ಬೆಳಗಾವಿ: ರಾಜ್ಯದ ಯಾವುದೇ ದೇವಾಲಯದಲ್ಲಿ ಭಕ್ತರ ಕಾಣಿಕೆ ಹಾಗೂ ಹುಂಡಿ ಹಣ ದುರುಪಯೋಗವಾಗಲು ಅವಕಾಶ ನೀಡುವುದಿಲ್ಲ. ಹಣಕಾಸು ನಿರ್ವಹಣೆಯಲ್ಲಿ ಲೋಪ ಕಂಡುಬಂದರೆ ಸಂಬಂಧಪಟ್ಟವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ, ಮುಜರಾಯಿ ಮತ್ತು ಕ್ರೀಡಾ ಸಚಿವ ಪರಮೇಶ್ವರ ಎಚ್ಚರಿಕೆ ನೀಡಿದರು.
ಬೆಳಗಾವಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ಇತ್ತೀಚೆಗೆ ನಡೆದಿರುವ ಘಟನೆ ರಾಜ್ಯದ ಧಾರ್ಮಿಕ ದತ್ತಿ ಇಲಾಖೆಗೆ ಎಚ್ಚರಿಕೆಯ ಗಂಟೆಯಾಗಿದೆ. ಹೆಚ್ಚಿನ ಆದಾಯ ಹೊಂದಿರುವ ಎ' ಮತ್ತುಬಿ’ ವರ್ಗದ ದೇವಾಲಯಗಳಲ್ಲಿ ಹಣಕಾಸು ವ್ಯವಹಾರ, ಹುಂಡಿ ಎಣಿಕೆ ಮತ್ತು ವೆಚ್ಚದ ಮೇಲೆ ವಿಶೇಷ ನಿಗಾ ಇಡಲಾಗುವುದು ಎಂದರು.
ಹುಂಡಿ ತೆರೆಯುವುದು, ಹಣ ಎಣಿಕೆ, ಬ್ಯಾಂಕ್‌ಗೆ ಜಮೆ ಮಾಡುವುದು ಹಾಗೂ ವೆಚ್ಚದ ಲೆಕ್ಕಪತ್ರ ನಿರ್ವಹಣೆಗೆ ಪ್ರಮಾಣಿತ ಕಾರ್ಯಾಚರಣಾ ವಿಧಾನ ರೂಪಿಸಲಾಗುವುದು. ತಹಶೀಲ್ದಾರ್ ಅಥವಾ ಜಿಲ್ಲಾಧಿಕಾರಿ ಪ್ರತಿ ತಿಂಗಳು ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಸೂಚಿಸಲಾಗುವುದು ಎಂದು ತಿಳಿಸಿದರು.
ದೇಗುಲ ಆಸ್ತಿ ಸಮೀಕ್ಷೆ: ರಾಜ್ಯದ ಎ',ಬಿ’ ಮತ್ತು `ಸಿ’ ವರ್ಗದ ದೇವಾಲಯಗಳಿಗೆ ಸೇರಿದ ಜಮೀನು, ನಿವೇಶನ ಹಾಗೂ ಇತರ ಆಸ್ತಿಗಳ ಸಮಗ್ರ ಸಮೀಕ್ಷೆ ನಡೆಸಲು ಎಲ್ಲ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು. ಒತ್ತುವರಿಯಾಗಿರುವ ಆಸ್ತಿಗಳನ್ನು ಗುರುತಿಸಿ, ಗಡಿ ನಿಗದಿಪಡಿಸಿ, ಒತ್ತುವರಿ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು ಎಂದರು.
`ದೇವಾಲಯದ ಆಸ್ತಿ ದೇವಾಲಯಕ್ಕೇ ಸೇರಬೇಕು. ಯಾರೇ ಒತ್ತುವರಿ ಮಾಡಿಕೊಂಡಿದ್ದರೂ ತೆರವು ಮಾಡಿಸಲಾಗುವುದು. ಆಸ್ತಿ ದಾಖಲೆಗಳನ್ನು ಸರಿಪಡಿಸಿ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.
ಸವದತ್ತಿ ಯಲ್ಲಮ್ಮ ಕ್ಷೇತ್ರಕ್ಕೆ ಮಾಸ್ಟರ್ ಪ್ಲಾನ್: ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುವ ಸವದತ್ತಿ ಯಲ್ಲಮ್ಮ ದೇವಾಲಯದ ಸಮಗ್ರ ಅಭಿವೃದ್ಧಿಗಾಗಿ ಪ್ರಾಧಿಕಾರ ರಚಿಸಲಾಗಿದೆ. ಕ್ಷೇತ್ರದ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ಸಿದ್ಧಪಡಿಸುವಂತೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಭಕ್ತರಿಗೆ ಸುಗಮ ದರ್ಶನ, ಪ್ರಸಾದ ವಿತರಣೆ, ಕುಡಿಯುವ ನೀರು, ಶೌಚಾಲಯ, ವಸತಿ ಹಾಗೂ ತಂಗುದಾಣ ಸೇರಿದಂತೆ ಮೂಲಸೌಕರ್ಯ ಕಲ್ಪಿಸಲಾಗುವುದು. ದೇವಾಲಯಕ್ಕೆ ಬರುವ ಆದಾಯವನ್ನು ಅದೇ ಕ್ಷೇತ್ರದ ಅಭಿವೃದ್ಧಿಗೆ ಬಳಸಬೇಕು. ಪ್ರಾಧಿಕಾರ ಇರುವ ದೇವಾಲಯಗಳು ಸರ್ಕಾರದ ಅನುಮೋದನೆ ಪಡೆದು ಕಾಮಗಾರಿ ಕೈಗೊಳ್ಳಬೇಕು. ಪ್ರಾಧಿಕಾರ ಇಲ್ಲದ ದೇವಾಲಯಗಳು ನೇರವಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕು ಎಂದರು.






















