SK Home Ad
Home ನಮ್ಮ ಜಿಲ್ಲೆ ಬಾಗಲಕೋಟೆ ಬಿಟಿಡಿಎ ನೌಕರನಿಗೆ ಚಪ್ಪಲಿ ಏಟು: ರೈತನ ಬಂಧನ

ಬಿಟಿಡಿಎ ನೌಕರನಿಗೆ ಚಪ್ಪಲಿ ಏಟು: ರೈತನ ಬಂಧನ

0
137

ಬಾಗಲಕೋಟೆ: ಬಿಟಿಡಿಎ ಸಿಬ್ಬಂದಿ ನೀಲಕಂಠ ಅಂಕದ ಅವರಿಗೆ ಚಪ್ಪಲಿಯಿಂದ ಹೊಡೆದಿರುವ ರೈತ ಬಸಪ್ಪ ದೊಡ್ಡಮನಿಯನ್ನು ಸೋಮವಾರ ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಘಟನೆ ನಡೆದ ದಿನ ಶನಿವಾರ ಆತನನ್ನು ಠಾಣೆಗೆ ಕರೆಯಿಸಿ ನವನಗರ ಪೊಲೀಸರು ವಿಚಾರಣೆ ನಡೆಸಿದ್ದರು. ಆದರೆ ಅವರ ಮೇಲೆ ದಾಖಲಾಗಿರುವ ಸೆಕ್ಷನಗಳ ಅಡಿಯಲ್ಲಿ ಠಾಣೆಯಲ್ಲೇ ಜಾಮೀನು ಮಂಜೂರು ಮಾಡಲು ಅವಕಾಶವಿದ್ದಿದ್ದರಿಂದ ಆತನಿಗೆ ಬುದ್ಧಿವಾದ ಹೇಳಿ ಕಳುಹಿಸಿದ್ದರು.

ಸೋಮವಾರ ಪ್ರಾಧಿಕಾರದ ಅಧಿಕಾರಿಗಳು ಧರಣಿ ನಡೆಸಿದ್ದರ ಪರಿಣಾಮ ಆತನನ್ನು ತನಿಖಾಧಿಕಾರಿಗಳು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಬಸಪ್ಪನನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದ್ದು, ಮಂಗಳವಾರ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಗೆ ಬರುವ ಸಾಧ್ಯತೆಯಿದೆ.

ಈ ಮಧ್ಯೆ, ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಸಿಬ್ಬಂದಿ ಘಟನೆ ಖಂಡಿಸಿ ಧರಣಿ ನಡೆಸಿದರು. ಚಪ್ಪಲಿ ಏಟು ನೀಡಿ ಹಲ್ಲೆ ನಡೆಸಿರುವ ಬಸಪ್ಪ ದೊಡ್ಡಮನಿ ಬಂಧನಕ್ಕೆ ನೌಕರರು ಪಟ್ಟು ಹಿಡಿದರು.

ಸೋಮವಾರ ಬೆಳಗ್ಗೆ ಕರ್ತವ್ಯಕ್ಕೆ ಹಾಜರಾಗದೆ ವಿದ್ಯಾಗಿರಿಯಲ್ಲಿರುವ ಪ್ರಾಧಿಕಾರದ ಪ್ರವೇಶದ್ವಾರದ ಮುಂಭಾಗ ಧರಣಿ ಕುಳಿತ ನೌಕರರು ತಮಗೆ ರಕ್ಷಣೆ ನೀಡುವಂತೆ ಘೋಷಣೆಗಳನ್ನು ಕೂಗಿದರು. ನೀಲಕಂಠ ಅಂಕದ ಅವರ ಕುಟುಂಬಸ್ಥರೂ ಧರಣಿಯಲ್ಲಿ ಪಾಲ್ಗೊಂಡಿದ್ದರು. ಅವರ ಪುತ್ರಿ ಪಲ್ಲವಿ ಘೋಷಣೆಗಳನ್ನು ಕೂಗುತ್ತಲೇ ಕಣ್ಣೀರು ಸುರಿಸಿದರು.

ಬಿಟಿಡಿಎ ಮುಖ್ಯ ಅಭಿಯಂತರ ಚಂದ್ರಹಾಸ ಬಂಡಿ, ಪುನರ್ವಸತಿ ಅಧಿಕಾರಿ ಪ್ರಶಾಂತ ಬಾರಿಗಿಡದ ಸೇರಿ ಹಿರಿಯ ಅಧಿಕಾರಿಗಳು ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಧರಣಿಯಲ್ಲಿ ಭಾಗವಹಿಸಿದರು. ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಸಹ ಧರಣಿಯಲ್ಲಿ ಪಾಲ್ಗೊಂಡು ಘಟನೆಯನ್ನು ಖಂಡಿಸಿದರು.