SK Home Ad
Home ನಮ್ಮ ಜಿಲ್ಲೆ ಬೆಂಗಳೂರು ಅಂಕಿ-ಅಂಶಗಳಿಲ್ಲದೆ ಬಂದ ಆಫೀಸರ್ಸ್: ಜಿಬಿಎ ಸಭೆಯಲ್ಲಿ ಸಚಿವ ಕೃಷ್ಣಭೈರೇಗೌಡ ತರಾಟೆ

ಅಂಕಿ-ಅಂಶಗಳಿಲ್ಲದೆ ಬಂದ ಆಫೀಸರ್ಸ್: ಜಿಬಿಎ ಸಭೆಯಲ್ಲಿ ಸಚಿವ ಕೃಷ್ಣಭೈರೇಗೌಡ ತರಾಟೆ

0
27

ಬೆಂಗಳೂರು: ಬೆಂಗಳೂರಿನಲ್ಲಿ ಬೀದಿ ನಾಯಿಗಳ ಸಂತಾನಹರಣ ಹಾಗೂ ಗಿಡ ನೆಡುವ ಯೋಜನೆಗಳಿಗೆ ಸಂಬಂಧಿಸಿದಂತೆ ಸೂಕ್ತ ಅಂಕಿ-ಅಂಶಗಳಿಲ್ಲದೆ ಜಿಬಿಎ (GBA) ಸಭೆಗೆ ಬಂದಿದ್ದ ಅಧಿಕಾರಿಗಳನ್ನು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಅಧಿಕಾರಿಗಳ ಬೇಜವಾಬ್ದಾರಿಯ ಉತ್ತರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, “ಪಶುಸಂಗೋಪನೆ ಇಲಾಖೆಯಲ್ಲಿ 19 ಜನ ಅಧಿಕಾರಿಗಳಿದ್ದರೂ ಸಭೆಗೆ ಕನಿಷ್ಠ ಡಾಟಾವೂ ಇಲ್ಲದೆ ಬಂದಿದ್ದೀರಾ? ನಾನೇನು ಕಿವಿಯಲ್ಲಿ ದಾಸವಾಳ ಇಟ್ಟುಕೊಂಡು ಕೂತಿದ್ದೀನಾ?” ಎಂದು ಕಿಡಿ ಕಾರಿದ್ದಾರೆ.

ಹಾಗೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ನಗರದಲ್ಲಿ ಕಳೆದ 50 ವರ್ಷಗಳಿಂದ ಬೀದಿ ನಾಯಿಗಳ ಸಮಸ್ಯೆ ಇದೆ. ಬಿಬಿಎಂಪಿ ರಚನೆಯಾದ ಬಳಿಕ 8.80 ಲಕ್ಷ ಹಾಗೂ 2016 ರಿಂದ 2023ರ ಅವಧಿಯಲ್ಲಿ 3.33 ಲಕ್ಷ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದ್ರೆ 2019ರ ಸರ್ವೆ ಪ್ರಕಾರ 3.10 ಲಕ್ಷ ಹಾಗೂ 2023ರ ಸರ್ವೆ ಪ್ರಕಾರ ನಗರದಲ್ಲಿ ಕೇವಲ 2.79 ಲಕ್ಷ ಬೀದಿ ನಾಯಿಗಳಿವೆ. ಅಧಿಕಾರಿಗಳ ಲೆಕ್ಕಾಚಾರ ನೋಡಿದರೆ ಇರುವ ನಾಯಿಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಚಿಕಿತ್ಸೆ ನಡೆದಂತಾಗುತ್ತಿದೆ. ಕಳೆದ 5 ವರ್ಷಗಳಲ್ಲಿ ಇದಕ್ಕಾಗಿ 42 ಕೋಟಿ ರೂ. ಜನರ ತೆರಿಗೆ ಹಣ ಖರ್ಚಾಗಿದ್ದರೂ, ನಾಯಿಗಳ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ ಎಂದು ಸಚಿವರು ಬೇಸರ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಸಂತಾನಹರಣ ಚಿಕಿತ್ಸೆಯ ಸಂಖ್ಯೆಯನ್ನು ದ್ವಿಗುಣಗೊಳಿಸಲು ಮತ್ತು ಅಗತ್ಯವಿದ್ದರೆ ಹೊರಗುತ್ತಿಗೆ ಸಿಬ್ಬಂದಿ ಬಳಸಿಕೊಳ್ಳಲು ಸೂಚಿಸಿದ್ದಾರೆ.

ನಂತರ ಇದೇ ವೇಳೆ ಗಿಡ ನೆಡುವ ಯೋಜನೆಯಲ್ಲೂ ಸಚಿವರು ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. 2008ರಿಂದ 20 ಲಕ್ಷ ಗಿಡ ನೆಟ್ಟಿರುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ, ಆದ್ರೆ ಮರಗಣತಿ ಪ್ರಕಾರ ನಗರದಲ್ಲಿ ಇರುವುದು ಕೇವಲ 9 ಲಕ್ಷ ಮರಗಳು ಮಾತ್ರ. ಹಾಗಾದರೆ ಉಳಿದ ಗಿಡಗಳು ಎಲ್ಲಿ ಹೋದವು ಎಂದು ಸಚಿವರು ಪ್ರಶ್ನಿಸಿದರು. ಒಂದು ಗಿಡ ನೆಟ್ಟು 3 ವರ್ಷ ನಿರ್ವಹಣೆ ಮಾಡಲು 2,300 ರೂ. ನಿಂದ 3,300 ರೂ. ವೆಚ್ಚ ಮಾಡಲಾಗುತ್ತದೆ. ನಿಯಮದ ಪ್ರಕಾರ ಗುಂಡಿ ತೋಡಿ ಗಿಡ ನೆಡಬೇಕು, ಆದರೆ ನನ್ನ ಸ್ವಂತ ಕ್ಷೇತ್ರದಲ್ಲೇ ಇಂತಹ ಕಾಮಗಾರಿ ನಡೆದಿರುವುದು ನನ್ನ ಗಮನಕ್ಕೆ ಬಂದಿಲ್ಲ ಎಂದು ಹೇಳುವ ಮೂಲಕ ವ್ಯವಸ್ಥೆಯನ್ನು ಸಂಪೂರ್ಣ ಸರಿಪಡಿಸುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.