SK Home Ad
Home ನಮ್ಮ ಜಿಲ್ಲೆ ದಾವಣಗೆರೆ ಚಿಗಟೇರಿ ಆಸ್ಪತ್ರೆ ಅಗ್ನಿ ಅವಘಡ: ಯೋಗ್ಯವಲ್ಲದ ಯಂತ್ರ ಬಳಕೆ ಶಂಕೆ

ಚಿಗಟೇರಿ ಆಸ್ಪತ್ರೆ ಅಗ್ನಿ ಅವಘಡ: ಯೋಗ್ಯವಲ್ಲದ ಯಂತ್ರ ಬಳಕೆ ಶಂಕೆ

0
84

ದಾವಣಗೆರೆ: ಇಲ್ಲಿನ ಚಿಗಟೇರಿ ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸೆ ಕೊಠಡಿಯಲ್ಲಿ ಮಂಗಳವಾರ ಸಂಭವಿಸಿದ ಅಗ್ನಿ ಅವಘಡ ಪ್ರಕರಣದ ಪ್ರಾಥಮಿಕ ತನಿಖೆಯಲ್ಲಿ ‘ಬಳಕೆಗೆ ಯೋಗ್ಯವಲ್ಲದ ಯಂತ್ರೋಪಕರಣಗಳನ್ನು ಬಳಸಿರುವ ಅಂಶ ಮೇಲ್ನೋಟಕ್ಕೆ ಕಂಡು ಬಂದಿದೆ’ ಎಂದು ತನಿಖಾ ತಂಡದ ನೇತೃತ್ವ ವಹಿಸಿರುವ ಉಪವಿಭಾಗಾಧಿಕಾರಿ ಸಂತೋಷ್‌ಕುಮಾರ್ ತಿಳಿಸಿದ್ದಾರೆ.

ಬುಧವಾರ ಬೆಳಗ್ಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಈ ಅಂಶ ಬೆಳಕಿಗೆ ಬಂದಿದೆ. ಶಸ್ತ್ರಚಿಕಿತ್ಸೆಗೆ ಬಳಸುವ ವರ್ಕ್ಸ್ಟೇಷನ್ ಸುಸ್ಥಿತಿಯಲ್ಲಿ ಇಲ್ಲ ಎಂದು ಸಂಬಂಧಿತ ಏಜೆನ್ಸಿಯೊಂದು ಈ ಹಿಂದೆಯೇ ವರದಿ ನೀಡಿದ್ದರೂ, ಅದೇ ಯಂತ್ರೋಪಕರಣಗಳನ್ನು ಬಳಸಿರುವುದು ಮೇಲ್ನೋಟಕ್ಕೆ ಸಂಶಯ ಮೂಡಿಸಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಆಸ್ಪತ್ರೆಯ ಅಧಿಕಾರಿಗಳ ನಿರ್ಲಕ್ಷ್ಯವೂ ಮೇಲ್ನೋಟಕ್ಕೆ ಕಂಡು ಬರುತ್ತಿದ್ದು, ಎಲ್ಲ ಆಯಾಮಗಳಿಂದ ತನಿಖೆ ಮುಂದುವರಿದಿದೆ ಎಂದು ಹೇಳಿದರು.

ಇದು, ಪ್ರಾಥಮಿಕ ತನಿಖೆಯಾಗಿರುವುದರಿಂದ ಈಗಲೇ ಅಂತಿಮವಾಗಿ ಏನನ್ನೂ ಹೇಳಲು ಸಾಧ್ಯವಿಲ್ಲ. ಸಮಗ್ರ ತನಿಖೆ ನಡೆಸಿ ಇನ್ನೆರಡು ದಿನಗಳಲ್ಲಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು. ವರದಿ ಆಧರಿಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ತನಿಖಾಧಿಕಾರಿ ಸಂತೋಷ್‌ಕುಮಾರ್ ಸ್ಪಷ್ಟಪಡಿಸಿದರು.

ಬೆಂಗಳೂರಿನಿಂದ ಬಂದ ವಿಶೇಷ ತಂಡ: ಸ್ಥಳೀಯ ತನಿಖಾ ತಂಡದ ಪ್ರಾಥಮಿಕ ವರದಿ ಸಿದ್ಧವಾಗುತ್ತಿರುವ ಬೆನ್ನಲ್ಲೇ, ಆರೋಗ್ಯ ಇಲಾಖೆಯ ಉನ್ನತ ಮಟ್ಟದ ವಿಶೇಷ ತನಿಖಾ ತಂಡವೊಂದು ಬೆಂಗಳೂರಿನಿಂದ ದಾವಣಗೆರೆ ಚಿಗಟೇರಿ ಜಿಲ್ಲಾಸ್ಪತ್ರೆಗೆ ಆಗಮಿಸಿದೆ. ಇಲಾಖೆಯ ವಿಭಾಗ ಮಟ್ಟದ ಇಬ್ಬರು ಅಧಿಕಾರಿಗಳ ಈ ತಂಡವು ಆಸ್ಪತ್ರೆಯ ಇತರ ಆಪರೇಷನ್ ಥಿಯೇಟರ್‌ಗಳ ಸ್ಥಿತಿಗತಿ ಹಾಗೂ ಈ ಘಟನೆಗೆ ಕಾರಣಗಳೇನು? ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಿ ಆರೋಗ್ಯ ಇಲಾಖೆ ಸಚಿವರಿಗೆ ವರದಿ ನೀಡಲಿದೆ ಎಂದು ತಿಳಿದು ಬಂದಿದೆ.