ದುಬೈ: ಮಹಿಳಾ ಕ್ರಿಕೆಟಿಗರು ತಮ್ಮ ವೃತ್ತಿಜೀವನ ಮತ್ತು ಕುಟುಂಬ ಜೀವನದ ನಡುವೆ ಸಮತೋಲನ ಸಾಧಿಸಲು ನೆರವಾಗುವ ಮಹತ್ವದ ಹೆಜ್ಜೆಯಾಗಿ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಹೊಸ ಗರ್ಭಧಾರಣೆಯ ನಂತರ ಆಟಕ್ಕೆ ಮರಳುವ (Post-Pregnancy Return to Play) ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಜೂನ್ 22, 2026ರಂದು ಪ್ರಕಟಿಸಲಾದ ಈ ಹೊಸ ಚೌಕಟ್ಟು, ತಾಯ್ತನದ ಬಳಿಕ ಮಹಿಳಾ ಆಟಗಾರ್ತಿಯರು ಸುರಕ್ಷಿತವಾಗಿ ಮತ್ತು ಹಂತ ಹಂತವಾಗಿ ಮತ್ತೆ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಲು ನೆರವಾಗುವ ಉದ್ದೇಶ ಹೊಂದಿದೆ. ಮಹಿಳಾ ಕ್ರಿಕೆಟ್ ಜಾಗತಿಕ ಮಟ್ಟದಲ್ಲಿ ವೇಗವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ, ಪ್ರತಿಭಾವಂತ ಆಟಗಾರ್ತಿಯರು ತಾಯ್ತನದ ಕಾರಣದಿಂದ ಆಟದಿಂದ ದೂರ ಉಳಿಯದಂತೆ ನೋಡಿಕೊಳ್ಳುವುದು ಈ ನೀತಿಯ ಪ್ರಮುಖ ಉದ್ದೇಶವಾಗಿದೆ.
ಇದನ್ನೂ ಓದಿ: ನ್ಯೂಜಿಲೆಂಡ್‌ನ್ನು ಮಣಿಸಿದ ಭಾರತ: FIH ಪ್ರೊ ಲೀಗ್‌ಗೆ ಬಡ್ತಿ ಖಚಿತ
ಐಸಿಸಿ ರೂಪಿಸಿರುವ ಈ ವ್ಯವಸ್ಥೆಯಲ್ಲಿ 6 ಮಾದರಿಯನ್ನು ಅಳವಡಿಸಲಾಗಿದೆ. ಈ ಮಾದರಿಯು ಪ್ರಸವಾನಂತರದ ಆರಂಭಿಕ ವಾರಗಳಲ್ಲಿ ದೈಹಿಕ ಚೇತರಿಕೆಯಿಂದ ಆರಂಭವಾಗಿ, ತರಬೇತಿಗೆ ಮರಳುವುದು, ಕೌಶಲ್ಯ ಪುನಃ ಅಭಿವೃದ್ಧಿಪಡಿಸುವುದು, ಸ್ಪರ್ಧಾತ್ಮಕ ಪಂದ್ಯಗಳಿಗೆ ಸಜ್ಜಾಗುವುದು ಮತ್ತು ನಿರಂತರ ವೈದ್ಯಕೀಯ ಮೇಲ್ವಿಚಾರಣೆಯವರೆಗೆ ಆರು ಹಂತಗಳನ್ನು ಒಳಗೊಂಡಿದೆ.
ಪ್ರತಿ ಆಟಗಾರ್ತಿಗೆ ಪ್ರತ್ಯೇಕ ಕೇಸ್ ಮ್ಯಾನೇಜರ್‌ಗಳನ್ನು ನೇಮಿಸುವ ವ್ಯವಸ್ಥೆಯೂ ಈ ಚೌಕಟ್ಟಿನಲ್ಲಿ ಸೇರಿಸಲಾಗಿದೆ. ಅಲ್ಲದೆ, ಹೊಂದಿಕೊಳ್ಳುವ ತರಬೇತಿ ವೇಳಾಪಟ್ಟಿ, ಮಕ್ಕಳ ಆರೈಕೆ ಕೇಂದ್ರಗಳು, ಸ್ತನ್ಯಪಾನ ಸೌಲಭ್ಯಗಳು ಹಾಗೂ ಮಾನಸಿಕ ಆರೋಗ್ಯ ಬೆಂಬಲವನ್ನು ಸಹ ಒದಗಿಸಲು ಐಸಿಸಿ ಶಿಫಾರಸು ಮಾಡಿದೆ.
ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ Team India ಪ್ರಕಟ
ಈ ಕುರಿತು ಪ್ರತಿಕ್ರಿಯಿಸಿರುವ ಐಸಿಸಿ ಅಧ್ಯಕ್ಷ ಜಯ ಶಾ, “ಯಾವುದೇ ಮಹಿಳಾ ಕ್ರಿಕೆಟಿಗ ತಾಯ್ತನ ಮತ್ತು ತನ್ನ ದೇಶವನ್ನು ಪ್ರತಿನಿಧಿಸುವ ನಡುವಿನ ಆಯ್ಕೆಯನ್ನು ಮಾಡಬೇಕಾದ ಪರಿಸ್ಥಿತಿ ಬರಬಾರದು” ಎಂದು ಹೇಳಿದ್ದಾರೆ. ಇದೇ ವೇಳೆ, ವೆಸ್ಟ್ ಇಂಡೀಸ್ ಮಹಿಳಾ ಕ್ರಿಕೆಟಿಗ ಅಫಿ ಫ್ಲೆಚರ್ (Afy Fletcher) ಹಾಗೂ ಕ್ರೀಡಾ ವೈದ್ಯಕೀಯ ತಜ್ಞೆ ಡಾ. ಫಿಲಿಪ್ಪಾ ಇಂಗೆ (Dr Philippa Inge) ಈ ಕ್ರಮವನ್ನು ಸ್ವಾಗತಿಸಿದ್ದು, ಮಹಿಳಾ ಆಟಗಾರ್ತಿಯರು ಎದುರಿಸುವ ದೈಹಿಕ ಮತ್ತು ಮಾನಸಿಕ ಸವಾಲುಗಳನ್ನು ಎದುರಿಸಲು ಈ ಮಾರ್ಗಸೂಚಿಗಳು ನೆರವಾಗಲಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಐಸಿಸಿಯ ಈ ಹೊಸ ಕ್ರಮವು ಮಹಿಳಾ ಕ್ರಿಕೆಟ್‌ನಲ್ಲಿ ಇನ್ನಷ್ಟು ಸಮಾನತೆ ಮತ್ತು ವೃತ್ತಿಪರತೆಯನ್ನು ತರಲಿದ್ದು, ಜಾಗತಿಕ ಕ್ರೀಡಾ ವಲಯದಲ್ಲಿ ಮಹತ್ವದ ಮೈಲಿಗಲ್ಲಾಗಿ ಪರಿಗಣಿಸಲಾಗುತ್ತಿದೆ.






















