SK Home Ad
Home ನಮ್ಮ ಜಿಲ್ಲೆ IMDbಯಲ್ಲಿ ಯಶ್ ದರ್ಬಾರ್: ಮೊದಲ ಮೂರು ಸ್ಥಾನಗಳಲ್ಲಿ ‘ರಾಕಿಂಗ್ ಸ್ಟಾರ್’ ಎರಡು ಸಿನಿಮಾಗಳು!

IMDbಯಲ್ಲಿ ಯಶ್ ದರ್ಬಾರ್: ಮೊದಲ ಮೂರು ಸ್ಥಾನಗಳಲ್ಲಿ ‘ರಾಕಿಂಗ್ ಸ್ಟಾರ್’ ಎರಡು ಸಿನಿಮಾಗಳು!

0
17

ಬೆಂಗಳೂರು: ಕನ್ನಡದ ಹೆಮ್ಮೆಯ ಪ್ಯಾನ್ ಇಂಡಿಯಾ ಸ್ಟಾರ್ ಯಶ್ ಕ್ರೇಜ್ ದಿನದಿಂದ ದಿನಕ್ಕೆ ದೇಶಾದ್ಯಂತ ಹೊಸ ದಾಖಲೆ ಬರೆಯುತ್ತಿದೆ. ‘ಕೆಜಿಎಫ್’ ಸರಣಿಯ ಭರ್ಜರಿ ಯಶಸ್ಸಿನ ಬಳಿಕ ಇಡೀ ಭಾರತೀಯ ಚಿತ್ರರಂಗವೇ ಯಶ್ ಮುಂದಿನ ಸಿನಿಮಾಗಳಿಗಾಗಿ ಕಾತರದಿಂದ ಕಾಯುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ, ಪ್ರಮುಖ ಸಿನಿ ವೆಬ್‌ಸೈಟ್ ಐಎಮ್‌ಡಿಬಿ (IMDb) ಇತ್ತೀಚೆಗೆ ಬಿಡುಗಡೆ ಮಾಡಿರುವ ‘ಭಾರತದ ಅತಿ ಹೆಚ್ಚು ನಿರೀಕ್ಷಿತ ಚಲನಚಿತ್ರಗಳ’ ಪಟ್ಟಿಯಲ್ಲಿ ಯಶ್ ನಟನೆಯ ಸಿನಿಮಾಗಳು ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಮುಂಬರುವ ಚಿತ್ರವನ್ನೇ ಹಿಂದಿಕ್ಕಿ ಅಗ್ರಸ್ಥಾನ ಪಡೆದುಕೊಂಡಿವೆ.

ಈ ವರ್ಷ ಬಿಡುಗಡೆಯಾಗಲಿರುವ ಸಿನಿಮಾಗಳ ಈ ಪಟ್ಟಿಯಲ್ಲಿ, ಯಶ್ ಅಭಿನಯದ ಎರಡು ಬಹುದೊಡ್ಡ ಚಿತ್ರಗಳು ಮೊದಲ ಮೂರು ಸ್ಥಾನಗಳಲ್ಲಿ ಗುರುತಿಸಿಕೊಂಡಿವೆ. ರಣಬೀರ್‌ ಕಪೂರ್ ಮತ್ತು ಯಶ್ ಕಾಂಬಿನೇಷನ್‌ನ ಬಹುನಿರೀಕ್ಷಿತ ಪೌರಾಣಿಕ ಚಿತ್ರ ‘ರಾಮಾಯಣ’ ಮೊದಲ ಸ್ಥಾನವನ್ನು ಅಲಂಕರಿಸಿದೆ. ಈ ಚಿತ್ರದಲ್ಲಿ ಯಶ್ ಲಂಕೇಶ್ವರ ರಾವಣನ ಪಾತ್ರದಲ್ಲಿ ಅಬ್ಬರಿಸಲಿದ್ದರೆ, ಸಾಯಿ ಪಲ್ಲವಿ ಸೀತೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಆಲಿಯಾ ಭಟ್ ಹಾಗೂ ಶರ್ವರಿ ವಾಘ್ ನಟನೆಯ ಸ್ಪೈ ಆಕ್ಷನ್ ಥ್ರಿಲ್ಲರ್ ‘ಆಲ್ಫಾ’ ದ್ವಿತೀಯ ಸ್ಥಾನದಲ್ಲಿದೆ.

ವಿಶೇಷವೆಂದರೆ, ಯಶ್ ನಾಯಕನಾಗಿ ನಟಿಸುತ್ತಿರುವ, ಗೀತು ಮೋಹನ್ ದಾಸ್ ನಿರ್ದೇಶನದ ‘ಟಾಕ್ಸಿಕ್’ ಸಿನಿಮಾ ಈ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ. ಆ ಮೂಲಕ ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಸುಹಾನಾ ಖಾನ್ ನಟನೆಯ ‘ಕಿಂಗ್’ ಚಿತ್ರವನ್ನು ನಾಲ್ಕನೇ ಸ್ಥಾನಕ್ಕೆ ತಳ್ಳಿ ಯಶ್ ಸಿನಿಮಾಗಳು ಮುನ್ನಡೆ ಸಾಧಿಸಿವೆ.

ಪಟ್ಟಿಯ ಉಳಿದ ಸ್ಥಾನಗಳಲ್ಲಿ ಅಜಯ್ ದೇವಗನ್ ‘ಧಮಾಲ್ 4’ (ಐದನೇ ಸ್ಥಾನ) ಹಾಗೂ ‘ದೃಶ್ಯಂ 3’ (ಆರನೇ ಸ್ಥಾನ) ಇವೆ. ಉಳಿದಂತೆ ಸೂರ್ಯ ನಟನೆಯ ‘ವಿಶ್ವನಾಥ್ ಆಂಡ್ ಸನ್ಸ್’, ವಿಜಯ್ ದೇವರಕೊಂಡ ‘ರಣಬಲಿ’ ಹಾಗೂ ತಮಿಳು ನಟ ವಿಜಯ್ ಪುತ್ರ ನಿರ್ದೇಶಿಸಿರುವ ‘ಸಿಗ್ಮಾ’ ಚಿತ್ರಗಳು ಸಹ ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ. ಒಟ್ಟಾರೆಯಾಗಿ, ಈ ವರ್ಷ ಬಿಡುಗಡೆಯಾಗಲಿರುವ ಭಾರತೀಯ ಸಿನಿಮಾಗಳ ರೇಸ್‌ನಲ್ಲಿ ಸದ್ಯಕ್ಕೆ ‘ರಾಕಿ ಭಾಯ್’ ಯಶ್‌ದ್ದೇ ಮೇಲುಗೈಯಾಗಿದೆ.