SK Home Ad
Home ಸಿನಿ ಮಿಲ್ಸ್ ಕಡಲಿಂದ ನಾಡು… ಕಂಬಳದ ವೈಭವ ಅನಾವರಣಗೊಳಿಸಿದ ‘ಕರಾವಳಿ’

ಕಡಲಿಂದ ನಾಡು… ಕಂಬಳದ ವೈಭವ ಅನಾವರಣಗೊಳಿಸಿದ ‘ಕರಾವಳಿ’

0
65

ಪ್ರಜ್ವಲ್ ದೇವರಾಜ್-ರಾಜ್ ಬಿ ಶೆಟ್ಟಿ ನಟನೆಯ ‘ಕರಾವಳಿ’ ಚಿತ್ರದ ಟೈಟಲ್ ಟ್ರ್ಯಾಕ್ ಬಿಡುಗಡೆಯಾಗಿ ಹಾಡು ಸದ್ದು ಮಾಡುತ್ತಿದೆ

ಬೆಂಗಳೂರು: ನಟ ಪ್ರಜ್ವಲ್ ದೇವರಾಜ್ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ಬಹುನಿರೀಕ್ಷಿತ ‘ಕರಾವಳಿ’ ಚಿತ್ರದ ಟೈಟಲ್ ಟ್ರ್ಯಾಕ್ ಬಿಡುಗಡೆಯಾಗಿದ್ದು, ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ಗುರುದತ್ ಗಾಣಿಗ ನಿರ್ದೇಶನದ ಈ ಸಿನಿಮಾ ಜುಲೈ 24ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ.

ಇತ್ತೀಚೆಗಷ್ಟೇ ಚಿತ್ರದ ಬಿಡುಗಡೆಯ ದಿನಾಂಕ ಘೋಷಿಸಿದ್ದ ಚಿತ್ರತಂಡ, ಮೊದಲ ಝಲಕ್ ಮೂಲಕ ಕುತೂಹಲ ಮೂಡಿಸಿತ್ತು. ಇದೀಗ ‘ಸೋಲ್ ಆಫ್ ಕರಾವಳಿ’ ಎಂಬ ಶೀರ್ಷಿಕೆಯಲ್ಲಿ ಬಿಡುಗಡೆಗೊಂಡಿರುವ ಟೈಟಲ್ ಟ್ರ್ಯಾಕ್, ಕರಾವಳಿ ಭಾಗದ ಸಂಸ್ಕೃತಿ, ಪರಂಪರೆ ಹಾಗೂ ಜೀವನಶೈಲಿಯನ್ನು ಅದ್ಭುತವಾಗಿ ತೆರೆದಿಟ್ಟಿದೆ.

ಇದನ್ನೂ ಓದಿ: ಡಾಲಿ ನಿರ್ಮಾಣದ ‘ಮದರ್ ಪ್ರಾಮಿಸ್’ ಟ್ರೈಲರ್‌ನಲ್ಲಿ ಭಾವನೆಗಳ ಜಾತ್ರೆ

‘ಕಡಲಿಂದ ನಾಡು… ಕಡಲಿಂದ ಕಾಡು… ಕಡಲಿಂದ ತಾನೆ ಒಡಲಾಗೂಡು…’ ಎಂಬ ಸಾಲುಗಳಿಂದ ಆರಂಭವಾಗುವ ಈ ಹಾಡು, ಕರಾವಳಿಯ ಸೊಗಡನ್ನು ಸಾರುವ ಪ್ರಯತ್ನ ಮಾಡಿದೆ. ವಿಶೇಷವಾಗಿ ಕರಾವಳಿಯ ಹೆಮ್ಮೆಯ ಕ್ರೀಡೆ ಕಂಬಳವನ್ನು ಹಾಡಿನಲ್ಲಿ ಅದ್ಭುತವಾಗಿ ಚಿತ್ರಿಸಲಾಗಿದೆ.

ಈ ಹಾಡಿನ ಸಂಪೂರ್ಣ ಚಿತ್ರೀಕರಣವನ್ನು ಉಡುಪಿಯ ಕಟಪಾಡಿ ಕಂಬಳ ಟ್ರ್ಯಾಕ್‌ನಲ್ಲಿ ನಡೆಸಲಾಗಿದೆ. ಸುಮಾರು 700 ವರ್ಷಗಳ ಇತಿಹಾಸ ಹೊಂದಿರುವ ಕಟಪಾಡಿ ಕಂಬಳದಲ್ಲಿ ಇದೇ ಮೊದಲ ಬಾರಿಗೆ ಸಿನಿಮಾ ಚಿತ್ರೀಕರಣ ನಡೆದಿರುವುದು ವಿಶೇಷ. ಅಂದಿನಿಂದ ಇಂದಿನವರೆಗೂ ಒಂದೇ ಕುಟುಂಬ ಈ ಕಂಬಳವನ್ನು ಆಯೋಜಿಸುತ್ತಿರುವುದು ಅದರ ವೈಶಿಷ್ಟ್ಯವಾಗಿದೆ.

ಇದನ್ನೂ ಓದಿ: ರಾಮ ಮಂದಿರ ದೇಣಿಗೆ ಪ್ರಕರಣ: ಟ್ರಸ್ಟ್‌ನ ಇಬ್ಬರು ಪ್ರಮುಖರ ರಾಜೀನಾಮೆ

ಪ್ರಮೋದ್ ಮರವಂತೆ ಸಾಹಿತ್ಯ ಬರೆದಿರುವ ಈ ಹಾಡಿಗೆ ಸಂಗೀತ ನಿರ್ದೇಶಕ ಸಚಿನ್ ಬಸ್ರೂರು ಸಂಗೀತ ಸಂಯೋಜಿಸಿದ್ದು, ಸಾಯಿ ವಿಘ್ನೇಶ್ ಧ್ವನಿಯಾಗಿದ್ದಾರೆ. ಕರಾವಳಿ ಸಂಸ್ಕೃತಿಯ ಅನನ್ಯತೆಯನ್ನು ಸಾರುವ ಈ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.