SK Home Ad
Home ಸುದ್ದಿ ದೇಶ ಪರೀಕ್ಷಾ ಅಕ್ರಮ, ಪ್ರಶ್ನೆಪತ್ರಿಕೆ ವಿಳಂಬ: ಜೈಪುರ ಕೇಂದ್ರದಲ್ಲಿ ಹೈಡ್ರಾಮಾ

ಪರೀಕ್ಷಾ ಅಕ್ರಮ, ಪ್ರಶ್ನೆಪತ್ರಿಕೆ ವಿಳಂಬ: ಜೈಪುರ ಕೇಂದ್ರದಲ್ಲಿ ಹೈಡ್ರಾಮಾ

0
86

ಪ್ರಶ್ನೆಪತ್ರಿಕೆ ಸಿಗದೆ ಪರೀಕ್ಷೆಯಿಂದ ವಂಚಿತ ವಿದ್ಯಾರ್ಥಿಗಳ ಆಕ್ರೋಶ; ಪರೀಕ್ಷಾ ಕೇಂದ್ರದಲ್ಲಿ ದಾಂಧಲೆ – ಜೈಪುರದಲ್ಲಿ ಪರೀಕ್ಷಾ ವಂಚನೆ ಜಾಲ ಬಯಲು: ಕಾಲೇಜು ವಿಭಾಗದ ಮುಖ್ಯಸ್ಥ ಸೇರಿ ನಾಲ್ವರ ಬಂಧನ

ಜೈಪುರ : ರಾಜಸ್ಥಾನ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ (RUHS) ಪ್ಯಾರಾಮೆಡಿಕಲ್ ಡಿಪ್ಲೊಮಾ ಪರೀಕ್ಷೆ ವೇಳೆ ಜೈಪುರದ ಆರ್‌ಪಿಎಂಸಿ ಪ್ರಭಾ ದೇವಿ ಸ್ಮಾರಕ ಪರೀಕ್ಷಾ ಕೇಂದ್ರದಲ್ಲಿ ಗೊಂದಲ, ಪ್ರತಿಭಟನೆ ಹಾಗೂ ಧ್ವಂಸದ ಘಟನೆ ನಡೆದಿದ್ದು, ಪ್ರಶ್ನೆಪತ್ರಿಕೆಗಳ ವಿಳಂಬ ವಿತರಣೆ ಮತ್ತು ಪರೀಕ್ಷಾ ಅಕ್ರಮದ ಆರೋಪಗಳು ತೀವ್ರ ಚರ್ಚೆಗೆ ಗ್ರಾಸವಾಗಿವೆ.

ಮಾಹಿತಿಯ ಪ್ರಕಾರ, ಪರೀಕ್ಷಾ ಕೇಂದ್ರದ ಮೊದಲ ಮಹಡಿಯಲ್ಲಿ ಕುಳಿತಿದ್ದ ಕೆಲವು ಅಭ್ಯರ್ಥಿಗಳಿಗೆ ನಿಗದಿತ ಸಮಯಕ್ಕೆ ಪ್ರಶ್ನೆಪತ್ರಿಕೆಗಳನ್ನು ವಿತರಿಸಲಾಗಿತ್ತು. ಆದರೆ, ಎರಡನೇ ಮತ್ತು ಮೂರನೇ ಮಹಡಿಗಳಲ್ಲಿದ್ದ ವಿದ್ಯಾರ್ಥಿಗಳಿಗೆ ಪ್ರಶ್ನೆಪತ್ರಿಕೆಗಳು ದೀರ್ಘ ಸಮಯದವರೆಗೆ ತಲುಪಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: ದಾವಣಗೆರೆ: ಜಿಲ್ಲಾಸ್ಪತ್ರೆಯಲ್ಲಿ ಅಕ್ಸಿಜನ್ ಸಿಲಿಂಡರ್ ಸ್ಫೋಟ

ಪರೀಕ್ಷಾ ಸಿಬ್ಬಂದಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಶ್ನೆಪತ್ರಿಕೆಗಳನ್ನು ತ್ವರಿತವಾಗಿ ವಿತರಿಸದ ಕಾರಣ ವಿದ್ಯಾರ್ಥಿಗಳ ಅಸಮಾಧಾನ ತಾರಕಕ್ಕೇರಿದೆ. ಪರಿಣಾಮ, ಅನೇಕ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸಾಧ್ಯವಾಗದೆ ನಿರಾಶೆಗೊಂಡಿದ್ದಾರೆ.

ಪರೀಕ್ಷಾ ಕೇಂದ್ರದಲ್ಲಿ ಪ್ರತಿಭಟನೆ, ಧ್ವಂಸ: ಪ್ರಶ್ನೆಪತ್ರಿಕೆ ಸಿಗದೆ ಪರೀಕ್ಷೆಯಿಂದ ವಂಚಿತರಾದ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದೊಳಗೆ ಪ್ರತಿಭಟನೆ ಆರಂಭಿಸಿದರು. ಬಳಿಕ ಪರಿಸ್ಥಿತಿ ಉದ್ವಿಗ್ನಗೊಂಡು ವಿದ್ಯಾರ್ಥಿಗಳು ಕುರ್ಚಿಗಳು, ಮೇಜುಗಳು, ಕಾಗದಗಳು ಹಾಗೂ ಇತರೆ ವಸ್ತುಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದರು. ಕೆಲವರು ಪರೀಕ್ಷಾ ಕೇಂದ್ರದಲ್ಲಿದ್ದ ಏರ್ ಕೂಲರ್‌ಗಳು, ಪೀಠೋಪಕರಣಗಳು ಸೇರಿದಂತೆ ಹಲವು ವಸ್ತುಗಳನ್ನು ಧ್ವಂಸಗೊಳಿಸಿದ್ದಾರೆ ಎಂದು ವರದಿಯಾಗಿದೆ. ಘಟನೆಯಿಂದ ಪರೀಕ್ಷಾ ಕೇಂದ್ರದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

ಇದನ್ನೂ ಓದಿ: SIR ಪ್ರಕ್ರಿಯೆಗೆ ನೆರವಾಗಲು ಶಾಶ್ವತ ನಿವಾಸ ಪ್ರಮಾಣಪತ್ರ: CM

ಪರೀಕ್ಷಾ ವಂಚನೆ ಜಾಲ ಬಯಲು : ಇದಕ್ಕೂ ಮುನ್ನ ಜೈಪುರ ಪೊಲೀಸರು ಪ್ಯಾರಾಮೆಡಿಕಲ್ ಪರೀಕ್ಷೆಯಲ್ಲಿ ಅಕ್ರಮ ನಡೆಸಲು ಸಂಚು ರೂಪಿಸಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿ ಪರೀಕ್ಷಾ ವಂಚನೆ ಜಾಲವನ್ನು ಭೇದಿಸಿದ್ದಾರೆ. ಖೋರಾ ಬಿಸಾಲ್ ಠಾಣೆಯ ಪೊಲೀಸ್ ಅಧಿಕಾರಿಗಳಿಗೆ ದೊರೆತ ಮಾಹಿತಿಯ ಆಧಾರದ ಮೇಲೆ ನಡೆದ ಕಾರ್ಯಾಚರಣೆಯಲ್ಲಿ ನಾಲ್ವರನ್ನು ಬಂಧಿಸಲಾಗಿದೆ. ಆರೋಪಿಗಳು ಪರೀಕ್ಷಾ ಕೇಂದ್ರದಲ್ಲಿ ಸಾಮೂಹಿಕ ನಕಲು ಮಾಡಲು ಅನುಕೂಲವಾಗುವಂತೆ ಮೇಲ್ವಿಚಾರಕರನ್ನು ನಿಯೋಜಿಸಿ, ಅಭ್ಯರ್ಥಿಗಳಿಂದ ಲಕ್ಷಾಂತರ ರೂಪಾಯಿ ಸಂಗ್ರಹಿಸಿದ್ದರೆಂದು ಪೊಲೀಸರು ಆರೋಪಿಸಿದ್ದಾರೆ.

ನಾಲ್ವರ ಬಂಧನ : ಬಂಧಿತರನ್ನು ಎಸ್ ಕರಣ್ ಕಾಲೇಜಿನ ಪ್ಯಾರಾಮೆಡಿಕಲ್ ವಿಭಾಗದ ಮುಖ್ಯಸ್ಥ ಕೃಷ್ಣ ಕುಮಾರ್ ಸೈನಿ, ಅದೇ ಕಾಲೇಜಿನ ರೇಡಿಯಾಲಜಿ ವಿಭಾಗದ ಉಪನ್ಯಾಸಕ ಶಂಕರ್ ಲಾಲ್ ಜಾಟ್, ಪ್ರಭಾ ಮೆಮೋರಿಯಲ್ ಪಿಜಿ ಕಾಲೇಜಿನ ರಾಮಕೃಷ್ಣ ಮಂಡಿವಾಲ್ ಹಾಗೂ ಆಡಳಿತಾಧಿಕಾರಿ ದೇವಕೃಷ್ಣ ಮಂಡಿವಾಲ್ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: WhatsAppನಲ್ಲಿ ಬಹುನಿರೀಕ್ಷಿತ ಫೀಚರ್ ಮಹತ್ವದ ಪ್ರೈವೆಸಿ ಅಪ್‌ಡೇಟ್

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಸುಮಾರು 40ರಿಂದ 45 ಅಭ್ಯರ್ಥಿಗಳಿಂದ ಭಾರಿ ಮೊತ್ತದ ಹಣವನ್ನು ಸಂಗ್ರಹಿಸಿ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ನಡೆಸಲು ಯೋಜನೆ ರೂಪಿಸಲಾಗಿತ್ತು ಎನ್ನಲಾಗಿದೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ವಿಚಾರಣೆಯನ್ನು ಮುಂದುವರಿಸಿದ್ದು, ಪರೀಕ್ಷಾ ಅಕ್ರಮದ ಹಿಂದೆ ಇನ್ನೂ ಹೆಚ್ಚಿನ ಮಂದಿ ಭಾಗಿಯಾಗಿರುವ ಸಾಧ್ಯತೆಯನ್ನೂ ಪರಿಶೀಲಿಸುತ್ತಿದ್ದಾರೆ.