ಬೆಂಗಳೂರು-ತುಮಕೂರು 4 ಪಥ, ವಿಜಯಪುರಕ್ಕೆ ವಂದೇ ಭಾರತ್: ಮಹತ್ವದ ಘೋಷಣೆ
ಬೆಂಗಳೂರು: ರಾಜ್ಯದ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗೆ ಮತ್ತೊಂದು ಮಹತ್ವದ ಹೆಜ್ಜೆ ಇಡಲಾಗುತ್ತಿದ್ದು, ವಿಜಯಪುರ ಜಿಲ್ಲೆಗೆ ಮುಂದಿನ 3-4 ತಿಂಗಳೊಳಗೆ ಬಹುನಿರೀಕ್ಷಿತ ವಂದೇ ಭಾರತ್ ಸ್ಲೀಪರ್ ರೈಲು ಸೇವೆ ಆರಂಭವಾಗಲಿದೆ ಎಂದು ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಚನ್ನಪಟ್ಟಣದಲ್ಲಿ ನಡೆದ ಕಾರ್ಯಕ್ರಮದ ವೇಳೆ ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಅವರೊಂದಿಗೆ ರಾಜ್ಯದ ವಿವಿಧ ರೈಲ್ವೆ ಯೋಜನೆಗಳ ಕುರಿತು ಚರ್ಚೆ ನಡೆಸಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ವಿಜಯೇಂದ್ರರನ್ನು ಕಿಕ್ ಔಟ್ ಮಾಡಿ: ವೈರಲ್ Audio ಸೃಷ್ಟಿಸಿದ ತಲ್ಲಣ
ರಾಜ್ಯದ ಅಭಿವೃದ್ಧಿಗೆ ಅತ್ಯಂತ ಅಗತ್ಯವಾಗಿರುವ ಬೆಂಗಳೂರು-ತುಮಕೂರು, ಬೆಂಗಳೂರು-ಮೈಸೂರು, ಬೆಂಗಳೂರು-ಕೋಲಾರ ಮತ್ತು ಹಿಂದೂಪುರ ಮಾರ್ಗಗಳಿಗೆ ಚತುಷ್ಪಥ ರೈಲು ಹಳಿ ನಿರ್ಮಾಣ, ಬೆಂಗಳೂರು-ಮಂಗಳೂರು ನಡುವಿನ ಸಂಪರ್ಕ ವೃದ್ಧಿ, ಹಾಗೂ ತುಮಕೂರು-ಚಿತ್ರದುರ್ಗ-ದಾವಣಗೆರೆ ಜೋಡಿಹಳಿ ನಿರ್ಮಾಣ ಸೇರಿದಂತೆ ಹಲವು ಪ್ರಮುಖ ಬೇಡಿಕೆಗಳನ್ನು ಸಚಿವರ ಮುಂದಿಟ್ಟಿದ್ದಾಗಿ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ಅವರ ಪ್ರಕಾರ, ವಿಜಯಪುರ ಜಿಲ್ಲೆಗೆ ವಂದೇ ಭಾರತ್ ಸ್ಲೀಪರ್ ರೈಲು ಸೇವೆ ಆರಂಭಿಸುವ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಸಕಾರಾತ್ಮಕ ಸ್ಪಂದನೆ ನೀಡಿದ್ದು, ಮುಂದಿನ ಮೂರುರಿಂದ ನಾಲ್ಕು ತಿಂಗಳೊಳಗೆ ರೈಲು ಸಂಚಾರ ಆರಂಭವಾಗುವ ನಿರೀಕ್ಷೆಯಿದೆ. ಜೊತೆಗೆ, ಪ್ರಸ್ತುತ ವಾರಕ್ಕೆ ಎರಡು ಬಾರಿ ಸಂಚರಿಸುತ್ತಿರುವ ಬೆಂಗಳೂರು-ವಿಜಯಪುರ ವಿಶೇಷ ರೈಲನ್ನು ಶಾಶ್ವತಗೊಳಿಸುವ ನಿರ್ಧಾರವನ್ನೂ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ, ಬೆಂಗಳೂರು-ತುಮಕೂರು ಚತುಷ್ಪಥ ರೈಲು ಮಾರ್ಗದ ಸಮೀಕ್ಷೆ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ. ಮುಂದಿನ ಒಂದೂವರೆ ರಿಂದ ಎರಡು ವರ್ಷಗಳೊಳಗೆ ಕಾಮಗಾರಿ ಪೂರ್ಣಗೊಳಿಸುವ ಗುರಿಯನ್ನು ರೈಲ್ವೆ ಇಲಾಖೆ ಹೊಂದಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: CBSE ಶಾಲೆಗಳಲ್ಲಿ ಭಾಷಾ ಅಧ್ಯಯನಕ್ಕೆ ಹೊಸ ಮಾರ್ಗಸೂಚಿ
ಬೆಂಗಳೂರು-ಕೋಲಾರ ನೇರ ರೈಲು ಸಂಪರ್ಕ ವಿಸ್ತರಣೆ ಯೋಜನೆಯಡಿಯಲ್ಲಿ ವೈಟ್‌ಫೀಲ್ಡ್ ವರೆಗಿನ ನಾಲ್ಕು ಹಳಿಗಳ ಮಾರ್ಗವನ್ನು ಕೋಲಾರವರೆಗೆ ವಿಸ್ತರಿಸಲಾಗುವುದು. ಈ ಯೋಜನೆಗೆ ಅಗತ್ಯವಿರುವ ಭೂಸ್ವಾಧೀನ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರು-ಮೈಸೂರು ರೈಲು ಮಾರ್ಗವನ್ನು ಕೂಡ ಚತುಷ್ಪಥವನ್ನಾಗಿ ಮೇಲ್ದರ್ಜೆಗೇರಿಸುವ ಯೋಜನೆಗೆ ಶೀಘ್ರದಲ್ಲೇ ಸಮೀಕ್ಷೆ ನಡೆಸಲಾಗುವುದು ಎಂದು ತಿಳಿಸಿರುವ ಅವರು, ಮಂಗಳೂರು ಸಂಪರ್ಕ ಸುಧಾರಣೆಗೆ ಸಕಲೇಶಪುರ-ಗುಂಡ್ಯ ಮಾರ್ಗವಾಗಿ ಸಮಾನಾಂತರ ರಸ್ತೆ ಮತ್ತು ರೈಲು ಮಾರ್ಗ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ರಾಮ ಮಂದಿರ ದೇಣಿಗೆ ಪ್ರಕರಣ: ಆರೋಪಿಗಳ ಪರ ವಾದಿಸಿದರೆ ₹5 ಲಕ್ಷ ದಂಡ
ಇದಲ್ಲದೆ, ಸದ್ಯ ಏಕಪಥವಾಗಿರುವ ತುಮಕೂರು-ಚಿತ್ರದುರ್ಗ-ದಾವಣಗೆರೆ ರೈಲು ಮಾರ್ಗವನ್ನು ಜೋಡಿಹಳಿಯನ್ನಾಗಿ ಪರಿವರ್ತಿಸುವ ಪ್ರಸ್ತಾವನೆಗೂ ಒಪ್ಪಿಗೆ ದೊರೆತಿದೆ ಎಂದು ಎಂ.ಬಿ. ಪಾಟೀಲ್ ತಿಳಿಸಿದ್ದಾರೆ. ಈ ಎಲ್ಲಾ ಯೋಜನೆಗಳು ರಾಜ್ಯದ ಸಾರಿಗೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತಂದು, ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಒದಗಿಸುವುದರ ಜೊತೆಗೆ ಕೈಗಾರಿಕೆ, ವ್ಯಾಪಾರ ಮತ್ತು ಪ್ರಾದೇಶಿಕ ಅಭಿವೃದ್ಧಿಗೂ ಉತ್ತೇಜನ ನೀಡಲಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.





















