SK Home Ad
Home ಸುದ್ದಿ ದೇಶ ʻಆಪರೇಷನ್ ಟೈಗರ್ʼ ಸಕ್ಸಸ್: ಶಿಂದೆ ಸೇನೆಗೆ ಠಾಕ್ರೆ ಬಣದ 6 ಸಂಸದರು

ʻಆಪರೇಷನ್ ಟೈಗರ್ʼ ಸಕ್ಸಸ್: ಶಿಂದೆ ಸೇನೆಗೆ ಠಾಕ್ರೆ ಬಣದ 6 ಸಂಸದರು

0
26

ಮುಂಬೈ: ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಪಕ್ಷಕ್ಕೆ ಮತ್ತೊಮ್ಮೆ ದೊಡ್ಡ ಹೊಡೆತ ಬಿದ್ದಿದ್ದು, ಪಕ್ಷದ ಸಂಸದ ಓಂರಾಜೆ ನಿಂಬಾಳ್ಕರ್ ನೇತೃತ್ವದಲ್ಲಿ 6 ಮಂದಿ ಅಧಿಕೃತವಾಗಿ ಡಿಸಿಎಂ ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ. ಮಹಾಯುತಿ ಮೈತ್ರಿಕೂಟದ ನಾಯಕರು ಆಪರೇಷನ್ ಟೈಗರ್ ಎಂದು ಕರೆದಿದ್ದು, ಕಾರ್ಯಾಚರಣೆ ಸಂಪೂರ್ಣ ಯಶಸ್ವಿಯಾಗಿದೆ ಎಂದು ಘೋಷಿಸಿದ್ದಾರೆ.

ಲೋಕಸಭೆಯಲ್ಲಿ ಉದ್ಧವ್ ಬಣದಲ್ಲಿದ್ದ 9 ಸಂಸದರ ಪೈಕಿ ಮೂರನೇ ಎರಡರಷ್ಟು (6 ಸಂಸದರು) ಒಟ್ಟಿಗೆ ಶಿಂಧೆ ಬಣಕ್ಕೆ ಜಿಗಿದಿರುವುದರಿಂದ, ಇವರ ವಿರುದ್ಧ ಪಕ್ಷಾಂತರ ನಿರೋಧಕ ಕಾಯ್ದೆಯಡಿ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಬಂಡಾಯ ಸಂಸದರು ಈಗಾಗಲೇ ತಮಗೊಂದು ಪ್ರತ್ಯೇಕ ಗುಂಪಾಗಿ ಗುರುತಿಸುವಂತೆ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರಿಗೆ ಅಧಿಕೃತ ಪತ್ರ ಬರೆದಿದ್ದಾರೆ. ಈ ಸೇರ್ಪಡೆಯೊಂದಿಗೆ ಲೋಕಸಭೆಯಲ್ಲಿ ಉದ್ಧವ್ ಬಣದ ಸಂಖ್ಯಾಬಲ 3ಕ್ಕೆ ಕುಸಿದಿದ್ದರೆ, ಶಿಂಧೆ ನೇತೃತ್ವದ ಶಿವಸೇನೆಯ ಬಲ 13ಕ್ಕೆ ಏರಿಕೆಯಾಗಿದೆ.

ಮುಂಬೈನಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಂಡಾಯ ಸಂಸದರಾದ ಓಂರಾಜೆ ನಿಂಬಾಳ್ಕರ್ ಮತ್ತು ನಾಗೇಶ್ ಅಷ್ಟಿಕರ್, ಕಳೆದ ಎರಡು ವರ್ಷಗಳಿಂದ ವಿರೋಧ ಪಕ್ಷದಲ್ಲಿ ಕುಳಿತಿದ್ದರಿಂದ ನಮ್ಮ ಕ್ಷೇತ್ರಗಳಿಗೆ ಯಾವುದೇ ಅಭಿವೃದ್ಧಿ ಅನುದಾನ ಸಿಗುತ್ತಿರಲಿಲ್ಲ. ಕೇವಲ 5 ಕೋಟಿ ರೂ. ನಿಧಿಯಿಂದ ಕ್ಷೇತ್ರದ ಅಭಿವೃದ್ಧಿ ಸಾಧ್ಯವಿರಲಿಲ್ಲ. ಕ್ಷೇತ್ರದ ಜನರ ಹಿತದೃಷ್ಟಿಯಿಂದ ನಾವು ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.