ಬೆಳಗಾವಿ: ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತ್ನಿಯನ್ನು ಯಮಪುರಿಗೆ ಕಳುಹಿಸಲು ಸ್ಕೆಚ್ ಹಾಕಿದ ಪತಿರಾಯ ವಿಷ ಕುಡಿಸಿ ಕತ್ತು ಹಿಸುಕಿ ಕೊಲೆ ಮಾಡಿ ಅಪಘಾತವೆಂದು ಬಿಂಬಿಸಲು ಪ್ರಯತ್ನಿಸಿ ಸಿಕ್ಕಿಬಿದ್ದಿರುವ ಘಟನೆ ಗೋಕಾಕ ಗ್ರಾಮೀಣ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ಈ ಬಗ್ಗೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ಎಸ್ಪಿ ರಾಮರಾಜನ್ ಅವರು ಮಾಹಿತಿ ನೀಡಿದರು. ಮೃತಳನ್ನು ಸಾಕವ್ವ ಸಂತೋಷ ಪಟಾಯತ್ (29) ಎನ್ನಲಾಗಿದೆ. ಬಂಧಿತ ಪತಿಯನ್ನು ಶಿಂಧಿಕುರಬೇಟ ಗ್ರಾಮದ ಸಂತೋಷ ರೇವಣ್ಣ ಪಟಾಯತ (33) ಎಂದು ಗುರುತಿಸಲಾಗಿದೆ. ಈತ ಬೇರೊಂದು ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ. ಈ ವಿಚಾರ ಪತ್ನಿಗೆ ತಿಳಿದು ಮನೆಯಲ್ಲಿ ಜಗಳವೂ ಆಗಿತ್ತು. ಅದನ್ನು ಮುಂದುವರೆಸುವುದಿಲ್ಲ ಎಂದು ಪತ್ನಿಗೆ ಹೇಳಿದ್ದ ಸಂತೋಷ ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಪತ್ನಿಯನ್ನೇ ಕೊಲ್ಲುವುದಕ್ಕೆ ಪ್ಲಾನ್ ಮಾಡಿದ್ದಾನೆ ಎಂದರು.
ಜೂ. 12ರಂದು ಅಧಿಕ ಮಾಸದ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಹೋಗಿ ಬರೋಣ ಎಂದು ತನ್ನ ಬೈಕಿನಲ್ಲಿ ಪತ್ನಿ ಕರೆದುಕೊಂಡು ಹೋಗಿದ್ದಾನೆ. ದೇವರ ದರ್ಶನ ಮುಗಿಸಿ ಮನೆಗೆ ವಾಪಸ್ ಬರುವ ವೇಳೆ ಅಂಗಡಿಯೊಂದರಿಂದ ತಂಪು ಪಾನೀಯ ಕೊಂಡು ತಂದು ನಿರ್ಜನ ಪ್ರದೇಶದಲ್ಲಿ ಆ ಬಾಟಲಿಗೆ ಇಲಿ ಪಾಷಾಣ ಹಾಗೂ ಗ್ಲಾಸಿನ ಚೂರು ಹಾಕಿ ಪತ್ನಿಗೆ ಕುಡಿಸಿದ್ದಾನೆ.
ವಿಷ ಪ್ರಾಶನದಿಂದ ನರಳುತ್ತಿದ್ದ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿ ಹೆಣವನ್ನು ರಸ್ತೆ ಅಪಘಾತದಲ್ಲಿ ಬಿದ್ದ ಮಾದರಿಯಲ್ಲಿ ಎಸೆದು ತಾನೇ ಬೈಕ್ ಆಕ್ಸಿಡೆಂಟ್ ಆಗಿರುವುದಾಗಿ 112ಕ್ಕೆ ಕರೆ ಮಾಡಿ ನೆರವು ಕೇಳಿದ್ದಾನೆ. ಸ್ಥಳಕ್ಕೆ ಪೊಲೀಸರು ಬಂದು ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಿದ್ದಾರೆ. ಅಷ್ಟರಲ್ಲಿಯೇ ಸಾಕವ್ವ ಸತ್ತಿರುವುದು ಗೊತ್ತಾಗಿದೆ.
ಮರಣೋತ್ತರ ಪರೀಕ್ಷೆ ವೇಳೆ ವಿಷ ಸೇವನೆ ಹಾಗೂ ಕತ್ತು ಹಿಸುಕಿರುವುದು ಕಂಡು ಬಂದ ಹಿನ್ನೆಲೆ ಪತಿ ಸಂತೋಷನನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಇದೊಂದು ಪೂರ್ವಯೋಜಿತ ಕೊಲೆ ಎಂಬ ರಹಸ್ಯ ಬಯಲಾಗಿದೆ.




















