ವಿಜಯಪುರದಲ್ಲಿ ಎಲೆಕ್ಟ್ರಾನಿಕ್ಸ್ ಕ್ಷೇತ್ರಕ್ಕೆ ಭಾರೀ ಉತ್ತೇಜನ: ಬರನಾಡಿನಿಂದ ಕೈಗಾರಿಕಾ ಕೇಂದ್ರದತ್ತ ಪಯಣ – 100 ಎಕರೆ ಪ್ರದೇಶದಲ್ಲಿ PCB ಮೆಗಾ ಕ್ಯಾಂಪಸ್ -ಉದ್ಯೋಗ ಕ್ರಾಂತಿಗೆ ಹೊಸ ಅಧ್ಯಾಯ
ವಿಜಯಪುರ: ಉತ್ತರ ಕರ್ನಾಟಕದ ಮೊದಲ ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್ (PCB) ಎಲೆಕ್ಟ್ರಾನಿಕ್ಸ್ ಉತ್ಪಾದನಾ ಘಟಕ ಸ್ಥಾಪನೆಗೆ ಮುಂದಾಗಿರುವ ಲಯನ್ ಸರ್ಕ್ಯೂಟ್ಸ್ (Lion Circuits) ಸಂಸ್ಥೆಯನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಹೃತ್ಪೂರ್ವಕವಾಗಿ ಸ್ವಾಗತಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ವಿಜಯಪುರ ಜಿಲ್ಲೆ ಕೈಗಾರಿಕಾ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸಾಧಿಸುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ವಿಜಯಪುರ ಜಿಲ್ಲೆಯು ಒಂದು ದಶಕದ ಹಿಂದೆ ಬರಪೀಡಿತ ಪ್ರದೇಶವೆಂಬ ಹೆಸರಿನಿಂದ ಗುರುತಿಸಿಕೊಂಡಿತ್ತು. ಆದರೆ, ಜಲ ಕ್ರಾಂತಿ, ಹಸಿರು ಕ್ರಾಂತಿ, ಶಿಕ್ಷಣ ಕ್ರಾಂತಿ ಮತ್ತು ಈಗ ಉದ್ಯೋಗ ಕ್ರಾಂತಿಯ ಮೂಲಕ ಜಿಲ್ಲೆಯು ಹೊಸ ಇತಿಹಾಸ ನಿರ್ಮಿಸುತ್ತಿದೆ ಎಂದು ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ಇದನ್ನೂ ಓದಿ: ಕೇಂದ್ರ ಸರ್ಕಾರದ ಹೊಸ ನಿಯಮ: ನಕಲಿ ಔಷಧ ತಡೆಗೆ QR code ಅಸ್ತ್ರ
100 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಲಿರುವ ಸಮಗ್ರ ಪಿಸಿಬಿ ಮೆಗಾ ಕ್ಯಾಂಪಸ್ (Integrated PCB Mega Campus) ರಾಜ್ಯದ ಎಲೆಕ್ಟ್ರಾನಿಕ್ಸ್ ಉತ್ಪಾದನಾ ವಲಯಕ್ಕೆ ಹೊಸ ದಿಕ್ಕು ತೋರಿಸಲಿದೆ. ಈ ಯೋಜನೆಯು ಕರ್ನಾಟಕವನ್ನು ದೇಶದ ಪ್ರಮುಖ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕೇಂದ್ರವನ್ನಾಗಿ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಯೋಜನೆ ತ್ವರಿತವಾಗಿ ಹಾಗೂ ಯಶಸ್ವಿಯಾಗಿ ಅನುಷ್ಠಾನಗೊಳ್ಳಲು ಸರ್ಕಾರ ಮತ್ತು ಕೈಗಾರಿಕಾ ಇಲಾಖೆ ಸಂಪೂರ್ಣ ಸಹಕಾರ ನೀಡಲಿದ್ದು, ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ತೆರಿಗೆ ಸೋರಿಕೆಗೆ ಬ್ರೇಕ್: ಅಧಿಕಾರಿಗಳಿಗೆ CM DK ಖಡಕ್ ಸಂದೇಶ
ಪ್ರಸ್ತುತ ವಿಜಯಪುರ ಜಿಲ್ಲೆ ಎಲೆಕ್ಟ್ರಾನಿಕ್ಸ್, ನವೀಕರಿಸಬಹುದಾದ ಇಂಧನ, ಪಾನೀಯ ಉದ್ಯಮ ಹಾಗೂ ಸುಧಾರಿತ ಉತ್ಪಾದನಾ ಕ್ಷೇತ್ರಗಳಲ್ಲಿ ಹೆಚ್ಚಿನ ಹೂಡಿಕೆಗಳನ್ನು ಆಕರ್ಷಿಸುತ್ತಿದೆ. ಇದರಿಂದ ಉತ್ತರ ಕರ್ನಾಟಕವು ಹೊಸ ಕೈಗಾರಿಕಾ ಬೆಳವಣಿಗೆಯ ಕೇಂದ್ರವಾಗಿ ರೂಪುಗೊಳ್ಳುತ್ತಿದೆ ಎಂದು ಅವರು ಹೇಳಿದ್ದಾರೆ.
ಈ ಯೋಜನೆಯು ಭಾರತದ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕ್ಷೇತ್ರಕ್ಕೆ ಹೊಸ ಮಾನದಂಡ ಸ್ಥಾಪಿಸಲಿ ಎಂದು ಆಶಿಸಿರುವ ಎಂ.ಬಿ. ಪಾಟೀಲ್, ಲಯನ್ ಸರ್ಕ್ಯೂಟ್ಸ್, ಟೆರಾ ಸರ್ಕ್ಯೂಟ್ಸ್ ಸಂಸ್ಥೆ ಹಾಗೂ ಸಂಸ್ಥೆಯ ಮುಖ್ಯಸ್ಥ ಮುರಳಿ ಶ್ರೀನಿವಾಸ ಮತ್ತು ಅವರ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.





















