SK Home Ad
Home ನಮ್ಮ ಜಿಲ್ಲೆ ಗದಗ ವೀರೇಶ್ವರ ಪುಣ್ಯಾಶ್ರಮದಲ್ಲಿ ಶೀತಲ ಸಮರ: ಟ್ರಸ್ಟಿಗಳಿಂದ ಜೀವ ಬೆದರಿಕೆ

ವೀರೇಶ್ವರ ಪುಣ್ಯಾಶ್ರಮದಲ್ಲಿ ಶೀತಲ ಸಮರ: ಟ್ರಸ್ಟಿಗಳಿಂದ ಜೀವ ಬೆದರಿಕೆ

0
290

ಗದಗ: ನಾಡಿನ ಸಹಸ್ರಾರು ಅಂಧರಿಗೆ ಸಂಗೀತ ಶಿಕ್ಷಣ ನೀಡುವ ಮೂಲಕ ಅಂಧರ ಬಾಳಿಗೆ ಬೆಳಕು ನೀಡಿರುವ ವೀರೇಶ್ವರ ಪುಣ್ಯಾಶ್ರಮದ ಟ್ರಸ್ಟ್‌ನಲ್ಲಿ ಶೀತಲ ಸಮರ ಪ್ರಾರಂಭವಾಗಿದ್ದು, ಉಭಯ ಗಾನ ವಿಷಾರದ ಲಿಂ. ಪಂಡಿತ ಡಾ. ಪುಟ್ಟರಾಜ ಕವಿ ಗವಾಯಿಗಳ ಉತ್ತರಾಧಿಕಾರಿಯಾಗಿ ಪೀಠಾಧಿಕಾರಿಯಾಗಿರುವ ಕಲ್ಲಯ್ಯಜ್ಜನವರಿಗೆ ಟ್ರಸ್ಟಿಗಳು ಜೀವ ಬೆದರಿಕೆ, ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಕಲ್ಲಯ್ಯಜ್ಜನವರು ಗಂಭೀರ ಆರೋಪ ಮಾಡಿದ್ದಾರೆ.

ಗದುಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ತುರ್ತು ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರ ಮುಂದೆ ಕಣ್ಣಿನಲ್ಲಿ ನೀರು ತುಂಬಿಕೊಂಡು ಜೀವಬೆದರಿಕೆ, ಮಾನಸಿಕ ಕಿರುಕುಳದ ಬಗ್ಗೆ ವಿವರಿಸಿದ ಕಲ್ಲಯ್ಯಜ್ಜನವರು, ತಾವು ಪೀಠಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ವೀರೇಶ್ವರ ಪುಣ್ಯಾಶ್ರಮದಲ್ಲಿ, ನಾಡಿನ ವಿವಿಧ ಪ್ರದೇಶಗಳಲ್ಲಿ ನಡೆದ ತುಲಾಭಾರದಲ್ಲಿ ದೊರೆತಿರುವ ಹಣ, ಇತರೆ ಕಾಣಿಕೆ ಆಯಾ ಪ್ರದೇಶದಲ್ಲಿನ ಮಠಗಳ ಅಭಿವೃದ್ಧಿಗೆ, ವೀರೇಶ್ವರ ಪುಣ್ಯಾಶ್ರಮದ ಅಭಿವೃದ್ಧಿಗೆ ವಿನಿಯೋಗಿಸಿದ್ದೇವೆ. ಟ್ರಸ್ಟಿಗಳು ಆರೋಪಿಸಿದಂತೆ ತಾವು ತಮ್ಮ ವೈಯಕ್ತಿಕ ಹೆಸರಿನಲ್ಲಿ ದೇಶದ ಯಾವುದೇ ಸ್ಥಳದಲ್ಲಿಯೂ ಆಸ್ತಿಗಳನ್ನು ಖರೀದಿಸಿಲ್ಲ. ಒಂದೇ ಒಂದು ನಯಾಪೈಸೆ ದುರುಪಯೋಗಪಡಿಸಿಕೊಂಡಿಲ್ಲ ಎಂದು ಹೇಳಿದರು.

ವೀರೇಶ್ವರ ಪುಣ್ಯಾಶ್ರಮದ ಟ್ರಸ್ಟಿಗಳು ಸುಖಾಸುಮ್ಮನೆ ತಮ್ಮ ಮೇಲೆ ಅಧಿಕಾರ ದುರುಪಯೋಗದ ಆರೋಪ ಮಾಡುತ್ತಿದ್ದಾರೆ. ತಮಗೆ ಟ್ರಸ್ಟಿಗಳಿಂದ ಮಾನಸಿಕ ಕಿರುಕುಳ, ಜೀವ ಬೆದರಿಕೆ ಇದೆ. ಇದನ್ನು ಕಳೆದ ನಾಲ್ಕು ವರ್ಷಗಳಿಂದ ಹೃದಯದಲ್ಲಿಯೇ ಅದುಮಿಟ್ಟು ಕೊಂಡಿದ್ದೇನೆ. ಇದೀಗ ನನಗೆ ಮಾನಸಿಕ ಕಿರುಕುಳ, ಜೀವಬೆದರಿಕೆ ಅದುಮಿಟ್ಟುಕೊಳ್ಳಲು ಆಗದ್ದಕ್ಕೆ ಪತ್ರಿಕಾಗೋಷ್ಠಿ ಕರೆದು ಸುದ್ದಿಗಾರರಿಗೆ ವಿವರಿಸಿದ್ದೇನೆ ಎಂದರು.

ವೀರೇಶ್ವರ ಪುಣ್ಯಾಶ್ರಮದ ಆರು ಜನ ಟ್ರಸ್ಟಿಗಳ ವಿರುದ್ಧ ಗುರುವಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಉದ್ದೇಶಿಸಿದ್ದಾಗಿ ವಿವರಿಸಿದರು. ವೀರೇಶ್ವರ ಪುಣ್ಯಾಶ್ರಮದ ತೇರಿನ ಗಾಲಿಗಳನ್ನು ಮಠದ ಭಕ್ತೆಯಾಗಿರುವ ಜೋಹರಾ ಪೀರಸಾಬ ಕೌತಾಳ ಎಂಬುವವರು ತಮ್ಮ ಸ್ವಂತ ವೆಚ್ಚದಲ್ಲಿ ಮಾಡಿಸಿ ದೇಣಿಗೆಯಾಗಿ ನೀಡಿದ್ದಾರೆ. ಗಾಲಿಗಳ ಮೇಲೆ ದಾನಿಗಳು ತಮ್ಮ ಹೆಸರು ಕೆತ್ತಿಸಿದ್ದಾರೆ. ಇದರಲ್ಲಿ ಯಾವದೇ ತಪ್ಪಿಲ್ಲ. ವೀರೇಶ್ವರ ಪುಣ್ಯಾಶ್ರಮಕ್ಕೆ ಯಾವುದೇ ದಾನಿ ಹೆಸರು ಹಾಕುವಂತೆ ಸೂಚಿಸಿ ದಾನ ನೀಡಿದರೂ ಸ್ವೀಕರಿಸುತ್ತೇವೆ. ಹೆಸರು ಹಾಕದಂತೆ ಗುಪ್ತದಾನ ನೀಡಿದವರಿಂದಲೂ ದಾನ ಸ್ವೀಕರಿಸಲಾಗುತ್ತಿದೆ ಎಂದು ವಿವರಿಸಿದರು.