ಚಿತ್ರ: ದೊಡ್ಮನ್ಸ
ನಿರ್ದೇಶನ: ಶರತ್ ಕೃಷ್ಣ
ನಿರ್ಮಾಣ: ಶರತ್ ಕೃಷ್ಣ
ತಾರಾಗಣ: ಶರತ್ ಕೃಷ್ಣ, ರೇಷ್ಮಾ ಲಿಂಗರಾಜಪ್ಪ, ಬಲ ರಾಜ್‌ವಾಡಿ ಹಾಗೂ ಹುಲಿ ಕಾರ್ತಿಕ್ ಇತರರು.
ಕಷ್ಟದಲ್ಲಿರುವವರನ್ನು ಕಂಡು ಮರುಗುವ ನಾಯಕನಿಗೆ, ತಾನೆಷ್ಟೇ ಸಂಕಷ್ಟದಲ್ಲಿದರೂ ಪರರಿಗೆ ಸಹಾಯ ಮಾಡುವಂಥ ಪರೋಪಕಾರಿ. ಆಟೋ ಡ್ರೈವರ್ ಆದರೂ ಬದುಕು ‘ಆಟೋ’ಮ್ಯಾಟಿಕ್ ಅಲ್ಲ ಎಂಬುದನ್ನು ಅರಿತಿರುವ ನರಮನ್ಸ, ಒಳ್ಳೆ ಮನಸ್ಸಿನಿಂದ ಊರಿನವರ ಆಪತ್ತಿನ ಕಾಲದಲ್ಲಿ ಅರ್ಥಾತ್ ಆಪತ್ಬಾಂಧವನಂತೆಯೇ ದರ್ಶನ ಕೊಡುವ ನಾಯಕ ‘ದೊಡ್ಮನ್ಸ’ನಾಗುವ ಕಥೆ-ಚಿತ್ರಕಥೆಯೇ ಇಡೀ ಸಿನಿಮಾದ ಸಾರ.
ತಂಗಿಯ ಮದುವೆಗೆ ಹಣವಿಲ್ಲ ಎಂದರೆ, ತನ್ನ ಆಟೋವನ್ನೇ ಅಡಮಾನವಿಟ್ಟು ದುಡ್ಡು ಕೊಡುವ ‘ದೊಡ್ಮನ್ಸ’ನದ್ದು ಒಂದೇ ಧ್ಯೇಯ; ಎಲ್ಲರಿಗೂ ಒಳ್ಳೆಯದನ್ನೇ ಮಾಡಬೇಕು… ಒಳ್ಳೆಯದನ್ನು ಬಯಸಿ, ಒಳ್ಳೆವ್ನಾಗಿರಬೇಕು. ಆದರೆ ಸ್ವಾರ್ಥವೇ ತುಂಬಿರುವ ಈ ಜಗತ್ತಿನಲ್ಲಿ ಒಳ್ಳೆಯವನಾಗಿದ್ದರೆ ಎಷ್ಟು ತೊಂದರೆಯಾಗುತ್ತದೆ, ಸಮಸ್ಯೆಗಳನ್ನು ಎದುರಿಸಬೇಕು ಎಂಬುದಕ್ಕೆ ‘ದೊಡ್ಮನ್ಸ’ನೇ ತಾಜಾ ಸಾಕ್ಷಿ ಮತ್ತು ಉದಾಹರಣೆ..!
ಲವ್, ಫ್ರೆಂಡ್‌ಶಿಪ್, ಸೆಂಟಿಮೆಂಟ್… ಹೀಗೆ ಎಲ್ಲವೂ ಬೆರೆತಿರುವ ಪಕ್ಕಾ ಕಮರ್ಷಿಯಲ್ ಎಂಟರ್‌ಟೈನರ್ ಸಿನಿಮಾವನ್ನಾಗಿಸಲು ನಿರ್ದೇಶಕ ಶರತ್ ಕೃಷ್ಣ ಸಾಕಷ್ಟು ಶ್ರಮ ಹಾಕಿರುವುದು ಎದ್ದು ಕಾಣುತ್ತದೆ. ನಿರ್ಮಾಣ ಹಾಗೂ ನಟನೆಯೂ ಅವರದ್ದೇ ಆಗಿರುವುದರಿಂದ ಸಿನಿಮಾದೊಳಗಿನ ಕಷ್ಟದ ಬೇಗುದಿ, ಅದರಾಚೆಗೂ ಇರುವುದು ಕಾಣಸಿಗುತ್ತದೆ. ಅದಾಗ್ಯೂ ಬಹುತೇಕ ಕಾರ್ಯಗಳನ್ನು ಹೆಗಲ ಮೇಲೆ ಹೊತ್ತು ಭರವಸೆ ಮೂಡಿಸಲು ಪ್ರಯತ್ನಿಸಿದ್ದಾರೆ. ರೇಷ್ಮಾ ಇದ್ದಷ್ಟು ಹೊತ್ತು ಓಕೆ… ಓಕೆ. ಬಲ ರಾಜ್‌ವಾಡಿ ಹಾಗೂ ಹುಲಿ ಕಾರ್ತಿಕ್ ಕೊಂಚ ಗಮನ ಸೆಳೆಯುತ್ತಾರೆ. ಅಲೆಕ್ಸ್ ಮತ್ತು ಶ್ರೀಧರ್ ಕಶ್ಯಪ್ ಸಂಗೀತ ಸಿನಿಮಾಕ್ಕೆ ಪೂರಕವಾಗಿದೆ.






















