರ್ಟ್ ವಕೀಲರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಶಾಸಕ ಆರ್.ವಿ. ದೇಶಪಾಂಡೆ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಅವರು, ಉತ್ತರ ಕನ್ನಡ ಜಿಲ್ಲೆಯನ್ನು ಯಾವುದೇ ಕಾರಣಕ್ಕೂ ಧಾರವಾಡ ಹೈಕೋರ್ಟ್ ಪೀಠ ವ್ಯಾಪ್ತಿಯಿಂದ ಕೈಬಿಡಬಾರದು ಎಂದು ಒತ್ತಾಯಿಸಿದರು.
ಉತ್ತರ ಕನ್ನಡ ಜಿಲ್ಲೆಯ ಬಹುತೇಕ ತಾಲೂಕುಗಳಿಗೆ ಧಾರವಾಡವೇ ಭೌಗೋಳಿಕವಾಗಿ ಸಮೀಪದಲ್ಲಿದ್ದು, ರಸ್ತೆ ಸಂಪರ್ಕ, ಸಾರ್ವಜನಿಕ ಸಾರಿಗೆ ಹಾಗೂ ನ್ಯಾಯಾಂಗ ವ್ಯವಹಾರಗಳ ದೃಷ್ಟಿಯಿಂದಲೂ ಹೆಚ್ಚು ಅನುಕೂಲಕರವಾಗಿದೆ. ಇಂತಹ ಸಂದರ್ಭದಲ್ಲಿ ಜಿಲ್ಲೆಯನ್ನು ಮಂಗಳೂರು ಪೀಠದ ವ್ಯಾಪ್ತಿಗೆ ಸೇರಿಸುವುದು ಅವೈಜ್ಞಾನಿಕ ಹಾಗೂ ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾದ ನಿರ್ಧಾರವಾಗಲಿದೆ ಎಂದು ವಕೀಲರು ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಕಾರವಾರ ತಾಲೂಕಿನಲ್ಲಿ ಮಳೆಯ ಅಬ್ಬರ: ಇಂದು ಶಾಲೆಗಳಿಗೆ ರಜೆ
ಮಂಗಳೂರಿಗೆ ಪ್ರಕರಣಗಳ ವಿಚಾರಣೆಗೆ ತೆರಳಬೇಕಾದರೆ ಜಿಲ್ಲೆಯ ಬಹುತೇಕ ಭಾಗಗಳ ಕಕ್ಷಿದಾರರು, ವಕೀಲರು, ಸರ್ಕಾರಿ ಅಧಿಕಾರಿಗಳು ಹಾಗೂ ಸಾಕ್ಷಿದಾರರು ಹೆಚ್ಚಿನ ದೂರ ಪ್ರಯಾಣಿಸಬೇಕಾಗುತ್ತದೆ. ಇದರಿಂದ ಸಮಯ ಮತ್ತು ಹಣದ ಹೆಚ್ಚುವರಿ ಹೊರೆ ಬೀಳುವುದರ ಜೊತೆಗೆ ನ್ಯಾಯದಾನ ಪ್ರಕ್ರಿಯೆಯ ಮೇಲೆಯೂ ಪ್ರತಿಕೂಲ ಪರಿಣಾಮ ಉಂಟಾಗುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದರು.
ಮಂಗಳೂರಿನಲ್ಲಿ ಹೊಸ ಹೈಕೋರ್ಟ್ ಪೀಠ ಸ್ಥಾಪನೆಗೆ ವಿರೋಧವಿಲ್ಲ. ಆದರೆ ಅದರ ಹೆಸರಿನಲ್ಲಿ ಈಗಾಗಲೇ ಧಾರವಾಡ ಪೀಠದ ವ್ಯಾಪ್ತಿಯಲ್ಲಿರುವ ಉತ್ತರ ಕನ್ನಡ ಜಿಲ್ಲೆಯನ್ನು ಬೇರ್ಪಡಿಸುವುದು ನ್ಯಾಯಸಮ್ಮತವಲ್ಲ. ಈ ಕುರಿತು ಸರ್ಕಾರ ಯಾವುದೇ ಅಂತಿಮ ನಿರ್ಧಾರ ಕೈಗೊಳ್ಳುವ ಮುನ್ನ ಜಿಲ್ಲೆಯ ಜನಪ್ರತಿನಿಧಿಗಳು, ವಕೀಲರ ಸಂಘಟನೆಗಳು ಹಾಗೂ ಸಾರ್ವಜನಿಕರ ಅಭಿಪ್ರಾಯವನ್ನು ಪರಿಗಣಿಸಬೇಕು ಎಂದು ಅವರು ಆಗ್ರಹಿಸಿದರು.
ಇದನ್ನೂ ಓದಿ: ವಾಟ್ಸಾಪ್ Username ವೈಶಿಷ್ಟ್ಯಕ್ಕೆ ಬ್ರೇಕ್ – Metaಗೆ ಕೇಂದ್ರ ನೋಟಿಸ್
ಮನವಿ ಸಲ್ಲಿಸಿದ ನಿಯೋಗದಲ್ಲಿ ಎಐಎಲ್‌ಯು ಸದಸ್ಯರಾದ ರತ್ನದೀಪಾ, ಅಫ್ರಿನ್ ಕಿತ್ತೂರ, ಗಿರೀಶ ಭಟ್, ವಿಶ್ವನಾಥ ಹೆಗಡೆ, ಪ್ರವೀಣ ತರೇಕರ ಸೇರಿದಂತೆ ಹಲವರು ಉಪಸ್ಥಿತರಿದ್ದರು.






















