ಕೊಪ್ಪಳ: ಗ್ಯಾರಂಟಿ ಯೋಜನೆಗೆ ಅರ್ಜಿ ಹಾಕುವಂತೆ ಸಿಎಂ ಡಿ.ಕೆ. ಶಿವಕುಮಾರ ಹೇಳುತ್ತಿದ್ದಾರೆ. ಈ ಮೂಲಕ ಐದಾರು ತಿಂಗಳು ಕಾಲಹರಣ ಮಾಡಿ ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಯೋಜನೆ ತೆಗೆಯಲು ಪ್ಲ್ಯಾನ್ ಮಾಡಿದ್ದಾರೆ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ಧನ ರೆಡ್ಡಿ ಆರೋಪಿಸಿದರು.
ಕೊಪ್ಪಳ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನನ ಮತ್ತು ಮರಣ ಪ್ರಮಾಣ ಪತ್ರವನ್ನು ಆನ್‌ಲೈನ್ ಮೂಲಕವೇ ನೀಡಲಾಗುತ್ತದೆ. ಹಾಗಾಗಿ ಸರ್ಕಾರದ ಬಳಿಯೇ ಅಂಕಿ-ಅಂಶಗಳಿರುತ್ತವೆ. ಸಿಎಂ ತಮ್ಮ ಚೇಂಬರ್‌ನಲ್ಲಿ ಕುಳಿತು ಒಂದು ಬಟನ್ ಪ್ರೆಸ್ ಮಾಡಿದರೆ, ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ಜಮೆ ಆಗುತ್ತದೆ. ಇನ್ನೊಂದು ಎರಡ್ಮೂರು ತಿಂಗಳು ಡಿ.ಕೆ. ಶಿವಕುಮಾರ್ ಆಡಳಿತ ನೋಡಿ ಎಲ್ಲ ಗೊತ್ತಾಗುತ್ತದೆ ಎಂದರು.
ಗೃಹಲಕ್ಷ್ಮೀ ಯೋಜನೆಯ ಹಣ ಬಾರದಿರುವ ಕುರಿತು ಶಾಸಕ ಟೆಂಗಿನಕಾಯಿ ಆರೋಪ ವಿಚಾರವಾಗಿ ಉತ್ತರಿಸಿ ಹಣ ಎಲ್ಲಿ ಹೋಗುತ್ತದೆ ಎನ್ನುವುದನ್ನು ನಾವು ನೋಡುತ್ತಿರುತ್ತೇವೆ ಎಂದರು.
ಬಿಡದಿ ಟೌನಶಿಪ್ ವಿಚಾರವಾಗಿ ಪ್ರತಿಕ್ರಿಯಿಸಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ 20ರಂದು ಹೋರಾಟ ಹಮ್ಮಿಕೊಳ್ಳಲಾಗಿದೆ. ನಾವು ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದರು.
ಮಾಜಿ ಸಿಎಂ ಸಿದ್ದರಾಮಯ್ಯ ಬಳ್ಳಾರಿಗೆ ಬಂದಿದ್ದಾಗ ಭಾಷಣದಲ್ಲಿ 1 ಲಕ್ಷ ಕೋಟಿ ಹಣವನ್ನು ನಾನು ಲೂಟಿ ಮಾಡಿದ್ದೇನೆ ಎಂದು ಭಾಷಣ ಮಾಡಿದ್ದರು. ಆದರೆ ನನ್ನ ವ್ಯವಹಾರವೇ 6 ಸಾವಿರ ಕೋಟಿ ರೂ. ಇದೆ. ಇದರಲ್ಲಿ ಶೇ. 60ರಷ್ಟು ವಿವಿಧ ತೆರಿಗೆಗೆ ಹೋಗುತ್ತದೆ. ಇದರಲ್ಲಿ ಉಳಿಯುವುದು ಎಷ್ಟು? ಈಗಲೂ ಜನರು ನನ್ನ ಬಳಿ 1 ಲಕ್ಷ ಕೋಟಿ ರೂ. ಇದೆ ಎಂದೇ ಭಾವಿಸಿದ್ದಾರೆ. ಆಂಧ್ರಪ್ರದೇಶದಲ್ಲಿ ಇದನ್ನೇ ಹೇಳಿ, ಭಾಷಣ ಮಾಡಿದರು ಎಂದು ವಾಗ್ದಾಳಿ ನಡೆಸಿದರು.






















