SK Home Ad
Home ನಮ್ಮ ಜಿಲ್ಲೆ ದಕ್ಷಿಣ ಕನ್ನಡ ಸಿನಿಮಾ ಶೈಲಿಯಲ್ಲಿ ಚಿನ್ನದ ವ್ಯಾಪಾರಿಯ ಅಡ್ಡಗಟ್ಟಿ ದರೋಡೆ

ಸಿನಿಮಾ ಶೈಲಿಯಲ್ಲಿ ಚಿನ್ನದ ವ್ಯಾಪಾರಿಯ ಅಡ್ಡಗಟ್ಟಿ ದರೋಡೆ

0
90
ಸಾಂದರ್ಭಿಕ ಚಿತ್ರ

ಮಂಗಳೂರು: ಮುಂಬೈನಿಂದ ಕುಟುಂಬದೊಂದಿಗೆ ಕೇರಳಕ್ಕೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಚಿನ್ನದ ವ್ಯಾಪಾರಿಯನ್ನು ಮಂಗಳೂರಿನ ಪಣಂಬೂರು ಸಮೀಪದ ಬೈಕಂಪಾಡಿ ಜಂಕ್ಷನ್‌ನಲ್ಲಿ ದುಷ್ಕರ್ಮಿಗಳು ಅಡ್ಡಗಟ್ಟಿ, ಕಾರು ಅಪಹರಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ ಹಾಗೂ ನಗದು ದೋಚಿರುವ ಘಟನೆ ಸೋಮವಾರ ನಸುಕಿನ ಜಾವ ನಡೆದಿದೆ.

ಕೇರಳದ ಕಣ್ಣೂರು ಜಿಲ್ಲೆಯ ಪಯ್ಯನ್ನೂರು ನಿವಾಸಿ ಹಾಗೂ ಚಿನ್ನದ ವ್ಯಾಪಾರಿ ವಿಕಾಸ್ (42) ಅವರು ತಮ್ಮ ಪತ್ನಿ ಮತ್ತು ಪುತ್ರನೊಂದಿಗೆ ಬಿಳಿ ಬಣ್ಣದ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಮುಂಬೈನಿಂದ ಕೇರಳಕ್ಕೆ ಹಿಂದಿರುಗುತ್ತಿದ್ದರು. ಮುಂಬೈ ಸಮೀಪದ ಸಾಂಗ್ಲಿಯಲ್ಲಿ ಪರಿಚಯಸ್ಥರ ವಿವಾಹ ಸಮಾರಂಭದಲ್ಲಿ ಭಾಗವಹಿಸಿ ಅವರು ಸ್ವಗ್ರಾಮಕ್ಕೆ ತೆರಳುತ್ತಿದ್ದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ: ವಿಜಯೇಂದ್ರರನ್ನು ಕಿಕ್ ಔಟ್ ಮಾಡಿ: ವೈರಲ್‌ Audio ಸೃಷ್ಟಿಸಿದ ತಲ್ಲಣ

ನಸುಕಿನ ಸುಮಾರು 3 ಗಂಟೆ ವೇಳೆಗೆ ಬೈಕಂಪಾಡಿ ಜಂಕ್ಷನ್ ಸಮೀಪ ತಲುಪಿದಾಗ, ಎರಡು ಇನ್ನೋವಾ ಹಾಗೂ ಒಂದು ಸ್ವಿಫ್ಟ್ ಕಾರಿನಲ್ಲಿ ಬಂದಿದ್ದ ಸುಮಾರು 7 ರಿಂದ 8 ಮಂದಿ ಅಪರಿಚಿತರು ವಿಕಾಸ್ ಅವರ ಕಾರನ್ನು ಏಕಾಏಕಿ ಅಡ್ಡಗಟ್ಟಿದ್ದಾರೆ. ಬಳಿಕ ವಿಕಾಸ್ ಅವರನ್ನು ಕಾರಿನಿಂದ ಕೆಳಗಿಳಿಸಿದ ದುಷ್ಕರ್ಮಿಗಳು, ಅವರ ಪತ್ನಿ ಮತ್ತು ಪುತ್ರ ಸಮೇತ ಕಾರನ್ನು ತಮ್ಮ ವಶಕ್ಕೆ ಪಡೆದು ಸ್ಥಳದಿಂದ ಪರಾರಿಯಾಗಿದ್ದಾರೆ.

ಸಿನಿಮಾ ಶೈಲಿಯಲ್ಲಿ ನಡೆದ ಈ ಘಟನೆ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಸಿತು. ಆರೋಪಿಗಳು ನಂತರ ಕುಳೂರು ಸಮೀಪ ವಿಕಾಸ್ ಅವರ ಪತ್ನಿ ಮತ್ತು ಮಗನನ್ನು ಕಾರಿನಿಂದ ಕೆಳಗಿಳಿಸಿ, ಕಾರಿನೊಂದಿಗೆ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: CBSE ಶಾಲೆಗಳಲ್ಲಿ ಭಾಷಾ ಅಧ್ಯಯನಕ್ಕೆ ಹೊಸ ಮಾರ್ಗಸೂಚಿ

ಘಟನೆಯ ಬಳಿಕ ವಿಕಾಸ್ ಪಣಂಬೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕಾರಿನಲ್ಲಿದ್ದ ಸುಮಾರು 180 ಗ್ರಾಂ ಚಿನ್ನ ಹಾಗೂ ನಗದು ಸೇರಿ ಒಟ್ಟು ₹20 ಲಕ್ಷ ಮೌಲ್ಯದ ಸೊತ್ತುಗಳನ್ನು ದುಷ್ಕರ್ಮಿಗಳು ಕೊಂಡೊಯ್ದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಆದರೆ, ಕೇರಳದ ಅನೇಕ ಚಿನ್ನದ ವ್ಯಾಪಾರಿಗಳು ಮುಂಬೈನಲ್ಲಿ ಚಿನ್ನದ ಗಟ್ಟಿಗಳನ್ನು ಖರೀದಿಸಿ ಸ್ವರಾಜ್ಯಕ್ಕೆ ಸಾಗಿಸುವುದು ಸಾಮಾನ್ಯವಾಗಿರುವುದರಿಂದ, ಕಳವಾಗಿರುವ ಚಿನ್ನದ ಪ್ರಮಾಣ ಮತ್ತು ಮೌಲ್ಯ ಇನ್ನಷ್ಟು ಹೆಚ್ಚಿರಬಹುದೆಂಬ ಅನುಮಾನವೂ ವ್ಯಕ್ತವಾಗಿದೆ.

ಇದನ್ನೂ ಓದಿ: ಭೂಕುಸಿತದಲ್ಲಿ ಸಿಲುಕಿ ಪಾರಾದ ಬೈಕ್ ಸವಾರ: Video ವೈರಲ್

ಪ್ರಕರಣ ದಾಖಲಿಸಿಕೊಂಡಿರುವ ಪಣಂಬೂರು ಪೊಲೀಸರು, ಘಟನಾ ಸ್ಥಳದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದು, ದರೋಡೆಕೋರರ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಿ ತನಿಖೆ ಆರಂಭಿಸಿದ್ದಾರೆ. ದುಷ್ಕರ್ಮಿಗಳು ಪೂರ್ವಯೋಜಿತವಾಗಿ ದರೋಡೆ ನಡೆಸಿರುವ ಶಂಕೆ ವ್ಯಕ್ತವಾಗಿದ್ದು, ಚಿನ್ನದ ವ್ಯಾಪಾರಿಯ ಸಂಚಾರದ ಕುರಿತು ಮುಂಚಿತ ಮಾಹಿತಿ ಪಡೆದಿದ್ದಾರೆಯೇ ಎಂಬ ಆಯಾಮದಲ್ಲಿಯೂ ತನಿಖೆ ನಡೆಯುತ್ತಿದೆ.

ಮಂಗಳೂರಿನ ಹೊರವಲಯದಲ್ಲಿ ನಡೆದ ಈ ಘಟನೆ ಹೆದ್ದಾರಿ ಭದ್ರತೆ ಕುರಿತು ಮತ್ತೆ ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ರಾತ್ರಿ ವೇಳೆ ಸಂಚರಿಸುವ ವ್ಯಾಪಾರಿಗಳು ಹಾಗೂ ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.