SK Home Ad
Home ಸುದ್ದಿ ರಾಜ್ಯ ಪ್ರೇಮ ವೈಫಲ್ಯ: ಚಲಿಸುತ್ತಿದ್ದ ಕಾರಿನಲ್ಲಿ ಸ್ಫೋಟ, ಯುವಕ ಸಜೀವ ದಹನ, ಯುವತಿ ಗಂಭೀರ ಗಾಯ

ಪ್ರೇಮ ವೈಫಲ್ಯ: ಚಲಿಸುತ್ತಿದ್ದ ಕಾರಿನಲ್ಲಿ ಸ್ಫೋಟ, ಯುವಕ ಸಜೀವ ದಹನ, ಯುವತಿ ಗಂಭೀರ ಗಾಯ

0
26

ಕಾರವಾರ: ಪ್ರೇಮ ವೈಫಲ್ಯದ ಹಿನ್ನೆಲೆಯಲ್ಲಿ ಚಲಿಸುತ್ತಿದ್ದ ಕಾರಿನಲ್ಲೇ ಸಂಭವಿಸಿದ ಭೀಕರ ಸ್ಫೋಟದಲ್ಲಿ ಯುವಕನೊಬ್ಬ ಸಜೀವ ದಹನಗೊಂಡಿದ್ದು, ಕಾರಿನಿಂದ ಜಿಗಿದ ಯುವತಿ ಗಂಭೀರ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಜೋಗಿಹಳ್ಳಿ ಸಮೀಪ ಶನಿವಾರ ನಡೆದಿದೆ.

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೆಬ್ಬುಲು ಗ್ರಾಮದ ನಾಗೇಂದ್ರ (30) ಮೃತ ದುರ್ದೈವಿ. ಬೆಂಗಳೂರಿನ ಜಯನಗರ ನಿವಾಸಿ ರಮ್ಯಾ ಗಾಯಗೊಂಡಿದ್ದು, ಅವರನ್ನು ತುಮಕೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: TET ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ: ಪರೀಕ್ಷೆ ಮುಂದೂಡಿಕೆ!

ಆರು ವರ್ಷಗಳ ಪ್ರೀತಿ, ಇತ್ತೀಚಿಗೆ ಮನಸ್ತಾಪ : ಪೊಲೀಸರ ಮಾಹಿತಿ ಪ್ರಕಾರ, ನಾಗೇಂದ್ರ ಮತ್ತು ರಮ್ಯಾ ಕಳೆದ ಆರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ರಮ್ಯಾ ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಓಟಿ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ, ಇತ್ತೀಚಿನ ಕೆಲ ತಿಂಗಳುಗಳಿಂದ ಇಬ್ಬರ ನಡುವೆ ತೀವ್ರ ಮನಸ್ತಾಪ ಉಂಟಾಗಿತ್ತು. ಬೇಸತ್ತ ರಮ್ಯಾ, ನಾಗೇಂದ್ರನ ಮೊಬೈಲ್ ಸಂಖ್ಯೆಯನ್ನು ಬ್ಲಾಕ್ ಮಾಡಿದ್ದರು ಎನ್ನಲಾಗಿದೆ.

ಬೆಳಗ್ಗೆಯೇ ಮನೆ ಬಳಿ ಗಲಾಟೆ, ಅಂಕೋಲಾಕ್ಕೆ ಕರೆದೊಯ್ದ ಯುವಕ : ಶನಿವಾರ ಬೆಳಗ್ಗೆ ನಾಗೇಂದ್ರ ಏಕಾಏಕಿ ರಮ್ಯಾ ವಾಸವಿದ್ದ ಬೆಂಗಳೂರಿನ ಮನೆಗೆ ತೆರಳಿ ಗಲಾಟೆ ನಡೆಸಿದ್ದಾನೆ. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ರಮ್ಯಾಳ ಸ್ನೇಹಿತೆ ಮಧ್ಯಪ್ರವೇಶಿಸಿ ಇಬ್ಬರನ್ನೂ ಸಮಾಧಾನಪಡಿಸಿದ್ದರು. ಬಳಿಕ ನಾಗೇಂದ್ರ, ರಮ್ಯಾಳನ್ನು ಅಂಕೋಲಾಕ್ಕೆ ಕರೆದುಕೊಂಡು ಹೋಗುವುದಾಗಿ ಹೇಳಿ ಯೆಲ್ಲೋ ಬೋರ್ಡ್ ಕಾರಿನಲ್ಲಿ ಕರೆದುಕೊಂಡು ಹೊರಟಿದ್ದಾನೆ.

ಇದನ್ನೂ ಓದಿ: ಸೀಶೆಲ್ಸ್ ಪ್ರವಾಸ: 194 ವರ್ಷದ ಆಮೆಯನ್ನು ಭೇಟಿಯಾದ ಮೋದಿ

ನಿನ್ನನ್ನು ಕೊಂದು ನಾನು ಸಾಯುತ್ತೇನೆ : ಬೆಂಗಳೂರುನಿಂದ ಹೊರಟಾಗಿನಿಂದಲೂ ನಾಗೇಂದ್ರ ಕಾರಿನಲ್ಲಿ ರಮ್ಯಾಳೊಂದಿಗೆ ನಿರಂತರವಾಗಿ ಜಗಳವಾಡಿದ್ದಾನೆ. ನಿನ್ನನ್ನು ಕೊಂದು ನಾನು ಸಾಯುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದಲ್ಲದೆ, ಕಾರಿನಲ್ಲಿದ್ದ ಪೆಟ್ರೋಲ್ ಬಾಂಬ್ ತೋರಿಸಿ ಹೆದರಿಸಿದ್ದಾನೆ ಎಂದು ತಿಳಿದುಬಂದಿದೆ.

ಚಾಕು ಇರಿದಾಗ ಕಾರಿನಿಂದ ಜಿಗಿದು ಬದುಕುಳಿದ ಯುವತಿ: ಶಿರಾ ತಾಲ್ಲೂಕಿನ ಜೋಗಿಹಳ್ಳಿ ಸಮೀಪ ತಲುಪುತ್ತಿದ್ದಂತೆ ನಾಗೇಂದ್ರ ರಮ್ಯಾಳ ತಲೆ ಹಾಗೂ ಕೈಗೆ ಚಾಕುವಿನಿಂದ ಇರಿದಿದ್ದಾನೆ. ತೀವ್ರ ರಕ್ತಸ್ರಾವವಾಗಿ ಜೀವಭಯದಿಂದ ರಮ್ಯಾ, ಚಲಿಸುತ್ತಿದ್ದ ಕಾರಿನ ಲಾಕ್ ತೆಗೆದು ಹೊರಗೆ ಜಿಗಿದಿದ್ದಾರೆ. ತಕ್ಷಣ ಸ್ಥಳೀಯರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇದನ್ನೂ ಓದಿ: ಸಂಸದ ಬ್ರಿಜೇಶ್ ಚೌಟ ಪತ್ರಕ್ಕೆ ಸ್ಪಂದಿಸಿದ ಕೇಂದ್ರ: ಅಂಗಾಂಗ ಕಸಿ ಕ್ಷೇತ್ರದಲ್ಲಿ ಹೊಸ ನಿಯಮ ಜಾರಿ

ಕ್ಷಣಾರ್ಧದಲ್ಲಿ ಕಾರು ಸ್ಫೋಟ – ನಾಡಬಾಂಬ್ ಬಳಕೆಯ ಶಂಕೆ: ರಮ್ಯಾ ಕಾರಿನಿಂದ ಜಿಗಿದ ಕೆಲವೇ ಕ್ಷಣಗಳಲ್ಲಿ ವೇಗವಾಗಿ ಚಲಿಸುತ್ತಿದ್ದ ಕಾರು ಭಾರೀ ಶಬ್ದದೊಂದಿಗೆ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಕಾರು ಸಂಪೂರ್ಣ ಭಸ್ಮವಾಗಿದ್ದು, ಒಳಗಿದ್ದ ನಾಗೇಂದ್ರ ಸ್ಥಳದಲ್ಲೇ ಸಜೀವ ದಹನಗೊಂಡಿದ್ದಾನೆ.

ಕಾಡು ಪ್ರಾಣಿಗಳ ಬೇಟೆಗೆ ಬಳಸಲಾಗುವ ಮದ್ದುಗುಂಡು ಹಾಗೂ ಕಲ್ಲಿನ ಪುಡಿಯಿರುವ ನಾಡಬಾಂಬ್ ಅನ್ನು ಕಾರು ಸ್ಫೋಟಿಸಲು ಬಳಸಿರಬಹುದು ಎಂದು ಪ್ರಾಥಮಿಕ ತನಿಖೆಯಲ್ಲಿ ಶಂಕಿಸಲಾಗಿದೆ. ಸ್ಥಳಕ್ಕೆ ಕಳ್ಳಂಬೆಳ್ಳ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಧಿವಿಜ್ಞಾನ ತಜ್ಞರ (ವರದಿ ಬಂದ ಬಳಿಕವಷ್ಟೇ ಸ್ಫೋಟದ ನಿಖರ ಕಾರಣ ತಿಳಿದುಬರಬೇಕಿದೆ. ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಚುರುಕುಗೊಂಡಿದೆ.